ಚನ್ನಪಟ್ಟಣ: ಕಾವೇರಿ ನೀರಿನ ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆ ಪ್ರಾರಂಭಿಸುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಗರದಲ್ಲಿ ಗುರುವಾರದಿಂದ ನಿರಂತರ ಪ್ರತಿಭಟನೆ ಆರಂಭಿಸಿತು.
ನಗರದ ಅಂಚೆ ಕಚೇರಿ ರಸ್ತೆಯ ಕಾವೇರಿ ಸರ್ಕಲ್ ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಹಾಗೂ ರೈತಸಂಘದ ಪದಾಧಿಕಾರಿಗಳು ಜಮಾಯಿಸಿ ನೂರು ದಿನಗಳ ನಿರಂತರ ಹೋರಾಟಕ್ಕೆ ಚಾಲನೆ ನೀಡಿದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಕಾವೇರಿ ನೀರು ಉಳಿಸಲು ಈಗಾಗಲೇ ಎರಡು ಬಾರಿ ಬಂದ್ ಮಾಡಲಾಗಿದೆ. ವೇದಿಕೆಯಿಂದ ಕಾವೇರಿ ನೀರಿನಲ್ಲಿ ನಿಂತು ಹೋರಾಟ ಮಾಡಲಾಗಿದೆ. ಇಷ್ಟಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯ ಕಾವೇರಿ ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಂದೋಲನ ಮಾಡಲು ವೇದಿಕೆಯಿಂದ ನಿರಂತರ ಧರಣಿಗೆ ಚಾಲನೆ ನೀಡಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ 10ರಿಂದ 11 ಗಂಟೆವರೆಗೆ ನಗರದಲ್ಲಿ ಶಾಂತಿಯುತ ಧರಣಿ ಮಾಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಳೆ ಇಲ್ಲದ ಸಂದರ್ಭದಲ್ಲಿ ನೀರನ್ನು ಯಾವ ರೀತಿ ಹಂಚಿಕೆ ಮಾಡಿಕೊಳ್ಳಬೇಕು, ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾ, ರೈತರ ಕೃಷಿಗೆ ಆಧ್ಯತೆ ನೀಡಬೇಕಾ ಎಂದು ಎರಡೂ ರಾಜ್ಯಗಳು ಒಟ್ಟಾಗಿ ಸಂಕಷ್ಟ ಸೂತ್ರ ರಚಿಸಿ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ನ ಮುಂದಿಟ್ಟು ನಮ್ಮ ನೋವನ್ನು ಹೇಳಿಕೊಂಡು ಕಾವೇರಿ ನೀರು ಹಂಚಿಕೆ ಪ್ರಾಧಿಕಾರಕ್ಕೆ ಪ್ರತ್ಯೇಕ ಕಾನೂನು ಮಾಡಬೇಕು.
ಜೊತೆಗೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರಕ್ಕೆ ನುರಿತ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳಬೇಕು. ಜೊತೆಗೆ ಕಾವೇರಿ ಕೊಳ್ಳದ ಕೆರೆಕಟ್ಟೆಗಳ ಒತ್ತುವರಿ ತೆರವು ಮತ್ತು ಹೂಳೆತ್ತಲು ಕ್ರಮ ಕೈಗೊಳ್ಳಬೇಕು. ನಾಲೆಗಳನ್ನು ದುರಸ್ತಿ ಮಾಡಬೇಕು. ಕಾವೇರಿ ನೀರಿನ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಯ ಜಾರಿಗೆ ಅಡಿಗಲ್ಲು ಇಡುವವರೆಗೆ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ವಿವಿಧ ಸಂಘಟನೆಗಳ ಸಹಕಾರದಲ್ಲಿ ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಜಗದಾಪುರ ಕೃಷ್ಣೇಗೌಡ, ಉಪಾಧ್ಯಕ್ಷ ರಂಜಿತ್ ಗೌಡ, ನಿವೃತ್ತ ಪ್ರಾಂಶುಪಾಲ ಟಿ.ವಿ.ರಂಗಸ್ವಾಮಿ, ರೈತ ಸಂಘದ ತಾಲ್ಲೂಖು ಘಟಕದ ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಕನ್ನಸಂದ್ರ ರಾಜು, ವೇದಿಕೆಯ ಪದಾಧಿಕಾರಿಗಳಾದ ಗೌಡಗೆರೆ ಕೊದಂಡರಾಮು, ಚಕ್ಕರೆ ರಾಮೇಗೌಡ, ರಘು, ಮೈಲನಾಯ್ಕನಹಳ್ಳಿ ಅಜಯ್, ಚಿಕ್ಕೇನಹಳ್ಳಿ ಸುರೇಶ್, ಸಿದ್ದಪ್ಪಾಜಿ, ಮಂಗಳವಾರಪೇಟೆ ತಿಮ್ಮರಾಜು, ರವಿ, ಚಿನ್ಮಯ್ ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.