ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಕ್ಷಮೆಯಾಚನೆಗೆ ಬಿಎಸ್ಪಿ ಪಟ್ಟು

ವಿವಿಧ ಬೇಡಿಕೆ ಈಡೇರಿಕೆಗಾಗಿ ಫೆ. 1ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ
Last Updated 27 ಜನವರಿ 2021, 15:34 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯದಲ್ಲಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ತಪ್ಪಾಯಿತು ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮುಂದೆ ಅವರು ಹೋದಲೆಲ್ಲ ಪಕ್ಷದ ಕಾರ್ಯಕರ್ತರು ಘೆರಾವ್ ಹಾಕಲಿದ್ದಾರೆ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹೇಳಿದರು.

‘2018ರ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಜೆಡಿಎಸ್‌ ಬಿಎಸ್ಪಿಗೆ ಕೇವಲ 19 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತ್ತು. ಈ ಭಾಗಗಳಲೆಲ್ಲ ಜೆಡಿಎಸ್ 5–6ನೇ ಸ್ಥಾನದಲ್ಲಿ ಇತ್ತು. ಆದರೆ ಬಿಎಸ್ಪಿ 2–3 ಸ್ಥಾನದಲ್ಲಿದ್ದ 30ಕ್ಕೂ ಹೆಚ್ಚು ಕ್ಷೇತ್ರಗಳನ್ನು ಜೆಡಿಎಸ್‌ಗೆ ನೀಡಿತು. ಇದರಿಂದಾಗಿ ನಮ್ಮ ಪಕ್ಷಕ್ಕೇ ಹೆಚ್ಚು ಹಾನಿಯಾಗಿದೆ. ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳದೇ ಹೋಗಿದ್ದರೆ ಪಕ್ಷ ಕನಿಷ್ಠ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಕೊಳ್ಳೇಗಾಲದಲ್ಲಿ ಮಹೇಶ್‌ ಗೆದ್ದಿದ್ದು ಬಿಎಸ್ಪಿ ಹಾಗೂ ಸ್ವಂತ ಬಲದಿಂದ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಗಲಭೆಯಲ್ಲಿ ಬೇರೆ ಯಾರದ್ದೋ ಹುನ್ನಾರ ಅಡಗಿದೆ. ಈ ಬಗ್ಗೆ ತನಿಖೆ ನಡೆಯಬೇಕು. ರೈತ ಹೋರಾಟಗಾರರನ್ನು ಭಯೋತ್ಪಾದಕರು ಎಂದಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಫೆ.1ರಂದು ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರುವರಿ 1ರಂದು ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ’ ಎಂದು ಮುನಿಯಪ್ಪ ಮಾಹಿತಿ ನೀಡಿದರು.

‘ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಈ ವರ್ಷದ ವಿದ್ಯಾರ್ಥಿವೇತನ ನೀಡಬೇಕು. ಉದ್ದೇಶಿತ ಕೃಷಿ ಸಂಬಂಧಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ನಾಗಮೋಹನ ದಾಸ್‌ ಸಮಿತಿ ವರದಿಯಂತೆ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ 20ಕ್ಕೆ ಹಾಗೂ ಪರಿಶಿಷ್ಟ ವರ್ಗಕ್ಕೆ ಶೇ 10ಕ್ಕೆ ಏರಿಕೆ ಮಾಡಬೇಕು. ಪಿಟಿಸಿಎಲ್ ಕಾಯ್ದೆಯನ್ನು ಬಲಪಡಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕು. ದಲಿತರಿಗೆ ಸ್ಮಶಾನಕ್ಕೆ ಜಾಗ ನೀಡಬೇಕು. ಸಾಗುವಳಿ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅಂದಾನಪ್ಪ, ಎಂ. ನಾಗೇಶ್‌, ಬಾಬು ಷರೀಫ್, ಗುರುಲಿಂಗಯ್ಯ, ರಾಮಣ್ಣ, ಭೋಗೇಶ್‌, ವೆಂಕಟಾಚಲ, ಮಂಗಳಮ್ಮ ಇದ್ದರು.

***
ಹತ್ತಿದ ಏಣಿ ಒದೆಯುವುದು ದೇವೇಗೌಡ–ಕುಮಾರಸ್ವಾಮಿ ಕುಟುಂಬದ ಚಾಳಿ. ಜೆಡಿಎಸ್‌ನವರಂತೆ ನಾವು ಹಣ–ಹೆಂಡ ಹಂಚಿ ಮತ ಪಡೆದಿಲ್ಲ. ತಳ ಸಮುದಾಯ ಸಂಘಟಿಸಿದ್ದೇವೆ.
ಮಾರಸಂದ್ರ ಮುನಿಯಪ್ಪ, ಬಿಎಸ್ಪಿ ರಾಜ್ಯ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT