ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ ಕಾಯಿನ್‌ ಪ್ರಕರಣದ ದಾಖಲೆ ಬಿಡುಗಡೆ ಮಾಡಲು ಸಚಿವ ನಾರಾಯಣಸ್ವಾಮಿ ಸವಾಲು

Last Updated 18 ನವೆಂಬರ್ 2021, 10:29 IST
ಅಕ್ಷರ ಗಾತ್ರ

ರಾಮನಗರ: ‘ಬಿಟ್‌ಕಾಯಿನ್‌ ಅಕ್ರಮ ವಿಚಾರದಲ್ಲಿ ವಿರೋಧ ಪಕ್ಷದವರು ದಾಖಲೆ ಒದಗಿಸಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ. ಕಾಂಗ್ರೆಸ್‌ನವರು ಯಾವುದೇ ವಾಸ್ತವ ವಿಚಾರಗಳ ಕುರಿತು ದಾಖಲೆ ಬಿಡುಗಡೆ ಮಾಡಿ ಮಾತನಾಡಲಿ’ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಸವಾಲು ಹಾಕಿದರು.

ಬಿಡದಿಯಲ್ಲಿ ಗುರುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಬಿಟ್‌ಕಾಯಿನ್‌ ಹಗರಣದ ಬಗ್ಗೆ ನನ್ನಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಈಗಾಗಲೇ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಹ ನನ್ನಲ್ಲಿ ದಾಖಲೆ ಇದೆ ಎಂದು ಹೇಳಿದ್ದರು. ಆದರೆ ಬಿಡುಗಡೆ ಮಾಡಲಿಲ್ಲ. ಕಾಂಗ್ರೆಸ್‌ನವರು ತಮ್ಮ ಬ್ಯಾಗಿನಲ್ಲಿ ಹಾವಿದೆ ಎಂದು ನಮ್ಮನ್ನು ಸುಮ್ಮನೆ ಹೆದರಿಸುವುದು ಸರಿಯಲ್ಲ. ರಾಜಕಾರಣಕ್ಕಾಗಿ ರಾಜಕಾರಣ ಮಾಡುವುದನ್ನು ಬಿಡಬೇಕು. ಈ ವಿಚಾರದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸೂಕ್ತ ದಾಖಲೆ ಒದಗಿಸಿದರೆ, ತಪ್ಪಿತಸ್ಥರು ಸ್ವಪಕ್ಷೀಯರೇ ಆಗಿದ್ದರೂ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ’ ಎಂದು ಹೇಳಿದರು.

ಬಿಟ್‌ಕಾಯಿನ್ ಹಗರಣ ಕುರಿತು ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ‘ಆತ ಒಬ್ಬ ವಿರೋಧ ಪಕ್ಷದ ನಾಯಕನ ಮಗನಾಗಿ, ಮಾಜಿ ಮಂತ್ರಿಯಾಗಿ ಹೇಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಬೇರೆ ಜನಪ್ರತಿನಿಧಿಗೆ ಸವಾಲು ಹಾಕುವುದು ಆತನಿಗೆ ಶೋಭೆ ತರುವುದಿಲ್ಲ. ಈ ಮಾತುಗಳನ್ನು ನಿಲ್ಲಿಸಿ ಇನ್ನಾದರೂ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಲಿ’ ಎಂದು ಸಲಹೆ ನೀಡಿದರು.

ಕೇಂದ್ರದಿಂದ ಪರಿಶೀಲನೆ: ‘ಬಿಟ್‌ಕಾಯಿನ್‌ಗೆ ಮಾನ್ಯತೆ ಸಂಬಂಧ ಕೇಂದ್ರ ಸರ್ಕಾರದಿಂದ ಪರಿಶೀಲನೆ ನಡೆದಿದೆ. ಇದನ್ನು ಕಾಯಿನ್‌ ಎಂದು ಪರಿಗಣಿಸಬೇಕೆ ಬೇಡವೇ, ಆದಾಯ ತೆರಿಗೆ ವ್ಯಾಪ್ತಿಗೆ ತರಬೇಕೇ ಬೇಡವೇ ಎಂಬ ಬಗ್ಗೆ ತಜ್ಞರು ವರದಿ ನೀಡಲಿದ್ದಾರೆ. ನಂತರ ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT