ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕೋಳಿ ಫಾರಂಗಳು ಖಾಲಿ ಖಾಲಿ, ₹200ರ ಗಡಿ ತಲುಪಿದ ಕೋಳಿ ಮಾಂಸ!

ವಿವಿಧೆಡೆ ಪೂರೈಕೆಯಲ್ಲಿ ವ್ಯತ್ಯಯ
Last Updated 11 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ರಾಮನಗರ: ತಿಂಗಳ ಹಿಂದಷ್ಟೇ ಕೇಳುವವರೇ ಗತಿ ಇಲ್ಲದ ಸ್ಥಿತಿಗೆ ತಲುಪಿದ್ದ ಕೋಳಿ ಮಾಂಸ ಒಂದೇ ತಿಂಗಳಲ್ಲಿ ದುಪ್ಪಟ್ಟು ಬೆಲೆ ಏರಿಸಿಕೊಂಡಿದ್ದು, ಇದೀಗ ಪ್ರತಿ ಕೆ.ಜಿ.ಗೆ ₹200ರ ಗಡಿ ತಲುಪಿದೆ.

ಲಾಕ್‌ಡೌನ್ ನಡುವೆಯೂ ಜಿಲ್ಲೆಯಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಮಾಂಸ ಕೊಳ್ಳುವ ಸಲುವಾಗಿ ಅಂಗಡಿಗಳತ್ತ ಹೆಜ್ಜೆ ಹಾಕಿದ ಗ್ರಾಹಕರು ಬೆಲೆ ಕೇಳಿಯೇ ಹೌಹಾರುವಂತೆ ಆಗಿದೆ. ಶನಿವಾರ ಇಲ್ಲಿನ ಅಂಗಡಿಗಳಲ್ಲಿ ಜೀವಂತ ಕೋಳಿಯ ಬೆಲೆ ₹130 ಹಾಗೂ ಮಾಂಸದ ಬೆಲೆ ₹180-200 ವರೆಗೂ ನಡೆಯಿತು. ಅನೇಕ ಕಡೆಗಳಲ್ಲಿ ಕೋಳಿ ದಾಸ್ತಾನು ಇಲ್ಲದ ಸ್ಥಿತಿಯೂ ಇತ್ತು.

ದಿಢೀರ್‌ ಏರಿಕೆ: ಹಕ್ಕಿಜ್ವರ ಭೀತಿ ಹಾಗೂ ಕೊರೊನಾ ಕುರಿತ ಅಪಪ್ರಚಾರದಿಂದ ಇಡೀ ಕುಕ್ಕುಟೋದ್ಯಮ ತಿಂಗಳ ಹಿಂದಷ್ಟೇ ಪಾತಾಳಕ್ಕೆ ಕುಸಿದಿತ್ತು. ಮೈಸೂರು ಮೊದಲಾದ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಹರಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋಳಿ ಮಾಂಸ ಮಾರಾಟಕ್ಕೆ ವಾರಗಳ ಕಾಲ ನಿಷೇಧ ಹೇರಲಾಗಿತ್ತು. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಹಕ್ಕಿ ಜ್ವರದ ಭೀತಿಯಿಂದಾಗಿ ಗ್ರಾಹಕರು ಚಿಕನ್‌ ತಿನ್ನಲು ಹಿಂದೇಟು ಹಾಕಿದರು. ಇದರಿಂದಾಗಿ ಬೇಡಿಕೆ ಕುಸಿದು ಬೆಲೆಯೂ ಪಾತಾಳಕ್ಕೆ ಇಳಿದಿತ್ತು.

ಮತ್ತೊಂದೆಡೆ ಚಿಕನ್‌ ಸೇವಿಸುವುದರಿಂದ ಕೊರೊನಾ ಹಬ್ಬುತ್ತದೆ ಎಂದು ವದಂತಿ ಹರಡಿದ ಪರಿಣಾಮವಾಗಿ ಮಾಂಸ ಮಾರಾಟಕ್ಕೆ ತೀವ್ರ ಹೊಡೆತ ಬಿದ್ದಿತು. ಆದರೆ, ಆ ರೀತಿ ಯಾವುದೇ ಸಾಧ್ಯತೆಗಳೂ ಇಲ್ಲ ಎಂದು ಸರ್ಕಾರ ಮತ್ತು ಕುಕ್ಕುಟೋದ್ಯಮದ ಮಂದಿ ಜನರಿಗೆ ಮನವರಿಕೆ ಮಾಡಿಕೊಡಬೇಕಾಯಿತು. ಅಷ್ಟರಲ್ಲಿ ಕೋಳಿ ಬೆಲೆ ಇನ್ನಷ್ಟು ಕುಸಿತ ಕಂಡಿತು.

ಲಾಕ್‌ಡೌನ್‌ ಪರಿಣಾಮ ಕೋಳಿ ಫಾರಂಗಳಿಗೆ ಆಹಾರ ಪೂರೈಕೆ ಆಗಲಿಲ್ಲ. ಇದರಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಸಾಕಣೆದಾರರು ಕೋಳಿಗಳನ್ನು ಜೀವಂತ ಸಮಾಧಿ ಮಾಡಿದರು. ಚನ್ನಪಟ್ಟಣದಲ್ಲಿ ಇಬ್ಬರು ಉದ್ಯಮಿಗಳು 75ಸಾವಿರದಷ್ಟು ಕೋಳಿಗಳನ್ನು ಮಣ್ಣಿನಲ್ಲಿ ಹೂತರು. ಆಹಾರದ ಕೊರತೆ ಕಾರಣ ಬಹುತೇಕ ಕೋಳಿ ಫಾರಂಗಳು ಖಾಲಿಯಾದವು. ಮನಸ್ಸಿಗೆ ತೋಚಿದ ದರದಲ್ಲಿ ಕೋಳಿಗಳ ಮಾರಾಟ ನಡೆಯಿತು. ಇದೆಲ್ಲದರ ಪರಿಣಾಮ ಇದೀಗ ದಾಸ್ತಾನು ಖಾಲಿ ಆಗಿದೆ. ಆದರೆ ಜನರಲ್ಲಿ ಕೊರೊನಾ ಜಾಗೃತಿ ಮೂಡಿದ ಕಾರಣ ಮಾಂಸಕ್ಕೆ ಬೇಡಿಕೆ ಬಂದಿದೆ. ಹೀಗಾಗಿ ಬೆಲೆ ಗಗನಮುಖಿಯಾಗತೊಡಗಿದೆ.

‘ಪ್ರಮುಖ ಚಿಕನ್‌ ಮಾರಾಟದ ಕಂಪನಿಗಳು ಪೂರೈಕೆ ಸೀಮಿತಗೊಳಿಸಿವೆ. ನಾವು ಬೇಡಿಕೆ ಸಲ್ಲಿಸಿದಷ್ಟು ದಾಸ್ತಾನು ಪೂರೈಕೆ ಆಗುತ್ತಿಲ್ಲ. ಸ್ಟಾಕ್ ಇಲ್ಲ ಎಂಬ ಉತ್ತರ ಸಿಗುತ್ತಿದೆ. ದಾಸ್ತಾನು ಕೊರತೆ ಕಾರಣ ಕಂಪನಿಗಳೇ ದರ ಹೆಚ್ಚಿಸುತ್ತಿವೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ’ ಎಂದು ರಾಮನಗರದ ಕೆಂಪೇಗೌಡ ವೃತ್ತದಲ್ಲಿನ ಕೋಳಿ ವ್ಯಾಪಾರಿ ಬೆಟ್ಟಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT