ಮಂಗಳವಾರ, ಸೆಪ್ಟೆಂಬರ್ 21, 2021
22 °C

ಸಂಕಷ್ಟದಲ್ಲಿ ಇಟ್ಟಿಗೆ ಉದ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಹೋಬಳಿಯ ಸುತ್ತಮುತ್ತ 60ಕ್ಕೂ ಹೆಚ್ಚು ಇಟ್ಟಿಗೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಇಟ್ಟಿಗೆ ಕಾರ್ಖಾನೆಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಕೆಲಸ ನಿರ್ವಹಿಸಲು ಕುಟುಂಬ ಸಮೇತ ಆಗಮಿಸಿರುವ ಕಾರ್ಮಿಕರು ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಾರ್ಮಿಕರು ದಿನಕ್ಕೆ ಸರಾಸರಿ ₹ 1 ಸಾವಿರದಿಂದ ₹ 2 ಸಾವಿರ ಸಂಪಾದಿಸುತ್ತಾರೆ. ಆದರೆ, ಸಕಾಲದಲ್ಲಿ ಇಟ್ಟಿಗೆ ಮಾರಾಟವಾಗದೆ ಕಾರ್ಖಾನೆಯಲ್ಲೇ ಉಳಿದುಕೊಂಡಿರುವುದರಿಂದ ಕೂಲಿಯೂ ಸಿಗದೆ ಜೀವನ ನಡೆಸಲು ಕಷ್ಟಕರವಾಗುತ್ತಿದೆ ಎಂದು ಕಾರ್ಮಿಕ ವೆಂಕಟರಾಮಯ್ಯ ನೋವು ತೋಡಿಕೊಂಡಿದ್ದಾರೆ.

ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಅಧಿಕ ಮುಂಗಡ ಹಣ ನೀಡಿ ಹಾಗೂ ಎಲ್ಲಾ ಮೂಲಸೌಕರ್ಯ ಒದಗಿಸಿ ಕೆಲಸ ನಿರ್ವಹಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ. ಕೋವಿಡ್‌ನಿಂದಾಗಿ ಮಾರುಕಟ್ಟೆಯಲ್ಲಿ ಇಟ್ಟಿಗೆ ಧಾರಣೆ ಕುಸಿದಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎನ್ನುತ್ತಾರೆ ಇಟ್ಟಿಗೆ ಕಾರ್ಖಾನೆ ಮಾಲೀಕರು.

ಈ ಭಾಗದ ಕಾರ್ಖಾನೆಗಳು ಬೆಂಗಳೂರು ಮಾರುಕಟ್ಟೆಯನ್ನೇ ಅವಲಂಬಿಸಿವೆ. ಲಾಕ್‌ಡೌನ್‌ನಿಂದಾಗಿ ವಸತಿ, ಕಟ್ಟಡ ನಿರ್ಮಾಣ ಸ್ಥಗಿತಗೊಂಡಿದೆ. ಇದೇ ಮಾರಾಟ ಕುಸಿಯಲು ಪ್ರಮುಖ ಕಾರಣವಾಗಿದೆ.

ಅಲ್ಲದೇ, ಕಾರ್ಮಿಕರನ್ನು ಕಾಪಾಡಲು ಮಾಲೀಕರು ಕೂಡ ವಿವಿಧ ಬ್ಯಾಂಕ್‌ಗಳು ಹಾಗೂ ಲೇವಾದೇವಿದಾರರಿಂದ ಹಣ ಪಡೆದು ಹೂಡಿಕೆ ಮಾಡಿದ್ದಾರೆ. ಈ ನಡುವೆ ಕಾರ್ಖಾನೆ ನಡೆಸಲು ಕಷ್ಟಕರವಾಗುತ್ತಿದೆ. ಮತ್ತೊಂದೆಡೆ ನಿರಂತರವಾದ ತುಂತುರು ಮಳೆಯಿಂದಾಗಿ ಇಟ್ಟಿಗೆ ತಯಾರಿಕೆಯೂ ಕುಂಠಿತವಾಗಿದೆ.

‘ಕೋವಿಡ್‌ ಮೂರನೇ ಅಲೆಯ ಭೀತಿಯಲ್ಲಿ ಕಾರ್ಮಿಕರು ಅವರ ಸ್ವಂತ ಸ್ಥಳಗಳಿಗೆ ಮರಳಿದರೆ ನಮ್ಮ ಗತಿ ಮತ್ತಷ್ಟು ಜರ್ಜರಿತವಾಗಲಿದೆ. ಈ ಉದ್ಯಮ ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ಯಾವುದೇ ರೀತಿಯ ಆರ್ಥಿಕ ಸಹಾಯ ಅಥವಾ ಪ್ರೋತ್ಸಾಹ ಧನ ನೀಡಿಲ್ಲ’ ಎನ್ನುತ್ತಾರೆ ಇಟ್ಟಿಗೆ ಕಾರ್ಖಾನೆ ಮಾಲೀಕ ರವಿ.

ಒಂದೆಡೆ ಕಾರ್ಮಿಕರು ಕೆಲಸ ಸ್ಥಗಿತ ಮಾಡಿದರೆ ಅವರಿಗೆ ಕಷ್ಟವಾಗಲಿದೆ. ಮಾಲೀಕರಿಗೆ ಉತ್ಪತ್ತಿಯಾದ ಇಟ್ಟಿಗೆ ಮಾರಾಟವಾಗದಿದ್ದರೆ ಅವರು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.