ಶನಿವಾರ, ಅಕ್ಟೋಬರ್ 19, 2019
22 °C

ಬಿಎಸ್‌ವೈ ಪತ್ನಿ ಸಾವು: ಎಚ್‌ಡಿಕೆ ಕೊಂಕು

Published:
Updated:

ರಾಮನಗರ: ‘ದೇಶದೊಳಗೆ ಎಂತೆಂತಹ ಕಥೆಗಳು ನಡೆದಿವೆ. 1x1 ಅಡಿ ಅಗಲದ ಬಾಯಿ ಮೂಲಕ ನೀರಿನ ಟ್ಯಾಂಕಿನಲ್ಲಿ ಕಾಲು ಜಾರಿಬಿದ್ದು ಸಾಯಲು ಎಲ್ಲಾದರೂ ಉಂಟೇ. ಅಂತಹದ್ದನ್ನೇ ಜನರು ಈ ರಾಜ್ಯದಲ್ಲಿ ಮೆಚ್ಚಿಕೊಂಡಿದ್ದಾರೆ’ ಎಂದು ಶಾಸಕ ಎಚ್‌.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ನಿ ಸಾವಿನ ಕುರಿತು ಟೀಕೆ ಮಾಡಿದರು.

ಚನ್ನಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಹಿಂದೆ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದರು. ಆಗ ಅವರೇನು ಮಾಡಿದ್ದಾರೆ ಎಂದು ಅವರ ಬಂಡವಾಳ ತೆಗೆದರೆ, ವೀರಶೈವ ಸಮಾಜದವರ ವಿರುದ್ಧ ಕುಮಾರಸ್ವಾಮಿ ತಿರುಗಿ ಬಿದ್ದಿದ್ದಾರೆ ಎಂದು ನನ್ನ ವಿರುದ್ಧವೇ ಟೀಕೆ ಮಾಡುತ್ತಾರೆ. ಹೀಗಾಗಿ ಮಾತನಾಡಲು ಹೋಗುವುದಿಲ್ಲ’ ಎಂದರು.

‘ಬೆಂಗಳೂರಿನಲ್ಲಿ ಡಿಕೆಶಿ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೇ ಇದ್ದದ್ದಕ್ಕೆ ನನ್ನನ್ನು ವಿಲನ್‌ ಎಂಬಂತೆ ಬಿಂಬಿಸಲಾಗಿದೆ. ಹಿಂದೆ ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ಇಂಧನ ಇಲಾಖೆಯಲ್ಲಿ ಲೂಟಿ ಮಾಡಿದ್ದರು. ಇದರ ತನಿಖೆ ನಡೆಸುವಂತೆ ಶಿವಕುಮಾರ್‌ಗೆ ಹೇಳಿದ್ದೆ. ಆದರೆ ಅವರು ಮಾಡಲಿಲ್ಲ. ಅದೇ ಯಡಿಯೂರಪ್ಪ ಡಿಕೆಶಿ ವಿರುದ್ಧ ಐ.ಟಿ. ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ’ ಎಂದು ದೂರಿದರು.

‘ಶಿವಕುಮಾರ್‌ ಹೊಲದಲ್ಲಿ ಭತ್ತ ಬೆಳೆದಿದ್ದಾರೋ ಇಲ್ಲ ಚಿನ್ನ ಬೆಳೆದಿದ್ದಾರೋ ಎಂದು ಈಗ ಪ್ರಶ್ನಿಸುವ ಐ.ಟಿ. ಅಧಿಕಾರಿಗಳು, ಅವರು 25 ವರ್ಷದಿಂದ ಆದಾಯ ತೆರಿಗೆ ಪಾವತಿಸುತ್ತಾ ಬರುವಾಗ ಕೇಳಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಪ್ರೋತ್ಸಾಹ ಕೊಡುವವರೂ ನೀವೇ. ಕತ್ತು ಕುಯ್ಯುವವರೂ ನೀವೇ’ ಎಂದು ಟೀಕಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದರೂ ನೆರೆ ಪರಿಹಾರವಾಗಿ ಬಿಡಿಗಾಸೂ ಕೊಟ್ಟಿಲ್ಲ. ಯಡಿಯೂರಪ್ಪರಿಗೆ ಭೇಟಿ ಅವಕಾಶವನ್ನೂ ನೀಡುತ್ತಿಲ್ಲ. ಅವರೇನು ಅವರಪ್ಪನ ಮನೆಯಿಂದ ದುಡ್ಡು ಕೊಡುತ್ತಾರ. ನಮ್ಮ ತೆರಿಗೆ ಹಣವನ್ನೇ ನಮಗೆ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ. ಯುವಜನರು ಅದರ ವಿರುದ್ಧ ದಂಗೆ ಏಳಬೇಕು’ ಎಂದರು.

‘ಪ್ರಸ್ತುತ ರಾಜಕಾರಣ ಬೇಸರ ತಂದಿದೆ. ಜನರ ಸಲುವಾಗಿ ರಾಜಕಾರಣದಲ್ಲಿ ಇದ್ದೇನೆ. ಆದರೆ, ಪಾಪದ ಹಣ ಮಾಡಿಲ್ಲ. ಹೀಗಾಗಿ ಯಾವ ಐ.ಟಿ. ಇ.ಡಿ. ಅಧಿಕಾರಿಗಳ ಭಯವೂ ಇಲ್ಲ’ ಎಂದರು. ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಸರ್ಕಾರದ ಆಯುಸ್ಸು ಹೇಳಲು ನಾನೇನು ಜ್ಯೋತಿಷಿ ಅಲ್ಲ. ಆದರೆ ಅದರ ನಡವಳಿಕೆ ನೋಡಿದ್ರೆ ಯಾವ ಸಮಯದಲ್ಲಾದರೂ ಬಿದ್ದು ಹೋಗುವಂತೆ ಇದೆ’ ಎಂದರು.

‘ಮೈಸೂರಿನಲ್ಲಿ ನಡೆಯಲಿರುವ ಜೆಡಿಎಸ್‌ ಸಭೆಗೆ ಜಿ.ಟಿ. ದೇವೇಗೌಡರ ಸಹಿತ ಎಲ್ಲರನ್ನೂ ಕರೆದಿದ್ದೇವೆ. ಬರುವವರು ಬರುತ್ತಾರೆ. ಹೋಗುವವರು ಹೋಗುತ್ತಾರೆ’ ಎಂದು ಹೇಳಿದರು.

Post Comments (+)