ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಪುರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲ

ಹೊಸಪೇಟೆ ಸರ್ಕಲ್‌ಗೆ ನಾಮಕರಣ: ಕಾಂಗ್ರೆಸ್‌–ಜೆಡಿಎಸ್‌ ಸದಸ್ಯರ ವಾಕ್ಸಮರ
Last Updated 19 ಸೆಪ್ಟೆಂಬರ್ 2021, 5:18 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದಲ್ಲಿ ಶನಿವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತು. ಹೊಸಪೇಟೆ ಸರ್ಕಲ್‌ಗೆ ಹೊಸ ಹೆಸರು ನಾಮಕರಣ ಮಾಡುವುದು ಮತ್ತು ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಎರಡೂ ಪಕ್ಷದ ಸದಸ್ಯರ ನಡುವೆ ಗದ್ದಲ ತಲೆದೋರಿತು.

‘ಹೊಸಪೇಟೆ ಸರ್ಕಲ್‌ಗೆ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಹೆಸರನ್ನು ಇಡುವಂತೆ ಈ ಹಿಂದೆ ಪುರಸಭೆಯಲ್ಲಿ ನಿಯಮಾವಳಿ ಮಾಡಿದ್ದೇವೆ. ನಾಮಫಲಕ ಹಾಕಿಸಬೇಕು’ ಎಂದು ಸದಸ್ಯರಾದ ಎಚ್.ಜೆ. ಪುರುಷೋತ್ತಮ್, ರಂಗಹನುಮಯ್ಯ ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಶ್ವತ್ಥ, ‘ಜೀವಂತ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡುವಂತಿಲ್ಲ. ಹೊಸಪೇಟೆ ಸರ್ಕಲ್‌ಗೆ ಅಗ್ನಿಬನ್ನಿರಾಯಸ್ವಾಮಿ ಸರ್ಕಲ್ ಎಂದು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

ಆಗ ಸದಸ್ಯರಾದ ಎಂ.ಎನ್. ಮಂಜುನಾಥ್ , ಕೆ.ವಿ. ಬಾಲು, ‘ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹೆಸರನ್ನು ಉದ್ಯಾನಕ್ಕೆ ನಾಮಕರಣ ಮಾಡಿಲ್ಲವೇ’ ಎಂದು ಪ್ರಶ್ನಿಸಿದರು.

ಶಾಸಕ ಎ. ಮಂಜುನಾಥ್ ಮಾತನಾಡಿ, ‘ಎಚ್.ಎಂ. ರೇವಣ್ಣ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಬಿಜೆಪಿ ಮುಖಂಡ ಎ.ಎಚ್. ಬಸವರಾಜು ಅವರೊಂದಿಗೆ ಚರ್ಚಿಸಿ ಸರ್ಕಲ್‌ಗೆ ರೇವಣ್ಣ ಅವರ ಹೆಸರನ್ನು ಮತ್ತು ಸಿಹಿನೀರು ಬಾವಿ ಸರ್ಕಲ್‌ಗೆ ಅಗ್ನಿಬನ್ನಿರಾಯಸ್ವಾಮಿ ಎಂದು ನಾಮಕರಣ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸದಸ್ಯರಾದ ರಂಗಹನುಮಯ್ಯ, ರಿಯಾಜ್ ಮಾತನಾಡಿ, ‘ಕೋಳಿ ಕೇಳಿ ಮಸಾಲೆ ಅರೆಯುವುದು ಬೇಡ. ಪುರಸಭೆಯಲ್ಲಿಯೇ ತೀರ್ಮಾನವಾಗಲಿ’ ಎಂದರು. ಆ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಸದಸ್ಯರ ನಡುವೆ ಮಾತಿನ ಸಮರವೇ ನಡೆಯಿತು. ಮಧ್ಯಪ್ರವೇಶಿಸಿದ ಶಾಸಕರು ಸದಸ್ಯರನ್ನು ಕುಳಿತುಕೊಳ್ಳುವಂತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಶಿವಕುಮಾರ್, ‌‘ಶಾಸಕರಿಗೆ ಮಾತನಾಡುವ ಅಧಿಕಾರವಿಲ್ಲ. ಸುಮ್ಮನಿರಿ’ ಎಂದು ಕೈತೋರಿಸಿ ಜೋರು ಧ್ವನಿಯಲ್ಲಿ ಕೂಗಿದರು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಸದಸ್ಯರು ಶಿವಕುಮಾರ್ ಮೇಲೆ ಹರಿಹಾಯ್ದರು.

ಪುರಸಭೆ ಮುಖ್ಯಾಧಿಕಾರಿ ಭಾರತಿ ಎ. ಮಾತನಾಡಿ, ‘ಸಭೆಯ ಗೌರವ ಉಳಿಸಬೇಕು. ಸರ್ಕಾರದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದೇನೆ. ತಾಳ್ಮೆಯಿಂದ ವರ್ತಿಸದಿದ್ದರೆ ಕ್ರಮಕೈಗೊಳ್ಳಬೇಕಾದೀತು’ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರನಡೆದ ಬಳಿಕ 4ನೇ ವಾರ್ಡ್‌ ಸದಸ್ಯ ಕಾಂತರಾಜ್ ಅವರನ್ನು ಸರ್ವಾನುಮತದಿಂದ ಸ್ಥಾಯಿಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆವಹಿಸಿದ್ದರು.ಉಪಾಧ್ಯಕ್ಷ ರಹಮತ್ ಉಲ್ಲಾಖಾನ್, ಸದಸ್ಯರು
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT