ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಿಟ್ಟ ಮಕ್ಕಳನ್ನು ಕರೆತನ್ನಿ: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಸೂಚನೆ
Last Updated 25 ಫೆಬ್ರುವರಿ 2021, 4:24 IST
ಅಕ್ಷರ ಗಾತ್ರ

ರಾಮನಗರ: ಮುಸ್ಲಿಂ ಸಮುದಾಯದಲ್ಲಿ ಬಹಳಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗುತ್ತಾರೆ. ಅಂತಹವರನ್ನು ಶಾಲೆಗೆ ಕರೆತರುವ ಕೆಲಸದಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಬಹಳ ಮುಖ್ಯ ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಅಲ್ಪಸಂಖ್ಯಾತರ ಕುಂದುಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸುತ್ತಿಲ್ಲ ಎಂದು ಸಮಾಜ ಕಾರ್ಯಕರ್ತರು ದೂರಿದರು.

‘ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಸರ್ಕಾರದಿಂದ ವಸತಿಶಾಲೆಗಳನ್ನು ನಡೆಸಲಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಅಧ್ಯಕ್ಷರು ಸಲಹೆ ನೀಡಿದರು.

‘ಕಟ್ಟಡ ನಿರ್ಮಾಣ ಮಾಡಲು ಸ್ಥಳದ ಅವಶ್ಯಕತೆ ಇದೆ. ಒದಗಿಸಿ ಕೊಡಿ’ ಎಂದು ನಯಾಜ್ ಅಹಮದ್ ಎಂಬುವರು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ರಾಮನಗರ ಜಿಲ್ಲೆಯಲ್ಲಿ ಸಿ.ಎ ನಿವೇಶನಗಳು ಲಭ್ಯವಿಲ್ಲ. ರಾಮನಗರ ಹೊರವಲಯದಲ್ಲಿ ಸ್ಥಳ ಗುರುತಿಸಿ ಅರ್ಜಿ ಸಲ್ಲಿಸಿದರೆ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸ್ಥಳ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಫಾರೂಕಿಯಾ ಕಾಲೇಜಿನ ಉಪನ್ಯಾಸಕ ಫಕ್ರುದ್ದೀನ್, ‘ದೇಶದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಶಿಕ್ಷಣಕ್ಕಾಗಿ ನೀಡಲಾಗುವ ಅರಿವು ಶೈಕ್ಷಣಿಕ ಸಾಲವನ್ನು ತಡೆಹಿಡಿಯಲಾಗಿದೆ. ಈ ಅನುದಾನವನ್ನು ಮಕ್ಕಳಿಗೆ ಒದಗಿಸಿಕೊಡಬೇಕು’
ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಈ ಬಾರಿ ಆಯವ್ಯಯದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗುವ ಶೈಕ್ಷಣಿಕ ಸಾಲದ ವ್ಯವಸ್ಥೆ ಮಾಡಬೇಕಾಗಿ ಮನವಿ ಸಲ್ಲಿಸಲಾಗುವುದು’ ಎಂದರು.

ನಗರಸಭೆ ಪೌರಾಯುಕ್ತ ನಂದಕುಮಾರ್, ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ನಸೀರ್ ಅಹಮದ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧೆಡೆ ಭೇಟಿ

ಸಭೆಗೂ ಮುನ್ನ ಅಧ್ಯಕ್ಷರು ರಾಮನಗರ ಜಿಲ್ಲಾ ಆಸ್ಪತ್ರೆ, ಟಿಪ್ಪುನಗರದ ಮಸೀದಿ, ರಾಮನಗರದ ಲೂರ್ದ್‌ ಮಾತೆ ಚರ್ಚ್‌, ಸರ್ಕಾರಿ ಮುಸ್ಲಿಂ ವಸತಿ ಕಾಲೇಜು ಹಾಗೂ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT