ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ರಾಜಕಾರಣ ರಂಗು ರಂಗು

ದೇವೇಗೌಡರ ಆಶೀರ್ವಾದ ಬೇಡಿದ ಸುರೇಶ್‌: ಕನಕಪುರದಲ್ಲಿ ಕಚೇರಿ ತೆರೆದ ಬಿಜೆಪಿ
Last Updated 20 ಮಾರ್ಚ್ 2019, 19:59 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಜಕಾರಣ ದಿನ ಕಳೆದಂತೆ ರಂಗೇರತೊಡಗಿದೆ. ಉಭಯ ಪಕ್ಷಗಳ ನಾಯಕರು ಕ್ಷೇತ್ರ ವ್ಯಾಪ್ತಿಯಲ್ಲಿನ ಮುಖಂಡರು ಹಾಗೂ ಮತದಾರರನ್ನು ಖುದ್ದಾಗಿ ಭೇಟಿಯಾಗಿ ಮನವೊಲಿಸುತ್ತಿದ್ದಾರೆ.

ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಡಿ.ಕೆ ಸುರೇಶ್‌ ಬುಧವಾರ ಬೆಂಗಳೂರಿನ ಪದ್ಮನಾಭನಗರದಲ್ಲಿ ಇರುವ ಎಚ್‌.ಡಿ. ದೇವೇಗೌಡರ ನಿವಾಸಕ್ಕೆ ತೆರಳಿ, ಗೌಡರ ಕಾಲಿಗೆರಗಿ ಆಶೀರ್ವಾದ ಬೇಡಿದ್ದಾರೆ. ‘ಇಂದು ಮತ್ತು ಮುಂದೆಯೂ ಹಿರಿಯರ ಆಶೀರ್ವಾದ ನನಗೆ ಸಿಗಲಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಅದುವೇ ನನಗೆ ಸ್ಪೂರ್ತಿ’ ಎಂದು ಅವರು ಹೇಳಿದ್ದಾರೆ.

ಅಣ್ಣನ ರಂಗಪ್ರವೇಶ: ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯನ್ನು ಮನಗಂಡು ಸಚಿವ ಡಿ.ಕೆ. ಶಿವಕುಮಾರ್ ತಮ್ಮನ ಪರವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಸಂಚಾರ ಕೈಗೊಂಡ ಅವರು ಅಲ್ಲಿನ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕ ರಂಗನಾಥ್ ಜೊತೆಗೂಡಿ ಮಾಜಿ ಶಾಸಕ ನಾಗರಾಜಯ್ಯ ಸೇರಿದಂತೆ ಹಲವರನ್ನು ಭೇಟಿ ಮಾಡಿದ ಶಿವಕುಮಾರ್ ಪಕ್ಷ ಸಂಘಟನೆಯ ಸಿದ್ಧತೆಗಳ ಮಾಹಿತಿ ಹಂಚಿಕೊಂಡಿದ್ದಾರೆ.

ಕಾರ್ಯಕರ್ತರಿಗೆ ಆದೇಶ: ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭ ಅಲ್ಲಿನ ಜೆಡಿಎಸ್ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸುರೇಶ್‌ ಕಾಂಗ್ರೆಸ್‌ ಕಾರ್ಯಕರ್ತರಿಗೆ ಖಡಕ್‌ ಸೂಚನೆ ನೀಡಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರೂ ಸ್ಥಳೀಯವಾಗಿ ಕಾರ್ಯಕರ್ತರಲ್ಲಿ ಹೊಂದಾಣಿಕೆ ಆಗಿಲ್ಲ. ಒಬ್ಬರು ಪಾಲ್ಗೊಳ್ಳುವ ಕಾರ್ಯಕ್ರಮದ ವೇದಿಕೆಯಲ್ಲಿ ಇನ್ನೊಬ್ಬರು ಕಾಣಿಸಿಕೊಳ್ಳುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ನಾಯಕರ ಹೊಂದಾಣಿಕೆ ಆದೇಶವು ಕಾರ್ಯಕರ್ತರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ಕನಕಪುರಕ್ಕೆ ಸಿಪಿವೈ ಪ್ರವೇಶ: ಬಿಜೆಪಿ ನಾಯಕರು ‘ರಿಪಬ್ಲಿಕ್‌ ಆಫ್‌ ಕನಕಪುರ’ ಎಂದೇ ಕರೆಯಲ್ಪಡುವ ಕನಕಪುರ ನಗರದಲ್ಲಿ ಪಕ್ಷದ ಕಚೇರಿ ತೆರೆದು ಪ್ರಚಾರಕ್ಕೆ ಚಾಲನೆ ನೀಡಿರುವುದು ಸದ್ಯದ ಅಚ್ಚರಿಯ ಬೆಳವಣಿಗೆ. ಈ ಮೂಲಕ ಡಿಕೆಶಿ–ಯೋಗೇಶ್ವರ್‌ ನಡುವಿನ ರಾಜಕೀಯ ವೈಷಮ್ಯ ಮತ್ತೊಂದು ತಿರುವು ಪಡೆದಿದೆ.

ಕಳೆದ ಕೆಲವು ಚುನಾವಣೆಗಳಿಂದಲೂ ಕನಕಪುರ ಕ್ಷೇತ್ರವು ಬಿಜೆಪಿ ಪಾಲಿಗೆ ಇದ್ದೂ ಇಲ್ಲ ಎಂಬಂತೆ ಇದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಇತ್ತ ಮುಖ ಮಾಡಲಿಲ್ಲ. ಇಲ್ಲಿ ಕಮಲ ಪಾಳಯದ ಚಟುವಟಿಕೆಗಳೂ ಕಳೆಗುಂದಿವೆ. ಇಂತಹ ಹೊತ್ತಿನಲ್ಲಿ ಕಚೇರಿ ತೆರೆಯುವ ಮೂಲಕ ಬಿಜೆಪಿಯು ತನ್ನ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಪ್ರಯತ್ನ ಮಾಡಿದೆ.

ಅಭ್ಯರ್ಥಿಯದ್ದೇ ಗೊಂದಲ:ಸಿ.ಪಿ. ಯೋಗೇಶ್ವರ್‌ ಈಗಾಗಲೇ ರಾಮನಗರ ಜಿಲ್ಲೆಯ ನಾಲ್ಕೂ ತಾಲ್ಲೂಕಿನಲ್ಲೂ ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೇ ಅಭ್ಯರ್ಥಿಯಾಗುತ್ತಾರ ಎಂಬ ಬಗ್ಗೆ ಖಾತ್ರಿ ಇಲ್ಲ. ಸಿಪಿವೈ ಈಗಲೂ ರಾಜ್ಯ ರಾಜಕಾರಣದ ಬಗ್ಗೆಯೇ ಒಲವು ತೋರುತ್ತಿದ್ದು, ಪಕ್ಷದ ಕಾರ್ಯಕರ್ತರಲ್ಲಿನ ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಯೋಗೇಶ್ವರ್‌ ಬದಲಿಗೆ ಅವರ ಪುತ್ರಿ ನಿಶಾರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎನ್ನುವ ಸುದ್ದಿಯು ಹೊಸತೊಂದು ಸಂಚಲನ ಮೂಡಿಸಿದೆ. ಆದರೆ ಪಕ್ಷದ ಮೂಲಗಳು ಇದನ್ನು ಖಚಿತಪಡಿಸಿಲ್ಲ. ಯೋಗೇಶ್ವರ್‌ ಓಡಾಟ ನೋಡಿದರೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT