ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುವಾದ ವಿಮೋಚನೆಗೆ ಇದು ಸಕಾಲ: ಬಿಎಸ್‌ಪಿಯಿಂದ ಜೈ ಭೀಮ್ ಜನಜಾಗೃತಿ ಜಾಥಾ

Last Updated 29 ಸೆಪ್ಟೆಂಬರ್ 2022, 2:13 IST
ಅಕ್ಷರ ಗಾತ್ರ

ರಾಮನಗರ: ಬಹುಜನ ಸಮಾಜ ಪಕ್ಷದ ವತಿಯಿಂದ ರಾಮನಗರದಲ್ಲಿ ಬುಧವಾರ ಸಂವಿಧಾನದ ರಕ್ಷಣೆಗಾಗಿ ಜೈಭೀಮ್ ಜನಜಾಗೃತಿ ಜಾಥಾ ಮತ್ತು ಬೈಕ್ ರ್‍ಯಾಲಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಾಥಕ್ಕೆ ಚಾಲನೆ ನೀಡಲಾಯಿತು. ಅಲ್ಲಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಳೇ ಬಸ್ ನಿಲ್ದಾಣದಲ್ಲಿ ಜಾಥ ಸಮಾವೇಶಗೊಂಡಿತು.

ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿ ‘ಎಪ್ಪತ್ತೈದು ವರ್ಷಗಳ ಕಾಲ ಸಂವಿಧಾನಕ್ಕೆ ವಿರುದ್ಧವಾದ ದುರಾಡಳಿತ ಕಂಡಿದ್ದೇವೆ. ಈಗಲಾದರೂ ನಾವು ಜಾಗೃತರಾಗಬೇಕಿದೆ’ ಎಂದರು.

ಜಾತೀಯತೆ, ಕೋಮುವಾದದ ಕರಾಳತೆಯಿಂದ ಬಿಡುಗಡೆ ಪಡೆಯಲು, ಬಡತನ ಬೇಗೆಯಿಂದ ವಿಮೋಚನೆಯಾಗುವ ಕಾಲ ಬಂದಿದೆ. ಸಂವಿಧಾನಾತ್ಮಕ ಹೋರಾಟದ ಮೂಲಕ ಗೆಲುವು ಸಾಧಿಸಬಹುದಾಗಿದೆ. ನಮ್ಮ ಹೋರಾಟ ಗೆಲುವು ತಂದುಕೊಡುತ್ತದೆ. ಆಳುವ ಸರ್ಕಾರಕ್ಕೆ ನಮ್ಮ ಹೋರಾಟಗಳು ಎಚ್ಚರಿಕೆಯ ಗಂಟೆ ಬಾರಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸಂವಿಧಾನ ರಕ್ಷಣೆಗಾಗಿ ಜೈಭೀಮ್ ಜನಜಾಗೃತಿ ಜಾಥಾವನ್ನು ಪಕ್ಷವು ನಡೆಸುತ್ತಿದೆ ಎಂದು ತಿಳಿಸಿದರು.

ಬಿಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ಅಶೋಕ್ ಸಿದ್ದಾರ್ಥ್ ಮಾತನಾಡಿ, ಬಹುಸಂಖ್ಯಾತ ಭಾರತೀಯರು ಜಾತೀಯತೆ ಮತ್ತು ಕೋಮುವಾದದಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಬಡತನ ಬೇಗೆ ದೇಶದಲ್ಲಿ ತಾಂಡವವಾಡುತ್ತಿದೆ. ನಮ್ಮನ್ನಾಳಿದ ಎಲ್ಲಾ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿವೆ. ಇಂದಿನ ಕೆಲವರು ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ ಎಂದು
ಕಿಡಿಕಾರಿದರು.

ಸರ್ಕಾರಗಳು ರೈತರು ಮತ್ತು ಕಾರ್ಮಿಕರ ಹಿತಾಶಕ್ತಿಗಳನ್ನು ಕಾಪಾಡುವಂತಹ ನಿಯಮಗಳನ್ನು ಜಾರಿಗೆ ತರಬೇಕು. ದೇಶದಲ್ಲಿ ಸಮಾನತೆ ಕಲ್ಪಿಸಬೇಕು. ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದಿರುವ ಎಸ್‍ಸಿ, ಎಸ್ಟಿ, ಜನಾಂಗದ ಅಭಿವೃದ್ಧಿಗಾಗಿ ಸರ್ಕಾರಗಳು ವಿಶೇಷವಾಗಿ ಯೋಜನೆಗಳನ್ನು ರೂಪಿಸಿ ಅವರ ಅರ್ಥಿಕ ಮಟ್ಟ ಸುಧಾರಿಸಬೇಕು. ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೆಂದ್ರೀಕೃತವಾಗಿರುವ ಕೃಷಿ ಭೂಮಿ, ಕೈಗಾರಿಕೆ, ವ್ಯಾಪಾರ ಮುಂತಾದ ಆರ್ಥಿಕ ಕ್ಷೇತ್ರಗಳಲ್ಲಿ ಒಡೆತನದ ಪಾಲು ಪಡೆಯಲು ಸಮಾನ ಅವಕಾಶ ಕಲ್ಪಿಸಬೇಕಿದೆ ಎಂದರು.

ಪಕ್ಷದ ರಾಜ್ಯ ಅಧ್ಯಕ್ಷ ಎಂ ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ, ರಾಜ್ಯ ಸಂಯೋಜಕ ಗೋಪಿನಾಥ್ ಮಾತನಾಡಿದರು. ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಎಂ. ಕೃಷ್ಣಪ್ಪ, ರಾಜ್ಯ ಕಾರ್ಯದರ್ಶಿ ಎಂ. ನಾಗೇಶ್, ರಾಜ್ಯ ಉಸ್ತುವಾರಿ ದಿನೇಶ್ ಗೌತಮ್, ತಾಲ್ಲೂಕು ಅಧ್ಯಕ್ಷ ಸ್ವಾಮಿ, ಜಿಲ್ಲಾ ಸಂಯೋಜಕ ಅಶ್ವಥ್, ರಾಜ್ಯ ಉಪಾಧ್ಯಕ್ಷ ವಾಸು, ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ, ಜಿಲ್ಲಾ ಕಾರ್ಯದರ್ಶಿ ಮುರುಗೇಶ್, ಮುಖಂಡರಾದ ಶೇಖರ್, ಕಾಂತರಾಜು, ಮಂಗಳಗೌರಮ್ಮ, ಅನು, ಸುರೇಶ್, ವೆಂಕಟಾಚಲ, ರಾಮಣ್ಣ, ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT