ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸ್ವಾಭಿಮಾನ’ ಅಸ್ತ್ರದೊಂದಿಗೆ ಅಖಾಡಕ್ಕೆ ‘ಸೈನಿಕ’ !

ಸಿ.ಪಿ. ಯೋಗೇಶ್ವರ್‌ಗೆ ‘ಮೈತ್ರಿ’ ಟಿಕೆಟ್ ಸಾಧ್ಯತೆ ಕ್ಷೀಣ; ಆ.11ಕ್ಕೆ ಸ್ವಾಭಿಮಾನ ಸಮಾವೇಶ
Published 9 ಆಗಸ್ಟ್ 2024, 4:22 IST
Last Updated 9 ಆಗಸ್ಟ್ 2024, 4:22 IST
ಅಕ್ಷರ ಗಾತ್ರ

ರಾಮನಗರ: ಮುಡಾ ಹಗರಣ ಮುಂದಿಟ್ಟುಕೊಂಡು ಬಿಜೆಪಿ–ಜೆಡಿಎಸ್‌ ನಾಯಕರು ಒಂದೆಡೆ ಭರ್ಜರಿಯಾಗಿ ‘ಮೈಸೂರು ಚಲೋ’ ಪಾದಯಾತ್ರೆ ಮಾಡುತ್ತಿದ್ದರೆ, ಇತ್ತ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಅದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಚನ್ನಪಟ್ಟಣ ಉಪ ಚುನಾವಣೆ ಸ್ಪರ್ಧೆಗೆ ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ.

ಮೈತ್ರಿ ಅಭ್ಯರ್ಥಿಯಾಗಿ ತಮ್ಮನ್ನು ಕಣಕ್ಕಿಳಿಸುವ ಸಾಧ್ಯತೆ ಕ್ಷೀಣವಾದ ಬೆನ್ನಲ್ಲೇ ಮತ್ತೊಮ್ಮೆ ಚನ್ನಪಟ್ಟಣ ಅಖಾಡದಲ್ಲಿ ‘ಸ್ವಾಭಿಮಾನ’ದ ಅಸ್ತ್ರ ಝಳಪಿಸಲು ತೆರೆಯ ಮರೆಯಲ್ಲಿ ತಯಾರಿ ನಡೆಸಿದ್ದಾರೆ.

ಇದೇ ಉದ್ದೇಶದೊಂದಿಗೆ ಸಮಾನ ಮನಸ್ಕರ ವೇದಿಕೆ ಮತ್ತು ಯೋಗೇಶ್ವರ್ ಅಭಿಮಾನಿ ಬಳಗದ ನೇತೃತ್ವದಲ್ಲಿ ‘ನಮ್ಮ ಶಾಸಕ, ನಮ್ಮ ಹಕ್ಕು’ ಹೆಸರಿನಲ್ಲಿ ಆಗಸ್ಟ್ 11ರಂದು ಚನ್ನಪಟ್ಟಣದಲ್ಲಿ ‘ಸ್ವಾಭಿಮಾನಿ ಸಮಾವೇಶ’ ಹಮ್ಮಿಕೊಂಡಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಎದುರು ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್‌ ಆಗಲೂ ‘ಸ್ವಾಭಿಮಾನ’ದ ಅಸ್ತ್ರ ಪ್ರಯೋಗಿಸಿದ್ದರು. ಆದರೆ, ಅದು ನಿರೀಕ್ಷಿತ ಫಲ ನೀಡಿರಲಿಲ್ಲ.

ಉಪ ಚುನಾವಣೆಯಲ್ಲಿ ಹಳೆಯ ‘ಸ್ವಾಭಿಮಾನ’ ಅಸ್ತ್ರವನ್ನು ಸಾಣೆ ಹಿಡಿದು ಬಿಜೆಪಿ–ಜೆಡಿಎಸ್ ಎರಡಕ್ಕೂ ಸವಾಲು ಹಾಕಲು ಮುಂದಾಗಿದ್ದಾರೆ. ಈ ಬಾರಿ ‘ಸ್ಥಳೀಯ’, ‘ಮನೆಯ ಮಗ’, ‘ಕೆರೆಗಳನ್ನು ತುಂಬಿಸಿದ ಮಣ್ಣಿನ ಮಗ’ ಎಂಬ ಹೊಸ ಲೇಪನ ಬಳಿದು ಹೊಳಪು ನೀಡುತ್ತಿದ್ದಾರೆ. ಹೊರಗಿನವರು ಮತ್ತು ಸ್ಥಳೀಯ ಎಂಬ ಹೊಸ ಪರಿಕಲ್ಪನೆಗಳನ್ನು ಹರಿಬಿಡುತ್ತಿದ್ದಾರೆ. 

ಬದ್ಧ ರಾಜಕೀಯ ವೈರಿಗಳಾಗಿದ್ದ ಸಿಪಿವೈ ಮತ್ತು ಎಚ್‌ಡಿಕೆ ಈಚೆಗೆ ನಡೆದ ಲೋಕಸಭಾ ಚುನಾವಣೆ ವೇಳೆ ಮೈತ್ರಿಯಿಂದಾಗಿ ಒಂದಾಗಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ಡಾ.ಸಿ.ಎನ್. ಮಂಜುನಾಥ್ ಪಾಲಾದಾಗ ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ತಮಗೇ ಎಂಬ ವಿಶ್ವಾಸದಲ್ಲಿ ಸಿಪಿವೈ ಇದ್ದರು. ಆದರೆ, ನಂತರದ ರಾಜಕೀಯದ ಬೆಳವಣಿಗೆಗಳು ಇಬ್ಬರ ನಡುವೆ ಬಿರುಕು ಮೂಡಿಸಿವೆ.

ಕೈ ಹಿಡಿಯುವುದೇ ಸ್ವಾಭಿಮಾನ?: ಆರಂಭದಲ್ಲಿ ಬೆಂಬಲಿಗರ ಮೂಲಕವೇ ಬಿಜೆಪಿ ಅಥವಾ ಜೆಡಿಎಸ್‌ನಿಂದಲಾದರೂ ಟಿಕೆಟ್ ಗಿಟ್ಟಿಸಿಕೊಳ್ಳಲು ಎಲ್ಲಾ ರೀತಿಯಿಂದಲೂ ಸಿಪಿವೈ ಯತ್ನಿಸಿದ್ದರು. ಸದ್ಯದ ಸ್ಥಿತಿಯಲ್ಲಿ ಎರಡೂ ಪಕ್ಷಗಳ ಬಾಗಿಲು ಮುಚ್ಚಿ, ಎಚ್‌ಡಿಕೆ ಕೈ ಮೇಲಾಗುವ ಸಾಧ್ಯತೆ ಕಂಡುಬರುತ್ತಿದೆ. ಈಗ ಅವರಿಗೆ ಉಳಿದಿರುವುದು ಸ್ವತಂತ್ರ ಸ್ಪರ್ಧೆ ಮಾರ್ಗವಷ್ಟೆ. ಇಲ್ಲದಿದ್ದರೆ, ಕಾಂಗ್ರೆಸ್ ಕದ ಬಡಿಯಬೇಕು. ಅದಕ್ಕಿಂತ ಸ್ವತಂತ್ರವಾಗಿ ಸ್ಪರ್ಧಿಸುವುದೇ ಸುರಕ್ಷಿತ ಎನ್ನುವ ಆಲೋಚನೆಯಲ್ಲಿ ಅವರಿದ್ದಾರೆ ಎನ್ನುತ್ತಾರೆ ಅವರ ಬೆಂಬಲಿಗರು.  

ಗೆಲುವು ಖಚಿತ: ‘ಐದು ಸಲ ಶಾಸಕರಾಗಿ ಎರಡು ಸಲ ಸಚಿವರಾಗಿರುವ ಯೋಗೇಶ್ವರ್ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅವರ ಮುಂದೆ ಎಚ್‌ಡಿಕೆ ಮತ್ತು ಡಿಕೆಶಿ ಕೊಡುಗೆ ಏನೂ ಇಲ್ಲ. ಕ್ಷೇತ್ರದ ಕೆರೆಗಳನ್ನು ತುಂಬಿಸಿ ರೈತರ ಬದುಕು ಹಸನುಗೊಳಿಸಿದ್ದಾರೆ. ಏನೇ ಕಷ್ಟ–ಸುಖವಿದ್ದರೂ ಜೊತೆಯಲ್ಲಿರುತ್ತಾರೆ. ಹಾಗಾಗಿ, ಉಪ ಚುನಾವಣೆಯಲ್ಲಿ ಅವರ ಪರವಾದ ಅಲೆ ಎದ್ದಿದೆ.  ಚುನಾವಣೆಯಲ್ಲಿ ಸಿಪಿವೈ ಗೆಲುವು ಖಚಿತ’ ಎನ್ನುವುದು ಸ್ಥಳೀಯ ಬಿಜೆಪಿ ಮುಖಂಡರ ವಿಶ್ವಾಸ.  

ಪಾದಯಾತ್ರೆಯಲ್ಲೇ ಮುನಿಸು

ಬಹಿರಂಗ ಟಿಕೆಟ್ ಸಿಗುವುದಿಲ್ಲ ಎಂಬ ಸಂದೇಶ ಎರಡು ದಿನಗಳ ಹಿಂದೆಯಷ್ಟೇ ಚನ್ನಪಟ್ಟಣ ಹಾದು ಹೋದ ‘ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಯೋಗೇಶ್ವರ್‌ ಅವರಿಗೆ ಮತ್ತಷ್ಟು ಖಚಿತವಾಗಿದೆ. ಮಾರ್ಗದುದ್ದಕ್ಕೂ ಹಾಕಿದ್ದ ಫ್ಲೆಕ್ಸ್‌ಗಳಲ್ಲಿ ಅವರ ಭಾವಚಿತ್ರವಿರಲಿಲ್ಲ. ಪಾದಯಾತ್ರೆಯಲ್ಲಿ ಅವರು ಅರೆಕ್ಷಣ ಪ್ರತ್ಯಕ್ಷವಾಗಿ ಮಾಯವಾದರು. ಬಹಿರಂಗ ಭಾಷಣದ ಸಂದರ್ಭದಲ್ಲಿ ಅವರಿಗೆ ಟಿಕೆಟ್ ಕೇಳಿದ ಬೆಂಬಲಿಗರ ಮೇಲೆ ಎಚ್‌ಡಿಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಇಷ್ಟಾದರೂ ಬಿಜೆಪಿ ರಾಜ್ಯ ನಾಯಕರು ಜಿಲ್ಲೆಯಲ್ಲಿರುವ ಪಕ್ಷದ ನಾಯಕನ ಬೆಂಬಲಕ್ಕೆ ನಿಂತಿಲ್ಲ. ಇದರ ಬೆನ್ನಲ್ಲೇ ಸ್ವಾಭಿಮಾನದ ಸಮಾವೇಶಕ್ಕೆ ಯೋಗೇಶ್ವರ್ ಭರದಿಂದ ಸಿದ್ಧತೆ ಶುರು ಮಾಡಿದ್ದಾರೆ.

ವ್ಯಕ್ತಿ ಕೇಂದ್ರಿತ ಚುನಾವಣೆ 

ಚನ್ನಪಟ್ಟಣದಿಂದ ಎರಡು ಸಲ ಗೆದ್ದಿರುವ ಕುಮಾರಸ್ವಾಮಿ ಮೂಲತಃ ಹಾಸನದವರು. ರಾಮನಗರದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದ ಅವರು ನಂತರ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದ್ದರು. ಚನ್ನಪಟ್ಟಣದಲ್ಲಿ ‘ಹೊಸ ರಾಜಕೀಯ ಅಧ್ಯಾಯ ಶುರು’ ಎಂದು ಅಖಾಡ ಪ್ರವೇಶಿಸಿರುವ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಕನಕಪುರದವರು. ಈ ಇಬ್ಬರೂ ಹೊರಗಿನ ನಾಯಕರ ಮಧ್ಯೆ ಸ್ಥಳೀಯರಾದ ತಾವು ಸ್ವಾಭಿಮಾನದ ಅಸ್ತ್ರದೊಂದಿಗೆ ಕಣಕ್ಕಿಳಿದರೆ ಗೆಲುವಿನ ದಡ ಸೇರಬಹುದು. ಕೊನೆಯವರೆಗೂ ಮೈತ್ರಿ ಅಭ್ಯರ್ಥಿಯಾಗಲು ಯತ್ನಿಸುವುದು. ಒಂದು ವೇಳೆ ಪಕ್ಷ ಕೈಕೊಟ್ಟರೆ ಸ್ವತಂತ್ರವಾಗಿಯಾದರೂ ಸರಿಯೇ ಕಣಕ್ಕಿಳಿದು ಸಡ್ಡು ಹೊಡೆಯಲು ಮಾನಸಿಕವಾಗಿ ಅವರು ಸಿದ್ಧರಾಗಿದ್ದಾರೆ. ಈ ಉದ್ದೇಶದಿಂದಾಗಿಯೇ ಪಾದಯಾತ್ರೆ ಬಗ್ಗೆ ಅಷ್ಟಾಗಿ ಆಸಕ್ತಿ ವಹಿಸದೆ ದೂರ ಉಳಿದಿರುವ ಅವರು ಸ್ವತಂತ್ರವಾಗಿ ಸ್ಪರ್ಧಿಸಲು ತೆರೆಯ ಮರೆಯಲ್ಲಿ ತಯಾರಿ ನಡೆಸಿದ್ದಾರೆ. ರಾಜಕೀಯ ಪಕ್ಷಗಳ ಕೇಂದ್ರೀತವಾಗಿರುವ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತವಾಗಿ ಬದಲಿಸುವ ಲೆಕ್ಕಾಚಾರ ಯೋಗೇಶ್ವರ್‌ ಅವರದ್ದು ಎನ್ನುತ್ತಾರೆ ಅವರ ಆಪ್ತರು. 

ಮೈತ್ರಿ ನಾಯಕರಿಗೆ ಸಂದೇಶ ರವಾನೆ

‘ಸ್ವಾಭಿಮಾನಿ ಸಮಾವೇಶ’ ತಾಲ್ಲೂಕಿನ ರಾಜಕೀಯ ಅಸ್ಮಿತೆ ಮತ್ತು ಸ್ವಾಭಿಮಾನ ತೀರ್ಮಾನಿಸುವ ರಾಜಕೀಯ  ದಿಕ್ಸೂಚಿಯಾಗಲಿದೆ. ನಾನು ರಾಜಕೀಯದಲ್ಲಿ ಮುಂದುವರೆಯಬೇಕೇ ಅಥವಾ ಬೇಡವೇ ಎಂಬ ಕುರಿತು  ತೀರ್ಮಾನವಾಗಲಿದೆ. ನನ್ನ ಬೆಂಬಲಿಗರು ಮತ್ತು ಹಿತೈಷಿಗಳ ತೀರ್ಮಾನಕ್ಕೆ ಬದ್ಧವಾಗಿರುವೆ ಎಂದು ಬೆಂಬಲಿಗರ ಸಭೆಯಲ್ಲಿ ಯೋಗೇಶ್ವರ್ ಹೇಳಿದ್ದಾರೆ. ಆ ಮೂಲಕ ಪಕ್ಷದ ಟಿಕೆಟ್‌ ಸಿಗದಿದ್ದರೆ ಸ್ವತಂತ್ರವಾಗಿ ತಮ್ಮ ಸ್ಪರ್ಧೆ ಖಚಿತ ಎಂಬ ಸಂದೇಶವನ್ನು ಬಿಜೆಪಿ–ಜೆಡಿಎಸ್ ಪಕ್ಷದ ನಾಯಕರಿಗೆ ರವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT