ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಸಂಸದ ಸುರೇಶ್‌ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ದೂರು: ಅಶ್ವತ್ಥನಾರಾಯಣ

ರಾಮನಗರ ‘ರಿಪಬ್ಲಿಕ್‌ ಆಫ್‌ ಡಿಕೆಎಸ್‌’ ಆಗಲು ಬಿಡುವುದಿಲ್ಲ: ಅಶ್ವತ್ಥನಾರಾಯಣ
Last Updated 2 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ರಾಮನಗರ: ‘ಸಂಸದ ಡಿ.ಕೆ. ಸುರೇಶ್‌ ಅಧಿಕಾರಿಗಳ ಮೇಲೆ ಅರೆಹುಚ್ಚನ ರೀತಿ ಕೂಗಾಡಿರುವುದು ಸರಿಯಲ್ಲ. ಅವರು ಸಂಬಂಧಿಸಿದ ಅಧಿಕಾರಿಗಳ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕಳೆದ ಶನಿವಾರ ರಾಮನಗರದಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದರು ಅಧಿಕಾರಿಗಳ ವಿರುದ್ಧ ಮನಬಂದಂತೆ ಮಾತನಾಡಿದ್ದಾರೆ. ಕಳೆದ ಆರು ತಿಂಗಳ ಕಾಲ ಅಣ್ಣನ ಜೈಲು–ಬೇಲ್‌ ಎಂದು ಓಡಾಡಿಕೊಂಡಿದ್ದವರಿಗೆ ಈಗ ದಿಢೀರ್‌ ಎಂದು ಜಿಲ್ಲೆ ನೆನಪಾಗಿದೆ. ಅಧಿಕಾರಿಗಳು ತನ್ನ ಹಿಡಿತಕ್ಕೆ ಸಿಗುತ್ತಿಲ್ಲ ಎಂಬ ಹತಾಶೆಯಿಂದ ಹೀಗೆ ಮಾತನಾಡಿದ್ದಾರೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆ ಅಲ್ಲ ಎಂಬುದನ್ನು ಅವರು ಅರಿತಿರಬೇಕು’ ಎಂದರು.

‘ಈ ಹಿಂದೆ ಶಾಸಕ ಡಿ.ಕೆ. ಶಿವಕುಮಾರ್ ಕಬ್ಬಾಳಿನಲ್ಲಿ ಎಸ್ಪಿ ಅನೂಪ್‌ ಶೆಟ್ಟಿ ವಿರುದ್ಧ ಹೀಗೆಯೇ ಮಾತನಾಡಿದ್ದರು. ತಮ್ಮ ದಂದೆಗೆ ಸಹಕಾರ ನೀಡದ ಅಧಿಕಾರಿಗಳನ್ನು ಟಾರ್ಗೆಟ್‌ ಮಾತನಾಡುತ್ತಿದ್ದಾರೆ. ಸಹೋದರರಿಬ್ಬರು ರಾಮನಗರವನ್ನು ‘ರಿಪಬ್ಲಿಕ್ ಆಫ್‌ ಡಿಕೆಎಸ್‌’ ಮಾಡಲು ಹೊರಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕನಕಪುರದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯಲ್ಲಿ ಡಿ.ಕೆ. ಶಿವಕುಮಾರ್, ಅವರ ಪತ್ನಿ ಉಪಾ, ಸಹೋದರ ಡಿ.ಕೆ. ಸುರೇಶ್‌ ಸೇರಿದಂತೆ 64 ಮಂದಿ ತಪ್ಪಿತಸ್ಥರು ಎಂದು ಯು.ವಿ. ಸಿಂಗ್‌ ವರದಿ ಹೇಳಿದೆ. ವರದಿ ಅನುಷ್ಠಾನದ ಸಂಬಂಧ ನ್ಯಾಯಾಲಯವು ಸರ್ಕಾರದಿಂದ ವರದಿ ಕೇಳಿದ್ದು, ಡಿಸೆಂಬರ್‌ 5ಕ್ಕೆ ಅಂತಿಮ ವಿಚಾರಣೆ ನಡೆಯಲಿದೆ’ ಎಂದರು. ‘ಬಿ.ಎಸ್‌ ಯಡಿಯೂರಪ್ಪ ಅವರು ಡಿ.ಕೆ. ಸಹೋದರರ ಮೇಲೆ ಅನುಕಂಪ ಹೊಂದಿಲ್ಲ. ನ್ಯಾಯಾಲಯದ ಆದೇಶ ಆಧರಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಜಾರಿಗೆ ತಂದಿದ್ದರು. ಜಿಲ್ಲೆಯಲ್ಲಿನ ಒಟ್ಟು 2.71 ಲಕ್ಷ ರೈತ ಕುಟುಂಬಗಳ ಪೈಕಿ 1.39 ಲಕ್ಷ ರೈತರಿಗೆ ಮಾತ್ರ ಈ ಯೋಜನೆಯ ಲಾಭ ತಲುಪಿದೆ. ಸಂಸದರು ಇದನ್ನು ಫಾಲೋ ಅಪ್‌ ಮಾಡಿ ಸರ್ಕಾರಕ್ಕೆ ಪತ್ರ ಬರೆಯಲಿ. ದೂರು ಕೊಟ್ಟರೆ ಸರ್ಕಾರ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿದೆ’ ಎಂದರು.

ಬಿಜೆಪಿ ಸರ್ಕಾರ ವರ್ಗಾವಣೆಯಲ್ಲಿ ದಂದೆಯಲ್ಲಿ ತೊಡಗಿದ್ದು, ಅಧಿಕಾರಿಗಳು ಜಿಲ್ಲೆಗೆ ದುಡ್ಡು ಕೊಟ್ಟು ಬಂದಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು ‘ಸಂಸದರು ಈ ಆರೋಪ ಮಾಡುವ ಮುನ್ನ ರಾಮನಗರದ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ, ಕನಕಪುರ ತಹಶೀಲ್ದಾರ್‌ ಆನಂದಯ್ಯ ಯಾರ ಕಡೆಯವರು ಎಂಬುದನ್ನು ತಾವೇ ಪ್ರಶ್ನಿಸಿಕೊಳ್ಳಲಿ. ಈ ಅಧಿಕಾರಿಗಳ ವಿರುದ್ಧ ಸಾಕಷ್ಟು ಆರೋಪ ಇದ್ದರೂ ಅವರೇ ರಕ್ಷಣೆ ಮಾಡುತ್ತಾ ಬಂದಿದ್ದಾರೆ’ ಎಂದು ತಿರುಗೇಟು ನೀಡಿದರು. ಈ ಅಧಿಕಾರಿಗಳ ವಿರುದ್ಧ ತಾವೇ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.

ಬಿಜೆಪಿ ಮುಖಂಡರಾದ ಪ್ರವೀಣ್‌, ಪದ್ಮನಾಭ, ರವಿಕುಮಾರ್, ಮಂಜು, ಜಯಣ್ಣ, ಸುರೇಶ್, ಭರತ್‌ರಾಜ್‌, ರುದ್ರದೇವರು ಇದ್ದರು.

ಎಸ್ಪಿ ವರ್ಗಾವಣೆ ಇಲ್ಲ

ರಾಮನಗರ ಎಸ್ಪಿ ಅನೂಪ್‌ ಶೆಟ್ಟಿ ವರ್ಗಾವಣೆಗೆ ಲಾಬಿ ನಡೆದಿದೆ ಎಂಬ ಆರೋಪಗಳ ಬಗ್ಗೆ ಮಾತನಾಡಿದ ಅಶ್ವತ್ಥ ನಾರಾಯಣ ‘ಅವರು ಎಸ್ಪಿಯಾಗಿ ಬಂದ ಮೇಲೆ ಜಿಲ್ಲೆಯಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಬಿಜೆಪಿ ಸರ್ಕಾರ ಸದ್ಯಕ್ಕೆ ಅವರನ್ನು ವರ್ಗಾವಣೆ ಮಾಡುವುದಿಲ್ಲ. ಹಾಗೊಂದು ವೇಳೆ ಸರ್ಕಾರದ ಮೇಲೆ ಒತ್ತಡ ಬಂದರೂ ನಾವು ಮುಖ್ಯಮಂತ್ರಿಗೆ ಮನವರಿಕೆ ಮಾಡುತ್ತೇವೆ’ ಎಂದರು.

ಸ್ಪೀಕರ್‌ಗೆ ದೂರು

ಸಂಸದ ಡಿ.ಕೆ. ಸುರೇಶ್‌ ಅಧಿಕಾರಿಗಳ ಮೇಲೆ ಗುಂಡಾ ವರ್ತನೆ ತೋರಿದ್ದಾರೆ. ಅವರ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ದೂರು ನೀಡಲಾಗುವುದು ಎಂದುಬಿಜೆಪಿ ವಕ್ತಾರಅಶ್ವತ್ಥ ನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT