ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ

ಮಂಗಳವಾರ, ಏಪ್ರಿಲ್ 23, 2019
29 °C
ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣ ಪ್ರಚಾರಕ್ಕೆ ಯೋಗೇಶ್ವರ್‌ ಸಾಥ್‌

ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ

Published:
Updated:
Prajavani

ರಾಮನಗರ: ವಂದಾರಗುಪ್ಪೆ ರೈಲ್ವೆ ಗೇಟ್‌ ಬಳಿಯಿಂದ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರೋಡ್ ಶೋ ಆರಂಭಗೊಂಡಾಗ ಗುರುವಾರ ಬೆಳಿಗ್ಗೆ 9.30 ಆಗಿತ್ತು.

ನಿಗದಿತ ವೇಳಾಪಟ್ಟಿಗಿಂತ ಒಂದು ಗಂಟೆ ತಡವಾಗಿ ಪ್ರಚಾರ ಆರಂಭಗೊಂಡಿದ್ದಕ್ಕೆ ತಳಮಳಕೊಂಡಂತೆ ಕಂಡ ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣ, ಅದನ್ನು ತೋರ್ಪಡಿಸದೆಯೇ ನಗುಮುಖದಿಂದಲೇ ಮುನ್ನಡೆದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಬಿಜೆಪಿಯು ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದು, ದಿನವಿಡೀ ಹಳ್ಳಿಗಳ ಸುತ್ತಾಟದ ಮೂಲಕ ಮತಯಾಚನೆ ಮಾಡಲಾಯಿತು.

ಬೆಳಗ್ಗೆ ಮೊಟ್ಟಮೊದಲಿಗೆ ಕೆಂಗಲ್ ಆಂಜನೇಯಸ್ವಾಮಿಯ ದೇಗುಲದಲ್ಲಿ ಪೂಜೆ ಸಲ್ಲಿಸಿ, ಕೈಯಲ್ಲಿ ಪ್ರಸಾದ ಹಿಡಿದು ಹೊರಬಂದ ಅಶ್ವಥ್‌ ಪತ್ರಕರ್ತರಿಗೆ ಎದುರಾದರು. ಏನೇನು ಸಿದ್ಧತೆ? ಹೇಗಿದೆ ಪ್ರಚಾರ? ಎಂಬೆಲ್ಲ ಪ್ರಶ್ನೆಗಳಿಗೆ ಗಡಿಬಿಡಿಯಿಂದಲೇ ಉತ್ತರಿಸಿದರು.

‘ಕಡೆ ಗಳಿಗೆಯಲ್ಲಿ ಟಿಕೆಟ್ ನೀಡಿದ್ದರೂ ಬಿಜೆಪಿಯ ನನ್ನೆಲ್ಲ ಪರಿವಾದವರೂ ಸೇರಿ ಒಟ್ಟಾಗಿ ಪ್ರಚಾರ ನಡೆಸುತ್ತಿದ್ದೇವೆ. ಎದುರಾಳಿ ಪಕ್ಷದವರು ನಾನು ಕ್ಷೇತ್ರಕ್ಕೆ ಹೊಸಬ, ಹೊರಗಿನವನು ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ನಾನು ರಾಜರಾಜೇಶ್ವರಿ ನಗರದಲ್ಲೇ ಇರುವವನು’ ಎಂಬ ಸ್ಪಷ್ಟನೆ ನೀಡಿದರು.

‘ಕಳೆದ ಬಾರಿ ಯೋಗೇಶ್ವರ್‌ ಸುರೇಶ್‌ ಜೊತೆ ಇದ್ದರು. ಈ ಬಾರಿ ಅವರು ಬಿಜೆಪಿ ಜೊತೆಗಿರುವುದೇ ನಮಗೆ ದೊಡ್ಡ ಅಸ್ತ್ರ’ ಎಂದು ಬೀಗಿದರು.

ಅಲ್ಲಿಂದ ಪ್ರಚಾರದ ರಥ ಏರಿದ ಅವರು ವಂದಾರಗುಪ್ಪೆ ಗ್ರಾಮದಲ್ಲಿ ರೋಡ್‌ಶೋ ಮೂಲಕ ಮತಭೇಟೆ ಆರಂಭಿಸಿದರು. ಹೆದ್ದಾರಿಯಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಬೈಕ್‌ ರ್‍ಯಾಲಿ ಮೂಲಕ ಚನ್ನಪಟ್ಟಣ ನಗರಕ್ಕೆ ತೆರಳಿ ಪ್ರಚಾರ ನಡೆಸಿದರು.

ಬಳಿಕ ಹೊಂಗನೂರು, ಬಿ.ವಿ. ಹಳ್ಳಿ, ಸಿಂಗರಾಜಪುರ, ಕೋಡಂಬಳ್ಳಿ, ಬಾಣಗಹಳ್ಳಿಯಲ್ಲಿ ಪ್ರಚಾರ ನಡೆಯಿತು. ಮಧ್ಯಾಹ್ನದ ಬಿಸಿಲಲ್ಲಿ ಸೋಗಾಲ, ಇಗ್ಗಲೂರು, ಸುಳ್ಳೇರಿ, ಮಳೂರುಪಟ್ಟಣಕ್ಕೆ ಭೇಟಿ ಕೊಟ್ಟು ಮತಯಾಚಿಸಿದರು. ಬೈರಾಪಟ್ಟಣ, ಮುದಗೆರೆ ಗೇಟ್‌ನಲ್ಲಿ ರೋಡ್‌ ಶೋ ಮೂಲಕ ದಿನದ ಪ್ರಚಾರವು ಅಂತ್ಯಗೊಂಡಿತು.

ಎಲ್ಲ ಹಳ್ಳಿಗಳನ್ನು ಸುತ್ತುವುದು ಆಗದ ಮಾತು ಎಂಬ ಕಾರಣಕ್ಕೆ ಜನಸಂಖ್ಯೆ ಹೆಚ್ಚಿರುವ ಗ್ರಾಮಗಳನ್ನೇ ಪ್ರಚಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸುಡುಬಿಸಿಲನ್ನು ಲೆಕ್ಕಿಸದೇ ಮತಯಾಚನೆ ನಡೆಯಿತು. ನಡುನಡುವೆ ದೇವಸ್ಥಾನಗಳಿಗೆ ಭೇಟಿಯೂ ಇತ್ತು.

ಮೋದಿಯೇ ಅಸ್ತ್ರ: ವಿವಿಧೆಡೆ ಚುನಾವಣಾ ಭಾಷಣ ಮಾಡಿದ ಅಶ್ವಥ್‌ ಕಾಂಗ್ರೆಸ್ ಅಭ್ಯರ್ಥಿಯನ್ನು ಟೀಕಿಸುವ ಜೊತೆಗೆ ಮೋದಿ ಹೆಸರಿನಲ್ಲಿ ಮತಯಾಚನೆ ಮಾಡಿದರು.

‘ಕ್ಷೇತ್ರದಲ್ಲಿ ಅಭಿವೃದ್ಧಿ ಎನ್ನುವುದು ಗೊತ್ತೇ ಇಲ್ಲ. ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ಬಂದಿದ್ದರೂ ಇಲ್ಲಿನ ಸಂಸದರು ಸದ್ಬಳಕೆ ಮಾಡಿಕೊಂಡಿಲ್ಲ. ಬದಲಾಗಿ ವೈಯಕ್ತಿಕ ಅಭಿವೃದ್ಧಿ ಹೆಚ್ಚಾಗಿದೆಯೇ ಹೊರತು ಕ್ಷೇತ್ರ ಅಭಿವೃದ್ಧಿ ಆಗಿಲ್ಲ’ ಎಂದು ಟೀಕಿಸಿದರು.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಬೇಕು’ ಎಂದು ಮತದಾರರಿಗೆ ಕೈ ಮುಗಿದರು.

ಯೋಗೇಶ್ವರ್‌ ಸಾಥ್‌: ತಮ್ಮದೇ ಕ್ಷೇತ್ರದಲ್ಲಿ ನಡೆದ ಪ್ರಚಾರದ ಸಾರಥ್ಯ ವಹಿಸಿದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಗೆ ಸಾಥ್‌ ನೀಡಿದರು. ತಾವೂ ಸಮ್ಮಿಶ್ರ ಸರ್ಕಾರದ ವಾಗ್ದಾಳಿ ನಡೆಸಿ, ನೀರಾವರಿ ಯೋಜನೆಗಳ ಲಾಭದ ನೆನಪು ಮಾಡಿಕೊಟ್ಟು ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

**

ಮೆರವಣಿಗೆಯಲ್ಲಿ ಮೋದಿ ಮುಖವಾಡ
ವಿವಿಧೆಡೆ ಹಮ್ಮಿಕೊಂಡಿದ್ದ ಬೈಕ್‌ ರ್‍ಯಾಲಿ, ಮೆರವಣಿಗೆಯ ಸಂದರ್ಭ ಕಾರ್ಯಕರ್ತರು ಮೋದಿ ಮುಖವಾಡ ಧರಿಸಿ ಗಮನ ಸೆಳೆದರು. ಮೋದಿ ಪರ ಘೋಷಣೆಯನ್ನೂ ಕೂಗಿದರು. ಅಭ್ಯರ್ಥಿ ಹೆಸರಿಗಿಂತ ಪ್ರಧಾನಿಯ ಹೆಸರೇ ಹೆಚ್ಚು ಪ್ರತಿಧ್ವನಿಸುತಿತ್ತು!

**
ಲೋಕಸಭೆಗೆ ಮೊದಲ ಸ್ಪರ್ಧೆ
ಸದ್ಯ ಬೆಂಗಳೂರು ನಿವಾಸಿಯಾಗಿರುವ 59 ವರ್ಷ ವಯಸ್ಸಿನ ಅಶ್ವಥ್‌ 1980ರಿಂದಲೂ ಬಿಜೆಪಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1999 ಹಾಗೂ 2004ರಲ್ಲಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡರು.

2010ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ 6 ವರ್ಷ ಕಾಲ ಸೇವೆ ಸಲ್ಲಿಸಿದ್ದರು. ನಾಲ್ಕು ವರ್ಷ ಕಾಲ ನೆರೆಯ ಮಂಡ್ಯ ಜಿಲ್ಲೆಯ ಬಿಜೆಪಿ ಉಸ್ತುವಾರಿಯಾಗಿದ್ದರು. ಇದೀಗ ಮೊದಲ ಬಾರಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !