ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಯಿಂದ ಸೈನಿಕರ ಹೆಸರು ದುರ್ಬಳಕೆ’

ರಾಮನಗರ: ಜೆಡಿಎಸ್‌–ಕಾಂಗ್ರೆಸ್‌ ಕಾರ್ಯಕರ್ತರ ಸಭೆ
Last Updated 22 ಮಾರ್ಚ್ 2019, 13:43 IST
ಅಕ್ಷರ ಗಾತ್ರ

ರಾಮನಗರ: ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಬಿಜೆಪಿ ತನ್ನ ರಾಜಕಾರಣಕ್ಕೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.

ಇಲ್ಲಿನ ಮಂಜುನಾಥ ಕಲ್ಯಾಣ ಮಂಟಪದ ಆವರಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್–ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪುಲ್ವಾಮ ದಾಳಿಗೆ ಈಗ ಚುನಾವಣಾ ದಾಳಿ ರೂಪ ನೀಡಲಾಗುತ್ತಿದೆ. ಈವರೆಗೆ ಯಾವುದೇ ರಾಜಕೀಯ ನಾಯಕರು ಉಗ್ರರ ವಿರುದ್ಧದ ದಾಳಿಗಳನ್ನು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. ಪಾಕಿಸ್ತಾನದ ವಿರುದ್ಧದ ಹೋರಾಟಕ್ಕೆ ದೇಶದ ಪ್ರತಿಯೊಬ್ಬ ಪ್ರಜೆಯೂ ಬೆಂಬಲ ವ್ಯಕ್ತಪಡಿಸಿದ್ದಾರೆ. ನೆಹರು, ಇಂದಿರಾ ಗಾಂಧಿ, ದೇವೇಗೌಡ ಆದಿಯಾಗಿ ಎಲ್ಲರೂ ಸೈನಿಕರಿಗೆ ಬಲ ತುಂಬುವ ಕೆಲಸ ಮಾಡಿದ್ದಾರೆ. ಇದನ್ನು ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

‘ನನ್ನನ್ನು ಉಳಿಸಿಕೊಳ್ಳುವುದು ಬಿಡುವುದು ನಿಮ್ಮೆಲ್ಲರ ಕೈಯಲ್ಲಿದೆ. ನನ್ನ ಕೈ ಹಿಡಿಯುವುದರ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿರವರು ಗೌರವ ಉಳಿಸುತ್ತೀರೆಂಬ ವಿಶ್ವಾಸವಿದೆ. ನಾನು ಚುನಾವಣೆಯಲ್ಲಿ ಆಯ್ಕೆಯಾದ ನಂತರ ಸಂಸದನಾಗಿರದೆ ಸಕ್ರಿಯ ಕಾರ್ಯಕರ್ತನಾಗಿ, ಸ್ನೇಹಿತ, ಸಹೋದರನಂತೆ ನಿಮ್ಮೊಂದಿಗೆ ಇರುತ್ತೇನೆ’ ಎಂದು ತಿಳಿಸಿದರು.

ಹತ್ತಾರು ವರ್ಷಗಳಿಂದ ಜೆಡಿಎಸ್– ಕಾಂಗ್ರೆಸ್ ಪರಸ್ಪರ ಹೋರಾಟ ಮಾಡಿಕೊಂಡು ಬಂದಿದ್ದವು. ಈಗ ದಿಢೀರ್ ಜತೆಗೂಡುವ ಸನ್ನಿವೇಶ ಬಂದಿದೆ. ಕಷ್ಟವಾದರೂ ದೇಶದ ಹಿತದೃಷ್ಟಿಯಿಂದ ಒಂದಾಗಬೇಕಿದೆ. ರಾಮನಗರ ಉಪಚುನಾವಣೆಯಲ್ಲಿ ಅನಿತಾ ಸಚಿನ್ ತೆಂಡೂಲ್ಕರ್ ರೀತಿಯಲ್ಲಿ ದಾಖಲೆ ಮಾಡಿದ್ದಾರೆ. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

‘ಒಂದು ಮನೆಯಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಅವೆಲ್ಲವನ್ನು ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡೋಣ. ಬಿಜೆಪಿಯನ್ನು ಚನ್ನಪಟ್ಟಣಕ್ಕೆ ಸೀಮಿತಗೊಳಿಸಿ ಇನ್ನೆಲ್ಲೂ ತಲೆ ಎತ್ತದಂತೆ ನೋಡಿಕೊಳ್ಳಬೇಕಿದೆ. ಎಲ್ಲರೂ ಒಟ್ಟುಗೂಡಿ ಸ್ಥಳೀಯ ಸಂಸ್ಥೆಗಳಲ್ಲೂ ಒಟ್ಟಾಗಿ ಹೋಗೋಣ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೆನ್ನಿಗೆ ಎಲ್ಲರೂ ನಿಲ್ಲಬೇಕಿದೆ. ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಯಾರೇ ತೊಂದರೆ ಕೊಟ್ಟಿದ್ದರೆ , ಕೇಸು ದಾಖಲಾಗುವ ಸನ್ನಿವೇಶ ಬಂದಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ’ ಎಂದು ತಿಳಿಸಿದರು.

‘ನರೇಂದ್ರ ಮೋದಿ ಮಾಧ್ಯಮಗಳ ಪ್ರಚಾರದಲ್ಲಿ ಇದ್ದರೆ ಹೊರತು ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ದೃಶ್ಯ ಮಾಧ್ಯಮಗಳು ಬಿಜೆಪಿಯನ್ನು ವೈಭವೀಕರಿಸುತ್ತಿವೆ. ಮಾಧ್ಯಮಗಳನ್ನು ನೋಡಿ ಅಧೀರರಾಗಬೇಡಿ’ ಎಂದು ತಿಳಿಸಿದರು.
ಸಭೆಯನ್ನು ಉದ್ಘಾಟಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ ‘ನಾವು ಮೈತ್ರಿ ಧರ್ಮ ಪಾಲನೆ ಮಾಡಿದರೆ ಅವರಿಂದಲೂ ನಾವು ನಿರೀಕ್ಷಿಸಬಹುದು. ಅದು ಮಂಡ್ಯ ಕ್ಷೇತ್ರದಲ್ಲಿಯೂ ಪ್ರಭಾವ ಬೀರಲಿದೆ. ಆ ಮೂಲಕ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗೆ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು’ ಎಂದರು.

‘ಇದೇ 25ರಂದು ಮಧ್ಯಾಹ್ನ 2ಕ್ಕೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಇದೇ26ರಬೆಳಿಗ್ಗೆ11 ಗಂಟೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಲಿದ್ದಾರೆ. ಮೈತ್ರಿ ಅಭ್ಯರ್ಥಿಗಳು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್. ನಟರಾಜ್, ಸದಸ್ಯ ಎಚ್.ಎನ್. ಲಕ್ಷ್ಮೀಕಾಂತ್, ಭದ್ರಯ್ಯ, ಜೆಡಿಎಸ್ ಮುಖಂಡರಾದ ಕೆ.ಎಸ್. ಶಂಕರಯ್ಯ, ಪ್ರಾಣೇಶ್, ಆರ್.ಎ. ಮಂಜುನಾಥ್, ರಾಜಶೇಖರ್, ಎಚ್.ಸಿ. ರಾಜಣ್ಣ, ದೊರೆಸ್ವಾಮಿ, ಪರ್ವೀಜ್ ಪಾಷಾ, ಬಿ. ಉಮೇಶ್, ರೈಡ್ ನಾಗರಾಜ್, ಕುಮಾರ್, ಗುರುಮಲ್ಲಯ್ಯ, ಸಾಬಾನ್ ಸಾಬ್, ಜಯಕುಮಾರ್, ವಕೀಲ ರಾಜಶೇಖರ್, ಕೆಂಗಲ್ಲಯ್ಯ, ಶೋಭಾ, ಕಾಂಗ್ರೆಸ್ ಮುಖಂಡರಾದ ಎ.ಬಿ. ಚೇತನ್‌ಕುಮಾರ್, ಮಂಗಳಾ ಶಂಭುಲಿಂಗಯ್ಯ, ನರಸಿಂಹಮೂರ್ತಿ ಇದ್ದರು.

ಕಾಮಗಾರಿಗೆ ಚಾಲನೆ ನೀಡಿ
‘ಅರ್ಚಕರಹಳ್ಳಿಯಲ್ಲಿ ನಿರ್ಮಾಣವಾಗುವ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಮೊದಲು ಚಾಲನೆ ನೀಡಿ’ ಎಂದು ಅಂಜನಾಪುರದ ಜೆಡಿಎಸ್ ಮುಖಂಡ ರೇವಣ್ಣ ಒತ್ತಾಯಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ‘ಹಲವು ವರ್ಷಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ. ಹಲವು ವರ್ಷಗಳಾದರೂ ಈ ಯೋಜನೆಗೆ ಚಾಲನೆ ಸಿಕ್ಕಿಲ್ಲ, ಚುನಾವಣಾ ಸಮಯದಲ್ಲಿ ಹೇಳುತ್ತಿರಿ, ಆಮೇಲೆ ಮರೆತು ಬಿಡುತ್ತೀರಿ’ ಎಂದು ಹರಿಹಾಯ್ದರು.

ಲೋಕಸಭಾ ಚುನಾವಣೆ ಮುಗಿದ ಮೇಲೆ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕಿ ಅನಿತಾಕುಮಾರಸ್ವಾಮಿ ಭರವಸೆ ನೀಡಿದರು.


ತಪ್ಪಾಗಿ ಅರ್ಥೈಸದಿರಿ
‘ನಮ್ಮಲ್ಲಿ ನಿಗದಿತ ಸಮಯಕ್ಕೆ ಸಭೆಗಳು ಪ್ರಾರಂಭವಾಗುವುದಿಲ್ಲ. ಇಂದು ಸರಿಯಾದ ಸಮಯಕ್ಕೆ ಆರಂಭವಾದ ಕಾರಣ ಕಡಿಮೆ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿದ್ದಾರೆ. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು’ ಎಂದು ಅನಿತಾ ಸ್ಪಷ್ಟನೆ ನೀಡಿದರು.

‘ನಮಗೆ ಹಲವು ಕಡೆ ಸಭೆಗಳು ಇರುವುದರಿಂದ ಬೇಗ ಬಂದಿದ್ದೇವೆ. ಈ ಸಭೆಯನ್ನು ಮುಗಿಸಿ ಇನ್ನು ಹಲವು ಸಭೆಗಳಿಗೆ ಹೋಗಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT