ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: ಬಸ್‌ ಇಲ್ಲದೆ ಇರುಳಿಗರ ಪರದಾಟ

15 ಮಂದಿಗೆ ಸಾಗುವಳಿ ಚೀಟಿ ವಿತರಣೆ ವಿಳಂಬ
Last Updated 17 ಏಪ್ರಿಲ್ 2022, 6:51 IST
ಅಕ್ಷರ ಗಾತ್ರ

ಕನಕಪುರ: ‘ಗ್ರಾಮೀಣರು ಅಧಿಕಾರಿಗಳನ್ನು ಹುಡುಕಿಕೊಂಡು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಇಡೀ ತಾಲ್ಲೂಕು ಆಡಳಿತವೇ ಗ್ರಾಮಗಳಿಗೆ ಬರುತ್ತಿದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಸೋಮೆದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುಳಿಗರ ಕಾಲೊನಿಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಕಟ್ಟಕಡೆಯ ಗ್ರಾಮಗಳು ಹಾಗೂ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಆಗಬೇಕಿರುವ ಕೆಲಸ, ಅಗತ್ಯ ಮೂಲಸೌಕರ್ಯ, ಕುಂದುಕೊರತೆ ಮೊದಲಾದ ಸಮಸ್ಯೆಗಳನ್ನು ಕಾರ್ಯಕ್ರಮದಲ್ಲಿ ಅಧಿಕಾರಿಗಳ ಗಮನಕ್ಕೆ ತರಬಹುದು. ಇಲ್ಲವೇ ಅರ್ಜಿ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಕಾರ್ಯಕ್ರಮದಲ್ಲಿ ಗ್ರಾಮದವರಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನತೆಯು ಸಮಸ್ಯೆ ಹೇಳಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಗ್ರಾಮಕ್ಕೆ ಇಲ್ಲಿಯವರೆಗೂ ಬಸ್‌ ಸೌಕರ್ಯ ಕಲ್ಪಿಸಿಲ್ಲ. ವಿದ್ಯಾರ್ಥಿ ಗಳು, ವಯೋವೃದ್ಧರು ದೂರದ ಕೂತಗಾನಹಳ್ಳಿಗೆ ನಡೆದು ಕೊಂಡು ಹೋಗಬೇಕಿದೆ. ಹಾಗಾಗಿ, ಶೀಘ್ರವೇ ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸ ಬೇಕು ಎಂದು ಮನವಿ ಮಾಡಿದರು.

ಗ್ರಾಮದಲ್ಲಿ 1ರಿಂದ 7 ನೇ ತರಗತಿವರೆಗೆ ಮಾತ್ರ ಶಾಲೆಯಿದೆ. 8 ರಿಂದ 10ನೇ ತರಗತಿವರೆಗೆ ತೆಂಗನಾಯ್ಕನಹಳ್ಳಿಗೆ ಹೋಗಬೇಕಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಗ್ರಾಮದಲ್ಲೇ ಇರುವ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಇರುಳಿಗರ ಕಾಲೊನಿಯು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿದೆ. ಗ್ರಾಮದ ಜನತೆಗೆ ಅರಣ್ಯ ಹಕ್ಕು ಕಾಯ್ದೆಯಡಿ ಕೆಲವು ವರ್ಷಗಳ ಹಿಂದೆ ಸಾಗುವಳಿ ಚೀಟಿ ನೀಡಲಾಗಿದೆ. ಇನ್ನು 14 ಮಂದಿಗೆ ಸಾಗುವಳಿ ಚೀಟಿ ಬಾಕಿಯಿದೆ. ಅವರಿಗೂ ನೀಡಬೇಕು ಎಂದು ಕೋರಿದರು.

ಭೂ ಮಂಜೂರಾತಿ 14, ಪಿಂಚಣಿ 46, ಭೂಮಿ ದುರಸ್ತಿ 2, ಒತ್ತುವರಿ ತೆರವು 2, ಆಶ್ರಯ ಮನೆ 2, ಆರ್‌ಆರ್‌ಟಿ ತಕರಾರು ಇತ್ಯರ್ಥ 2, ಮತದಾರರು ಗುರುತಿನ ಚೀಟಿ 1, ಸರ್ವೆ 2 ಹಾಗೂ ಸಾರಿಗೆ ವ್ಯವಸ್ಥೆಗಾಗಿ 1 ಅರ್ಜಿ ಸಲ್ಲಿಕೆಯಾಗಿವೆ.

ಪಿಂಚಣಿ ಅರ್ಜಿಗಳ ಪೈಕಿ 10 ಅರ್ಜಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಆದೇಶ ಪ್ರತಿ ನೀಡಿದ ತಹಶೀಲ್ದಾರ್‌ ಅವರು,ಸಾರಿಗೆ ವ್ಯವಸ್ಥೆ ಸಂಬಂಧ ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್‌ ಜತೆ ಚರ್ಚಿಸಿ ಶೀಘ್ರವೇ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಸಾಗುವಳಿ ಚೀಟಿ ನೀಡುವಂತೆ ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಉಳಿದ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರವೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಲ್‌. ಮಧು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು, ಪಂಚಾಯಿತಿ ಅಧ್ಯಕ್ಷೆ ಶ್ರುತಿ ಹೇಮಂತ್‌, ಉಪಾಧ್ಯಕ್ಷ ಎಸ್‌.ಎಂ. ಮಹೇಶ್‌‌, ಟಿಎಚ್‌ಒ ಡಾ.ಬಿ. ನಂದಿನಿ, ವಿ.ಆರ್‌. ದೊಡ್ಡಿ ಪಿಎಚ್‌ಸಿಯ ಡಾ.ಭಾಗ್ಯಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆಯ ಜಯಪ್ರಕಾಶ್‌, ಬಿಇಒ ಜೆ.ಎಂ. ಜಯಲಕ್ಷ್ಮಿ, ಅರಣ್ಯ ಇಲಾಖೆಯ ದಾಳೇಶ್‌, ರೇಷ್ಮೆ ಇಲಾಖೆಯ ಶಕುಂತಲಾ, ಕೃಷಿ ಇಲಾಖೆಯ ರವಿಕುಮಾರ್‌, ತೋಟಗಾರಿಕೆ ಇಲಾಖೆಯ ಮೈತ್ರಿ, ಮೀನುಗಾರಿಕೆ ಇಲಾಖೆಯ ಮುನಿವೆಂಕಟಪ್ಪ, ಅಬಕಾರಿ ಸಬ್‌ ಇನ್‌ಸ್ಪೆಕ್ಟರ್‌ ಹೇಮಂತ್‌ಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT