ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ಅವಹೇಳನಕ್ಕೆ ಬಿಜೆಪಿ ಆಕ್ರೋಶ:ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಐಜೂರು ವೃತ್ತದಲ್ಲಿ ರಸ್ತೆ ತಡೆದು ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
Published 23 ಆಗಸ್ಟ್ 2024, 7:15 IST
Last Updated 23 ಆಗಸ್ಟ್ 2024, 7:15 IST
ಅಕ್ಷರ ಗಾತ್ರ

ರಾಮನಗರ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಕಾಂಗ್ರೆಸ್ ಪಕ್ಷದವರು ಅವಹೇಳನ ಮಾಡಿ ಅವಮಾನಿಸಿದ್ದಾರೆ ಎಂದು ಆರೋಪಿಸಿ, ಬಿಜೆಪಿ–ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಎರಡೂ ಪಕ್ಷಗಳ ಕಾರ್ಯಕರ್ತರು ರಾಜ್ಯ ಸರ್ಕಾರ, ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿರುದ್ಧ ಘೋಷಣೆ ಹಾಗೂ ಧಿಕ್ಕಾರ ಕೂಗಿದರು. ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯನ್ನು ಕೆಲ ಹೊತ್ತು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು, ಮುಖ್ಯಮಂತ್ರಿ ವಿರುದ್ಧ ಕೇಳಿ ಬಂದಿರುವ ಆರೋಪದ ಕುರಿತು ಖಾಸಗಿ ವ್ಯಕ್ತಿ ನೀಡಿದ ದೂರಿನ ಮೇರೆಗೆ ತಮ್ಮ ವಿವೇಚನೆ ಬಳಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್‌ನವರು ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ರಾಜ್ಯಪಾಲರ ತೇಜೋವಧೆ ಮಾಡುವಂತಹ ಹೇಳಿಕೆ ನೀಡುತ್ತಿರುವ ಸರ್ಕಾರದ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ಜಾತಿ ನಿಂದನೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಅಗೌರವ ತೋರುವವರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆ ಘನತೆ ಅರಿಯದ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಅವಹೇಳನಕಾರಿಯಾಗಿ ಟೀಕೆಗಳನ್ನು ಮಾಡುತ್ತಾ, ಪ್ರತಿಕೃತಿ ದಹಿಸುತ್ತಿದ್ದಾರೆ. ಮುಖ್ಯಮಂತ್ರಿ ಮೇಲೆ ಬಂದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿರುವ ಅಧಿಕಾರ. ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಷಯದಲ್ಲಿ ಅಂದಿನ ರಾಜ್ಯಪಾಲರು ಆದೇಶ ನೀಡಿದ್ದರು ಎಂದು ಹೇಳಿದರು.

ಮುಡಾ ಪ್ರಕರಣದ ಗಂಭೀರತೆಯನ್ನು ಅರಿತುಕೊಂಡೇ ರಾಜ್ಯಪಾಲರು, ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಅವರು ಏನು ಮಾಡಬೇಕು ಎಂದು ಹೇಳುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲವಾದರೆ ತನಿಖೆ ಎದುರಿಸಬೇಕು. ತನಿಖೆ ಮುಗಿಯುವವರೆಗೆ ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದು ಬಿಟ್ಟು ರಾಜ್ಯಪಾಲರ ಮೇಲೆ ಒತ್ತಡ ಹೇರುವ ಕೆಲಸ ಮಾಬಾರದು. ಇದು ಹೀಗೆಯೇ ಮುಂದುವರಿದರೆ ಮೈತ್ರಿಕೂಟವು ಪ್ರತಿಭಟನೆ ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ಬಳಿಕ ಎರಡೂ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರಾಮನಗರ ಗ್ರಾಮಾಂತರ ತಾಲ್ಲೂಕು ಅಧ್ಯಕ್ಷ ಪಿ.ಎಸ್‌. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಗರ ಪ್ರಧಾನ ಕಾರ್ಯದರ್ಶಿ ಕಾಳಯ್ಯ, ಮುಖಂಡರಾದ ಎಸ್.ಆರ್. ನಾಗರಾಜ್, ಪ್ರಸಾದ್ ಗೌಡ, ಪದ್ಮನಾಭ್, ರಾಜು, ರುದ್ರ ದೇವರು, ರಾಘವೇಂದ್ರ, ಪುಷ್ಪಲತಾ, ಶಿವಾನಂದ್, ಜೆಡಿಎಸ್ ಮುಖಂಡರಾದ ಗೂಳಿಗೌಡ, ಜಯಕುಮಾರ್, ಕೆಂಪರಾಜು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT