ಗುರುವಾರ , ಡಿಸೆಂಬರ್ 5, 2019
21 °C
ಲಕ್ಷ್ಮಿಪುರ ಗ್ರಾ.ಪಂ. ವಿಶೇಷ ಮಕ್ಕಳ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ

ಮಕ್ಕಳ ಪ್ರಶ್ನೆಗೆ ಜನಪ್ರತಿನಿಧಿಗಳು ತಬ್ಬಿಬ್ಬು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವತಿಯಿಂದ ಲಕ್ಷ್ಮೀಪುರ ಸರ್ಕಾರಿ ಶಾಲೆ ಆವರಣದಲ್ಲಿ ಗುರುವಾರ ನಡೆದ ವಿಶೇಷ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗ್ರಾಮಗಳ ಸಮಸ್ಯೆಗಳ ಬಗ್ಗೆ ಜನ ಪ್ರತಿನಿಧಿಗಳ ಗಮನ ಸೆಳೆದರು.

ವಿದ್ಯಾರ್ಥಿ ಯೋಗೇಶ್ ಎಂಬಾತ 'ಸರ್ಕಾರಿ ಶಾಲೆಗಳು ಕೇವಲ ಬಡ ಮಕ್ಕಳಿಗಾಗಿ ಮಾತ್ರ ಸೀಮಿತವೇ? ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಇರುವಂತೆ ಮಾತನಾಡುವ ನಿವೇಕೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ದೂರ ಇಟ್ಟಿದ್ದೀರಿ' ಎಂದು ಪ್ರಶ್ನೆ ಕೇಳಿ ನೆರೆದಿದ್ದವರನ್ನು ತಬ್ಬಿಬ್ಬಾಗಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಪ್ರತಿಕ್ರಿಯಿಸಿ 'ನನಗೂ ನನ್ನ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಬೇಕೆಂಬ ಆಸೆ ಇತ್ತು. ಆದರೆ ಮನೆಯಲ್ಲಿ ನನ್ನ ಪತ್ನಿ ನನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಬೇಕೆಂದು ಹಠ ಹಿಡಿದಿದ್ದರಿಂದ ಸೇರಿಸಲು ಸಾಧ್ಯವಾಗಲಿಲ್ಲ. ಆದರೆ ಸರ್ಕಾರಿ ಶಾಲೆಯ ಬಗ್ಗೆ ಬಗ್ಗೆ ಮತ್ತು ಅಲ್ಲಿ ಓದುತ್ತಿರುವ ಮಕ್ಕಳ ಬಗ್ಗೆ ನನಗೆ ಪ್ರೀತಿ ಇದೆ. ಇದನ್ನು ತಪ್ಪಾಗಿ ಭಾವಿಸಬಾರದು' ಎಂದು ಸಮಜಾಯಿಷಿ ನೀಡಿದರು.

ಸಂಗೀತ ಎಂಬ ವಿದ್ಯಾರ್ಥಿನಿ 'ಮಕ್ಕಳಾದ ನಾವು ಹೋಂ ವರ್ಕ್ ಮಾಡದಿದ್ದರೆ ಶಾಲೆಯಲ್ಲಿ ಶಿಕ್ಷಕರು ನಮಗೆ ದಂಡನೆ ನೀಡುತ್ತಾರೆ. ಆದರೆ ಜನರಿಗೆ ಮತ ಪಡೆದಿರುವ ನೀವು ನಿಮ್ಮ ಸೇವೆ ಮಾಡದಿದ್ದಾಗ ದಂಡಿಸುವುದು ಹೇಗೆ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಚಡಪಡಿಸಿದ ಜನ ಪ್ರತಿನಿಧಿಯೊಬ್ಬರು 'ನೀನು ಸಹ ರಾಜಕಾರಣಿಯಾಗು ಆಗ ನಿನಗೆ ಸಮಸ್ಯೆ ಅರ್ಥವಾಗುತ್ತದೆ' ಎಂಬ ಹಾರಿಕೆ ಉತ್ತರ ನೀಡಿದರು.

‘ನಮ್ಮ ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಇಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ, ನಮ್ಮ ಶಾಲೆಯ ಕೊಠಡಿ ಸೋರುತ್ತಿದ್ದು ಮಳೆಗಾಲದಲ್ಲಿ ಕುಳಿತು ಪಾಠ ಕೇಳಲಾಗುತ್ತಿಲ್ಲ. ನಮ್ಮ ಶಾಲೆಯ ಆವರಣದಲ್ಲಿ ಸ್ವಚ್ಚತೆಯಿಲ್ಲ, ಶಾಲೆಯ ಮುಂದೆ ರಸ್ತೆ ಹುಬ್ಬು ಹಾಕಿಸಿ ಅಪಘಾತದಿಂದ ಮಕ್ಕಳನ್ನು ರಕ್ಷಿಸಿ, ಶಾಲೆ ಮುಂದೆ ಇರುವ ಚರಂಡಿಗೆ ಸ್ಲ್ಯಾಬ್ ಹಾಕಿಸಿ ಸೊಳ್ಳೆ ಕಾಟ ತಪ್ಪಿಸಿ, ನಮ್ಮೂರಿಗೊಂದು ಬಸ್ ಸೇವೆ ನೀಡಿ ಎಂಬ ಮನವಿಗಳು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಸಭೆಯ ಮುಂದೆ ತೆರೆದಿಟ್ಟರು.

ಶಿಕ್ಷಕಿ ಚಂದನಆಾ ಮಾತನಾಡಿ, ಲಕ್ಷ್ಮೀಪುರ ಗ್ರಾಮದಲ್ಲಿರುವ ಶಾಲೆಗೆ 73 ವರ್ಷಗಳಾಗಿದ್ದು ಕೊಠಡಿಗಳು ಶಿಥಿಲಗೊಂಡಿವೆ. ಸೂರಿಗೆ ಅಳವಡಿಸಿರುವ ಮರಗಳು ಗೆದ್ದಿಲು ಹಿಡಿದಿವೆ. ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಇನ್ನಾದರು ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಿಕೊಡಿ ಎಂದರು.

ತಾ.ಪಂ. ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ ‘ಶಾಸಕ ಸಿ.ಎಂ.ಲಿಂಗಪ್ಪ ಅವರ ಅನುದಾನದಲ್ಲಿ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡಲು ಪ್ರಯತ್ನಿಸುತ್ತೇನೆ. ಶಾಲೆಯ ದುರಸ್ತಿ ಬಗ್ಗೆ ಟೊಯೊಟಾ ಸಂಸ್ಥೆಯೊಂದಿಗೆ ಮಾತನಾಡಿ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಿಕೊಡಲು ಚರ್ಚಿಸಿ ಆದಷ್ಟು ಶೀಘ್ರವಾಗಿ ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ಮಕ್ಕಳು ಮತ್ತು ಶಿಕ್ಷಕರು ಮಕ್ಕಳ ಗ್ರಾಮ ಸಭೆಯಲ್ಲಿ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಅವರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ತಕ್ಷಣದಲ್ಲಿ ಪರಿಹಾರವಾಗುವಂತಹ ಸಮಸ್ಯೆಗಳನ್ನು ಸ್ಥಳೀಯ ಶಾಸಕರು ಮತ್ತು ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು. ಮೇಲಿನ ಇಲಾಖೆಗಳಿಂದ ಅನುಮೋದನೆ ಪಡೆಯಬೇಕಾದ ಕೆಲಸಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮಕ್ಕಳ ಸಹಾಯ ವಾಣಿಯ ಜ್ಯೋತಿ, ಡಾನ್ ಬಾಸ್ಕೊ ಸಂಸ್ಥೆಯ ಸೌಭಾಗ್ಯಮ್ಮ, ಕೆ.ಪಿ.ತಿಪ್ಪೆಸ್ವಾಮಿ, ಗ್ರಾ.ಪಂ. ಸದಸ್ಯರಾದ ಹರೀಶ್, ವಿಶ್ವನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)