ಬುಧವಾರ, ಡಿಸೆಂಬರ್ 8, 2021
28 °C
ಸಾಂಪ್ರದಾಯಿಕ ಆಟಿಕೆಗಳಿಗೆ ತಗ್ಗಿದ ಬೇಡಿಕೆ: ಸ್ಥಳೀಯ ತಯಾರಕರಲ್ಲಿ ತೀವ್ರ ತಳಮಳ

ಚನ್ನಪಟ್ಟಣ ಗೊಂಬೆಗೆ ಚೀನಿ ಆಟಿಕೆಯೇ ಸವಾಲು!

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಘೋಷಣೆಗಳ ನಡುವೆಯೂ ಚೀನಿ ಆಟಿಕೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಈ ಪೈಪೋಟಿ ಎದುರಿಸಿ ಬೆಳೆಯುವುದು ಚನ್ನಪಟ್ಟಣದ ಗೊಂಬೆ ಉತ್ಪಾದಕರಿಗೆ ಸವಾಲಾಗಿದೆ.

ಚನ್ನಪಟ್ಟಣ ಗೊಂಬೆಗಳ ನಾಡು ಎಂದೇ ಪ್ರಸಿದ್ಧಿ. ಕಳೆದ ಮೂರು ಶತಮಾನಕ್ಕೂ ಹೆಚ್ಚು ಅವಧಿಯಿಂದ ಇಲ್ಲಿ ಗೊಂಬೆ ತಯಾರಿಕೆ ಕಲೆ ಮನೆಮನೆಗೆ ಪಸರಿಸಿದೆ. ಮೆತ್ತನೆಯ ಆಲೆ ಮರದಲ್ಲಿ ಅರಳಿ, ನೈಸರ್ಗಿಕ ಬಣ್ಣಗಳಲ್ಲಿ ಅದ್ದಿ ತಯಾರಾಗುವ ಇವುಗಳಿಗೆ ವಿದೇಶಗಳಲ್ಲೂ ಬೇಡಿಕೆ ಇದೆ. ಇಲ್ಲಿನ ಗೊಂಬೆ ಕಲೆಯನ್ನು ಚೀನಿ ಗೊಂಬೆಗಳು ನಕಲು ಮಾಡಿವೆ ಎನ್ನುವುದು ಗೊಂಬೆ ತಯಾರಕರ ಆರೋಪ.

’ಅಂಗೈ ಅಗಲದ ಸಣ್ಣದೊಂದು ಗೊಂಬೆ ತಯಾರಿಕೆಗೆ ನಮ್ಮಲ್ಲಿನ ಸಾಂಪ್ರದಾಯಿಕ ಕಲಾವಿದರಿಗೆ ₹80-100 ವೆಚ್ಚ ತಗುಲಿದರೆ, ಅದೇ ಮಾದರಿಯ ಚೀನಿ ಗೊಂಬೆಗಳು ಮಾರುಕಟ್ಟೆಯಲ್ಲಿ ₹50ಕ್ಕೆಲ್ಲ ಸಿಗುತ್ತಿವೆ. ಗ್ರಾಹಕರಿಗೆ ಯಾವುದು ನೈಜ-ಯಾವುದು ಸುರಕ್ಷಿತ ಎಂಬ ಅರಿವಿಲ್ಲ. ಹೀಗಾಗಿ ಯಾವುದು ಅಗ್ಗವೋ ಅದನ್ನೇ ಕೊಳ್ಳುತ್ತಿದ್ದಾರೆ. ಸರ್ಕಾರಿ ಮಳಿಗೆಗಳಲ್ಲೇ ಕೆಲವೊಮ್ಮೆ ನಕಲಿ ಗೊಂಬೆ ಮಾರಾಟ ನಡೆದಿದೆ. ಇದರಿಂದಾಗಿ ಕ್ರಮೇಣ ಬೇಡಿಕೆ ಕುಸಿಯುತ್ತಿದೆ’ ಎನ್ನುತ್ತಾರೆ ನಗರದ ಗೊಂಬೆ ತಯಾರಕರಾದ ವೆಂಕಟೇಶ್‌.

’ಕೆಲವು ದಶಕಗಳ ಹಿಂದೆ ಚನ್ನಪಟ್ಟಣದಲ್ಲಿ ಹತ್ತಾರು ಸಾವಿರ ಕುಟುಂಬಗಳು ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದವು. ಆದರೆ, ಚೀನಾ ಗೊಂಬೆ ಮಾರುಕಟ್ಟೆಗೆ ಕಾಲಿಟ್ಟ ಬಳಿಕ ಅರ್ಧದಷ್ಟು ಮಂದಿ ಈ ಉದ್ಯಮ ಬಿಟ್ಟು ಅನ್ಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿನ ಪೈಪೋಟಿ ಎದುರಿಸಿ ಬದುಕುವುದು ನಿಜಕ್ಕೂ ಸವಾಲಾಗಿದೆ’ ಎಂದು ಅವರು ಹೇಳುತ್ತಾರೆ.

’ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಚನ್ನಪಟ್ಟಣ ಗೊಂಬೆಗಳ ಬಗ್ಗೆ ಪ್ರಸ್ತಾಪಿಸಿದ್ದು ಉತ್ಸಾಹ ಮೂಡಿಸಿದೆ. ಆದರೆ, ಇದು ಕೇವಲ ಹೊಗಳಿಕೆಗೆ ಸೀಮಿತ ಆಗಬಾರದು. ಈ ಉದ್ಯಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಪ್ರೋತ್ಸಾಹಕ ಯೋಜನೆಗಳನ್ನು ಪ್ರಕಟಿಸಬೇಕು. ಯುವಜನರಿಗೆ ತರಬೇತಿ ನೀಡಬೇಕು. ನೈಜ ಗೊಂಬೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಚೀನಾದಿಂದ ಆಟಿಕೆಗಳ ಆಮದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು’ ಎನ್ನುವುದು ಗೊಂಬೆ ಉತ್ಪಾದಕರ ಆಗ್ರಹವಾಗಿದೆ.

ಆಟಿಕೆ ಕ್ಲಸ್ಟರ್‌ಗೆ ಒತ್ತಾಯ: ಚನ್ನಪಟ್ಟಣಕ್ಕೆ ಬದಲಾಗಿ ಕೊಪ್ಪಳದಲ್ಲಿ ಸರ್ಕಾರ ಆಟಿಕೆ ಕ್ಲಸ್ಟರ್ ನಿರ್ಮಾಣ ಮಾಡುವುದಕ್ಕೆ ಇಲ್ಲಿನ ತಯಾರಕರು, ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ. ಗೊಂಬೆಗಳ ನಾಡಿನಲ್ಲಿಯೇ ಈ ಕೈಗಾರಿಕಾ ಘಟಕ ಸ್ಥಾಪನೆ ಆಗಬೇಕು. ಇಲ್ಲಿನವರಿಗೆ ಮೊದಲ ಆದ್ಯತೆ ಸಿಗಬೇಕು. ಇದರಿಂದ ಮಾತ್ರ ಈ ಉದ್ಯಮ ಉಳಿಯಲು ಸಾಧ್ಯ ಎಂದು ಆಗ್ರಹಿಸುತ್ತಾರೆ ಕೆಂಗಲ್ ಅಂಜನೇಯ ಅರಗು ಬಣ್ಣದ ಕರಕುಶಲಕರ್ಮಿಗಳ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕುಮಾರ್.

'ಕೊಪ್ಪಳ ಆಟಿಕೆ ಕ್ಲಸ್ಟರ್‌ಗೂ ಚನ್ನಪಟ್ಟಣಕ್ಕೂ ಸಂಬಂಧ ಇಲ್ಲ. ಅಲ್ಲಿ ಸ್ಥಾಪನೆ ಆಗುವ ಆಟಿಕೆ ಕೈಗಾರಿಕೆಗಳ ಮಾದರಿಯೇ ಬೇರೆಯಾಗಿದೆ. ಇದನ್ನು ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು’ ಎನ್ನುತ್ತಾರೆ ಜಿಲ್ಲೆಯ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು