ಬುಧವಾರ, ನವೆಂಬರ್ 20, 2019
26 °C

ಹಾರೋಹಳ್ಳಿ ರೋಟರಿ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ

Published:
Updated:
Prajavani

ಹಾರೋಹಳ್ಳಿ (ಕನಕಪುರ): ‘ರಕ್ತದಾನ ಮಾಡುವುದರ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವು ಜನರಲ್ಲಿ ಇನ್ನು ತಪ್ಪುಬಾವನೆ ಮತ್ತು ಹಿಂಜರಿಕೆ ಇದೆ’ ಎಂದು ಹಾರೋಹಳ್ಳಿ ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌ ತಿಳಿಸಿದರು.

ಇಲ್ಲಿನ ಹಾರೋಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ಕ್ರಾಸ್‌ ಘಟಕ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಹಾರೋಹಳ್ಳಿ ರೋಟರಿ ಸಹಭಾಗಿತ್ವದಲ್ಲಿ ನಡೆದ‍ ರಕ್ತದಾನ ಶಿಬಿರದಲ್ಲಿ ರಕ್ತದಾನದ ಅನುಕೂಲ ಮತ್ತು ಲಾಭದ ಬಗ್ಗೆ ಮಾತನಾಡಿದರು.

‘ಆರೋಗ್ಯಯುತ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೆ ಅವರ ದೇಹದಲ್ಲಿ ಹೊಸ ರಕ್ತ ಶೀಘ್ರವೇ ಉತ್ಪತ್ತಿಯಾಗುತ್ತದೆ. ರಕ್ತ ನೀಡುವ ಮುನ್ನ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಅನಾರೋಗ್ಯವಿದ್ದರೆ ಅದರ ಬಗ್ಗೆ ಜಾಗ್ರತೆ ವಹಿಸಿ ಗುಣಪಡಿಸಿಕೊಳ್ಳಬಹುದು’ ಎಂದರು.

ರೋಟರಿ ಡಿಸ್ಟಿಕ್‌ ಅಸಿಸ್ಟೆಂಟ್‌ ಗವರ್ನರ್‌ ಡಾ.ಪ್ರಾಣೀಶ್‌ ಮಾತನಾಡಿ, ‘ದೇಹದಿಂದ ಹೇಗೆಂದರೆ ಹಾಗೆ, ಎಷ್ಟು ಬೇಕೋ ಅಷ್ಟು ರಕ್ತ ತೆಗೆದುಕೊಳ್ಳಲು ಸಾಧ್ಯವಿಲ್ಲ. ವೈಜ್ಙಾನಿಕವಾಗಿ ಪರೀಕ್ಷೆಗೆ ಒಳಪಡಿಸಿ ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ನಿಗಧಿತ ಪ್ರಮಾಣದಲ್ಲಿ ರಕ್ತ ಸಂಗ್ರಹಿಸಲಾಗುತ್ತದೆ. ಯುವಜನರು ರಕ್ತದಾನದಲ್ಲಿ ಹೆಚ್ಚು ಪಾಲ್ಗೊಳ್ಳಬೇಕು’ ಎಂದು ಹೇಳಿದರು.

ಹಾರೋಹಳ್ಳಿ ರೋಟರಿ ಅಧ್ಯಕ್ಷ ಎಂ.ಭರತ್‌ ಮಾತನಾಡಿ, ‘ರೋಟರಿ ಸಂಸ್ಥೆ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಅದರಲ್ಲಿ ರಕ್ತದಾನ ಶಿಬಿರವೂ ಒಂದಾಗಿದೆ. ಅಗತ್ಯ ವ್ಯಕ್ತಿಗೆ ಸೂಕ್ತ ಕಾಲದಲ್ಲಿ ರಕ್ತ ಸಿಗಬೇಕೆಂಬುದು ನಮ್ಮ ಉದ್ದೇಶವಾಗಿದ್ದು, ಈ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಅರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬೇಕು’ ಎಂದು ಮನವಿ ಮಾಡಿದರು.

ರೋಟರಿ ಮಾಜಿ ಅಧ್ಯಕ್ಷ ಮಹಮದ್‌ ಏಜಾಸ್‌, ಜೀವ ರಕ್ಷಕ ಸ್ವಯಂ ಪ್ರೇರಿತ ರಕ್ತನಿಧಿ ಮ್ಯಾನೇಜಿಂಗ್‌ ಟ್ರಸ್ಟಿ ಕೆ.ಮಂಜುನಾಥ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಚ್‌.ನಾಗರಾಜು, ಡಾ.ಎಂ.ಜಯಶಂಕರ್‌, ಪ್ರೊ. ಎಂ.ಎಸ್‌.ಮಹೇಶ್‌ಬಾಬು ಇದ್ದರು. 90 ಯೂನಿಟ್‌ನಷ್ಟು ರಕ್ತ ಸಂಗ್ರಹ ಮಾಡಲಾಯಿತು.

ಪ್ರತಿಕ್ರಿಯಿಸಿ (+)