ಸೋಮವಾರ, ಜೂನ್ 14, 2021
26 °C
ಎರಡು ದಿನ ನಾಲ್ಕು ವಿಷಯಗಳ ಪರೀಕ್ಷೆ

ಸಿಇಟಿ ಪರೀಕ್ಷೆ 29ರಿಂದ ; ಐದು ಕೇಂದ್ರಗಳಲ್ಲಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದ್ವಿತೀಯ ಪಿಯುಸಿ ಮುಗಿಸಿ ವೈದ್ಯಕೀಯ, ಎಂಜಿನಿಯರಿಂಗ್‌ ಕೋರ್ಸಿಗೆ ಸೇರಿಕೊಳ್ಳುವ ಉತ್ಸಾಹದಲ್ಲಿ ಇರುವ ವಿದ್ಯಾರ್ಥಿಗಳು ಏ.29 ಮತ್ತು 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲಿದ್ದಾರೆ.

ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿನ ಐದು ಪರೀಕ್ಷಾ ಕೇಂದ್ರಗಳಲ್ಲಿ ಈ ಸಾಲಿನಲ್ಲಿ ಒಟ್ಟು 1,892 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ದಿನಕ್ಕೆ ಎರಡು ವಿಷಯದಂತೆ ಎರಡು ದಿನದಂದು ನಾಲ್ಕು ವಿಷಯ ಪರೀಕ್ಷೆಗಳು ನಡೆಯಲಿವೆ.

ಸೋಮವಾರ ಬೆಳಗ್ಗೆ 10.30ಕ್ಕೆ ಮೊದಲಿಗೆ ಜೀವವಿಜ್ಞಾನ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆಯಲಿದ್ದಾರೆ. ಮಂಗಳವಾರ ಬೆಳಗ್ಗೆ ಭೌತವಿಜ್ಞಾನ ಹಾಗೂ ಮಧ್ಯಾಹ್ನ ರಸಾಯನ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.

ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಹೊರಡಿಸಿ ಈಗಾಗಲೇ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ಅವಧಿಯಲ್ಲಿ ಸುತ್ತಲಿನ ಜೆರಾಕ್ಸ್‌ ಕೇಂದ್ರಗಳು ಮುಚ್ಚಲಿವೆ. ಪರೀಕ್ಷಾ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪ್ರತಿ ಕೇಂದ್ರದಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಲಿದೆ.

ಪರೀಕ್ಷೆಗೆ ಹೋಗುವವರಿಗೆ ಕೆಲವು ನಿಬಂಧನೆಗಳೂ ಇವೆ. ವಿದ್ಯಾರ್ಥಿಗಳು ಕೇಂದ್ರದೊಳಗೆ ಕೈಗಡಿಯಾರ,  ಕ್ಯಾಲ್ಕುಲೇಟರ್‌ ಮೊದಲಾದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕೊಂಡೊಯ್ಯವಂತಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕೆ ಪ್ರತಿ ಕೊಠಡಿಯಲ್ಲೂ ದೊಡ್ಡ ಗಡಿಯಾರದ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಸಹಾಯಕಿಯರ ಸೌಲಭ್ಯವನ್ನು ಒದಗಿಸಿದ್ದು, ತುರ್ತು ಚಿಕಿತ್ಸೆಯೂ ಸಿಗಲಿದೆ.

ಎಲ್ಲೆಲ್ಲಿ ಪರೀಕ್ಷಾ ಕೇಂದ್ರ
ರಾಮನಗರದ ಬಾಲಕರ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪರೀಕ್ಷೆ ನಡೆಯಲಿದೆ. ಚನ್ನಪಟ್ಟಣದಲ್ಲಿ ಬಾಲಕರ ಹಾಗೂ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ.

ಅನುತ್ತೀರ್ಣರಾದವರಿಗೂ ಅವಕಾಶ
ಪ್ರತಿ ವರ್ಷ ಸಿಇಟಿ ಪರೀಕ್ಷೆ ಬರೆದ ನಂತರ ದ್ವಿತೀಯ ಪಿ.ಯು. ಫಲಿತಾಂಶ ಪ್ರಕಟವಾಗುತ್ತಿತ್ತು. ಈ ವರ್ಷ ಪದವಿಪೂರ್ವ ಶಿಕ್ಷಣ ಮಂಡಳಿಯು ಸಿಇಟಿಗೂ ಮುನ್ನವೇ ಫಲಿತಾಂಶ ಪ್ರಕಟಿಸಿದೆ. ಅನುತೀರ್ಣರಾದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸಿಇಟಿ ಬರೆದು, ಮುಂದೆ ಪೂರಕ ಪರೀಕ್ಷೆಯಲ್ಲಿ ಪಾಸಾಗಿ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದಾಗಿದೆ.

* ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಸಿಟಿವಿ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸವಿತಾ
ಡಿಡಿಪಿಯು ರಾಮನಗರ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು