ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಸಹೋದರರಿಗೆ ಜನರಿಂದಲೇ ಪಾಠ: ಯೋಗೇಶ್ವರ್‌

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು: ವಿಶ್ವಾಸ
Last Updated 15 ಮಾರ್ಚ್ 2019, 12:06 IST
ಅಕ್ಷರ ಗಾತ್ರ

ರಾಮನಗರ: ‘ಡಿ.ಕೆ. ಸಹೋದರರ ಅಹಂಕಾರ, ಉದ್ದಟತನಕ್ಕೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಹೇಳಿದರು.

‘ಸಂಸದ ಡಿ.ಕೆ. ಸುರೇಶ್‌ ಅವರು ಕಳೆದ ಉಪ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಸಂದರ್ಭ ಚನ್ನಪಟ್ಟಣ ಮತದಾರರು ಅವರ ಬೆಂಬಲಕ್ಕೆ ನಿಂತಿದ್ದರು. ನಾನು ಸಮಾಜವಾದಿ ಪಕ್ಷದಲ್ಲಿ ಇದ್ದ ಸಂದರ್ಭ ಡಿ.ಕೆ. ಶಿವಕುಮಾರ್ ಬಂದು ನಮ್ಮಲ್ಲಿ ಕೇಳಿಕೊಂಡಿದ್ದರಿಂದ ಬೆಂಬಲ ನೀಡಿದೆವು. ಇದರಿಂದ ಕ್ಷೇತ್ರದ ಅಭಿವೃದ್ಧಿ ಆಗಬೇಕಿತ್ತು. ಆದರೆ ಕಳೆದ ಐದು ವರ್ಷದಲ್ಲಿ ಅವರು ಏನು ಮಾಡಿದರೆಂಬುದು ಎಲ್ಲರಿಗೂ ತಿಳಿದಿದೆ. ಅವರ ನಡೆ ಬಹಳ ನೋವು ತಂದಿದೆ. ಅವರಿಗೆ ಅಂದು ಇದ್ದ ಜನಬೆಂಬಲ ಇಂದು ಇಲ್ಲ. ಮೋದಿಯೇ ಇಲ್ಲಿ ಬಂದು ನಿಂತರೂ ಸುರೇಶ್‌ ಗೆಲ್ಲಿಸುತ್ತೇವೆ ಎಂದು ಶಿವಕುಮಾರ್‌ ಹೇಳಿದ್ದಾರೆ. ಇದನ್ನು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸವಾಲಾಗಿ ತೆಗೆದುಕೊಂಡಿದ್ದು, ಚುನಾವಣೆ ಮೂಲಕವೇ ಉತ್ತರ ನೀಡಲಿದ್ದೇವೆ’ ಎಂದರು.

‘ಅವರಿಗೆ ಸಾಕಷ್ಟು ಹಣಬಲ ಇದೆ. ಜಿಲ್ಲೆಗೆ ನೀರು ಹರಿಸದಿದ್ದರೂ ದುಡ್ಡಿನ ಹೊಳೆ ಹರಿಸಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ ಜನಾಭಿಪ್ರಾಯದ ಮುಂದೆ ಯಾವ ಹಣ ಬಲ, ತೋಳ್ಬಲವೂ ನಡೆಯದು. ಮತದಾರರು ಪ್ರಬುದ್ಧರಿದ್ದು, ಅವರೇ ತೀರ್ಪು ನೀಡುತ್ತಾರೆ’ ಎಂದರು.

‘ಕಾಂಗ್ರೆಸ್‌ ಸ್ಥಳೀಯ ಮುಖಂಡರೊಂದಿಗೆ ಡಿ.ಕೆ. ಸಹೋದರು ಉತ್ತಮ ಬಾಂಧವ್ಯ ಹೊಂದಿಲ್ಲ. ಜಿಲ್ಲೆಯಲ್ಲೂ ಅವರಿಗೆ ಸಾಕಷ್ಟು ವಿರೋಧ ಇದೆ. ಜೆಡಿಎಸ್ ಮುಖಂಡರು ಸುರೇಶ್‌ಗೆ ಸಹಕಾರ ನೀಡುವುದಿಲ್ಲ. ಡಿ.ಕೆ. ಶಿವಕುಮಾರ್‌ಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ. ಅವರ ಕಪ್ಪುಹಣದ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ದೆಹಲಿಯಲ್ಲಿ ಅವರಿಗೆ ಒಬ್ಬ ಪ್ರತಿನಿಧಿ ಬೇಕು. ಹೀಗಾಗಿ ತಮ್ಮನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ’ ಎಂದರು.

ಪ್ರಜಾಪ್ರಭುತ್ವ ವಿರೋಧಿ: ‘ಕಳೆದ ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಅವರು ಚುನಾವಣಾ ಕಣದಿಂದ ನಿವೃತ್ತಿಗೊಳಿಸಿದರು. ಅದು ಪ್ರಜಾಪ್ರಭುತ್ವದ ಅಣಕ. ಈ ಬಾರಿಯ ಚುನಾವಣೆ ರಾಷ್ಟ್ರದ ಪ್ರಧಾನಿ ಯಾರೆಂದು ನಿರ್ಧರಿಸುವ ಚುನಾವಣೆ. ಮೋದಿ ಕಳೆದ ಐದು ವರ್ಷದಲ್ಲಿ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಡಿ.ಕೆ. ಶಿವಕುಮಾರ್ ಕುಟುಂಬದ ಬೇನಾಮಿ ಆಸ್ತಿ ವಿರುದ್ಧ ಕಾನೂನು ಸಮರ ಮುಂದುವರಿದಿದೆ. ಅದನ್ನು ಸೂಕ್ತ ಸಮಯದಲ್ಲಿ ಬಹಿರಂಗ ಪಡಿಸುತ್ತೇನೆ’ ಎಂದರು.

**
ಮಾತಿನಲ್ಲೇ ಮೊಟಕಿದ ಸಿಪಿವೈ

‘ನಾನು ಮತ್ತು ಯೋಗೇಶ್ವರ್‌ ಮಾತ್ರ ಟಿಕೆಟ್‌ ಆಕಾಂಕ್ಷಿಗಳು ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್‌ ಹೇಳುತ್ತಾರೆ. ನೀವು ನೋಡಿದರೆ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು ಎನ್ನುತ್ತೀರಿಲ್ಲಾ’ ಎಂಬ ಪತ್ರಕರ್ತರ ಪ್ರಶ್ನೆಗೆ ಕೊಂಚ ವಿಚಲಿತರಾದ ಯೋಗೇಶ್ವರ್‌ ‘ರುದ್ರೇಶ್‌ ಆ ಅರ್ಥದಲ್ಲಿ ಹೇಳಿಲ್ಲ. ಹೇಳಿದ್ದರೂ ಅವರಿಗೆ ರಾಜಕೀಯ ಅನುಭವ ಕಡಿಮೆ’ ಎಂದು ಮಾತಿನಲ್ಲೇ ಮೊಟಕಿದರು. ರುದ್ರೇಶ್‌ ಪಕ್ಕದಲ್ಲೇ ಇದ್ದರು.

**

ಕೇವಲ ಅಭಿವೃದ್ಧಿಯಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ ಎಂದು ನನಗೆ ಮನದಟ್ಟಾಗಿದೆ. ನಾನು ಲೋಕಸಭೆ ಚುನಾವಣೆಗೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ
– ಸಿ.ಪಿ. ಯೋಗೇಶ್ವರ್‌, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT