ಸಿದ್ದರಾಮಯ್ಯ ಕ್ಷಮೆಯಾಚನೆಗೆ ಬಿಜೆಪಿ ಎಸ್.ಸಿ. ಮೋರ್ಚ ಒತ್ತಾಯ

ರಾಮನಗರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಲಿತರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದು, ಈ ಬಗ್ಗೆ ಅವರು ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಕಾರ್ಯಕರ್ತರು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬ ಹೇಳಿಕೆಯನ್ನು ಖಂಡಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಮನಗರ ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ.ಎ. ಸಿಂಗ್ರಯ್ಯ ಮಾತನಾಡಿ ‘ತತ್ವ, ಸಿದ್ಧಾಂತ ಮೆಚ್ಚಿ ಬಿಜೆಪಿ ಸೇರಿರುವ ದಲಿತರ ಬಗ್ಗೆ ಸಿದ್ದರಾಮಯ್ಯ ಆಡಿರುವ ಮಾತುಗಳು ಖಂಡನಾರ್ಹ. ಕೂಡಲೇ ಅವರು ಸಮುದಾಯದ ಜನರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
‘ಬಿಜೆಪಿ ಎಲ್ಲ ಸಮುದಾಯವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ನಮ್ಮ ಪಕ್ಷದಲ್ಲಿ ದಲಿತ ಮುಖಂಡರು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ಇದನ್ನು ಸಹಿಸದ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದರಿಂದ ದಲಿತ ಸಮುದಾಯಕ್ಕೆ ನೋವಾಗಿದೆ. ವಿಪಕ್ಷ ನಾಯಕರಾಗಿಗುವ ಅವರು ತಮ್ಮ ಸ್ಥಾನದ ಘನತೆ ಮರೆತು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಶೋಭೆಯಲ್ಲ. ಅವರ ಹೇಳಿಕೆಯು ಕಾಂಗ್ರೆಸ್‍ನ ದಲಿತ ವಿರೋಧಿ ಮನಸ್ಥಿತಿಯ ಸಂಕೇತ’ ಎಂದು ದೂರಿದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಚಂದ್ರು, ರಾಮನಗರ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಗೋವಿಂದ ಕಬ್ಬೇದೊಡ್ಡಿ, ಜಿಲ್ಲಾ ಕಾರ್ಯದರ್ಶಿ ಲೋಕೇಶ್, ನಗರ ಮಂಡಲ ಅಧ್ಯಕ್ಷ ಪಿ. ಶಿವಾನಂದ, ಗ್ರಾಮಾಂತರ ಮಂಡಲ ಅಧ್ಯಕ್ಷ ಗೋಪಾಲ್, ಮುಖಂಡರಾದ ವಿ. ರಾಜು, ಅಚ್ಚಲುರಾಜು, ಶ್ರೀನಿವಾಸ್, ಕುಮಾರ್, ರಾಮಾಂಜನೇಯ, ಬಿ. ನಾಗೇಶ್, ಚಂದ್ರಶೇಖರ್ ರೆಡ್ಡಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.