ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಅಭಿವೃದ್ಧಿಗೆ ಗಣಿಗಾರಿಕೆಯೇ ಸಾಕ್ಷಿ: ಅಶ್ವಥ್ ನಾರಾಯಣಗೌಡ

ವಿವಿಧೆಡೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ
Last Updated 15 ಏಪ್ರಿಲ್ 2019, 14:39 IST
ಅಕ್ಷರ ಗಾತ್ರ

ರಾಮನಗರ: ‘ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ, ಅವರು ಹೇಗೆಲ್ಲಾ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂಬುದನ್ನು ಕ್ಷೇತ್ರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯೇ ಹೇಳುತ್ತದೆ’ ಎಂದು ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಹೇಳಿದರು.

ತಾಲ್ಲೂಕಿನ ಕೂಟಗಲ್ ಹೋಬಳಿಯಲ್ಲಿ ಸೋಮವಾರ ಬೈಕ್‌ ರ್‍ಯಾಲಿ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು. ಕ್ಷೇತ್ರದ ಮತದಾರರು ಡಿ.ಕೆ ಸಹೋದರರ ದಬ್ಬಾಳಿಕೆ, ದೌರ್ಜನ್ಯದಿಂದ ಮುಕ್ತಿ ಹೊಂದಲು ಬದಲಾವಣೆ ಬಯಸಿದ್ದಾರೆ. ಚುನಾವಣೆಯಲ್ಲಿ ಅದು ಸಾಬೀತಾಗಲಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸಾಕಷ್ಟು ನೋವು ಅನುಭವಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ, ಸರ್ಕಾರದ ಸವಲತ್ತುಗಳನ್ನು ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡಲಾಗಿದೆ. ಆದರೆ ನಾವು ಆ ರೀತಿ ಮಾಡಿಲ್ಲ. ಇಲ್ಲಿ ಆಗಿರುವ ಅಭಿವೃದ್ಧಿಗಳಲ್ಲಿ ಕೇಂದ್ರ ಸರ್ಕಾರದ್ದೇ ಹೆಚ್ಚಿನ ಪಾಲಿದೆ. ಅದನ್ನು ಡಿ.ಕೆ.ಸುರೇಶ್ ಅವರೇ ಜನತೆಗೆ ತಿಳಿಸಬೇಕು ಎಂದರು.

ದೇಶದ ಅಭಿವೃದ್ದಿ ವಿಚಾರ ಇರಬಹುದು, ಭದ್ರತೆ ವಿಚಾರ ಇರಬಹುದು, ಅದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂಚೂಣಿಯಲ್ಲಿ ನಿಂತು ಮಾಡುತ್ತಿದೆ. ಸಧೃಡವಾದ ಸ್ಥಿರ ಸರ್ಕಾರವನ್ನು ಈ ದೇಶಕ್ಕೆ ನೀಡಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಇರುವ ಸಮ್ಮಿಶ್ರ ಸರ್ಕಾರವು ಅಧಿಕಾರಕ್ಕಾಗಿ ವಿಧಾನ ಸೌಧದಲ್ಲಿ ಮಾತ್ರ ದೋಸ್ತಿಯಾಗಿದೆ. ದಿನ ನಿತ್ಯ ಜಗಳ, ಕಚ್ಚಾಟದಲ್ಲಿ ತೊಡಗಿದೆ. ಮಂಡ್ಯದಲ್ಲಿ ಹೊಡೆದಾಟ, ಹಾಸನದಲ್ಲಿ ಕಚ್ಚಾಟ, ತುಮಕೂರಿನಲ್ಲಿ ಬಡಿದಾಟ, ಕೋಲಾರದಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ಜನರಿಗೆ ಒಳ್ಳೆ ಸರ್ಕಾರ ಕೊಡುತ್ತೇವೆಂದು ಹೇಳಿ ದ್ರೋಹ ಬಗೆದಿದ್ದಾರೆ ಎಂದು ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್, ಉಪಾಧ್ಯಕ್ಷ ಎಸ್.ಆರ್. ನಾಗರಾಜು, ಮುಖಂಡರಾದ ರಂಗಧಾಮಯ್ಯ, ಸಿದ್ದೇಗೌಡ, ಚನ್ನಪ್ಪ, ರಮೇಶ್, ದೇವರಾಜು, ವೀರಭದ್ರಯ್ಯ, ಶಿವು, ಪಿ. ರವಿಕುಮಾರ್, ನಾಗೇಶ್ ಇದ್ದರು.
ಬೈಕ್ ರ್‍ಯಾಲಿ: ಅಶ್ವಥ್ ನಾರಾಯಣಗೌಡ ಪರವಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸೋಮವಾರ ಬೈಕ್ ರ್‍ಯಾಲಿ ನಡೆಸಿ ಮತಯಾಚನೆ ಮಾಡಿದರು.

ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ 'ಮೋದಿ ಮತ್ತೊಮ್ಮೆ' ಘೋಷಣೆ ಕೂಗುತ್ತಾ ಬೈಕ್ ರ್ಯಾಲಿ ನಡೆಸಿದರು. ಯುವ ಮೋರ್ಚಾ ಅಧ್ಯಕ್ಷ ವರದರಾಜಗೌಡ, ಮುಖಂಡರಾದ ಕಿರಣ್, ಅನಿಲ್, ನಾಗೇಶ್, ಸುಗ್ಗನಹಳ್ಳಿ ಚಿಕ್ಕಣ್ಣ, ಕಾರ್ತಿಕ್, ಮಹದೇವ, ಕೃಷ್ಣ ಇದ್ದರು.

ಕೈಲಾಂಚ ಹೋಬಳಿಯಲ್ಲೂ ಪ್ರಚಾರ

‘ಮೋದಿ ಮತ್ತೆ ದೇಶದ ಪ್ರಧಾನಿಯಾಗುವುದು ನಿಶ್ಚಿತ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಹೇಳಿದರು.

ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಅವರ ಪರ ಚುನಾವಣ ಪ್ರಚಾರ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಿಂದೆಂದಿಗಿಂತಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ಜನರಿಂದ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ಅಪವಿತ್ರ ಮೈತ್ರಿ ಬಗ್ಗೆ ಸಾಮಾನ್ಯ ಜನರಲ್ಲೂ ಬೇಸರ ಉಂಟು ಮಾಡಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಆರ್. ನಾಗರಾಜು, ಪ್ರಧಾನ ಕಾರ್ಯದರ್ಶಿ ಮುರಳೀಧರ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕೈಲಾಂಚ ಹೋಬಳಿ ಘಟಕದ ಅಧ್ಯಕ್ಷ ಪ್ರಶಾಂತ್, ಮುಖಂಡರಾದ ಪಿ. ರವಿಕುಮಾರ್, ಬಿ. ನಾಗೇಶ್, ಭರತರಾಜ್, ಪ್ರಭು, ವೈರಮುಡಿಗೌಡ, ಲೋಕೇಶ್, ನಂದೀಶ್, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT