ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಬಸ್‌ ನಿಲ್ದಾಣದ ಬಳಿ ಚಿರತೆ ದಾಳಿ

ನಗರದೊಳಗೆ ವನ್ಯಜೀವಿ ದಾಳಿಯಿಂದ ಹೆಚ್ಚಿದ ಆತಂಕ: ಸೆರೆಗೆ ಬೋನು ಇಟ್ಟ ಅರಣ್ಯ ಇಲಾಖೆ
Last Updated 10 ಜೂನ್ 2019, 13:47 IST
ಅಕ್ಷರ ಗಾತ್ರ

ರಾಮನಗರ: ನಗರದ ಹೃದಯ ಭಾಗದಲ್ಲಿರುವ ಹಳೇ ಬಸ್‌ ನಿಲ್ದಾಣದ ಬಳಿ ಸೋಮವಾರ ನಸುಕಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಯೊಂದನ್ನು ಕೊಂದು ಹಾಕಿದೆ ಎಂದು ಸ್ಥಳೀಯರು ದೂರು ನೀಡಿದ್ದಾರೆ.

ಹಳೇ ಬಸ್ ನಿಲ್ದಾಣದ ಬಳಿಯ ಡಾ.ಎಸ್.ಎಲ್. ತಿಮ್ಮಯ್ಯ ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲಿ ಇರುವ ಮನೆಯ ಆವರಣದಲ್ಲಿ ಮುಂಜಾನೆ ನಾಲ್ಕರ ಸುಮಾರಿಗೆ ಚಿರತೆ ಕಾಣಿಸಿಕೊಂಡಿದ್ದು, ನಮ್ಮ ಸಾಕುನಾಯಿಯನ್ನು ಕೊಂದುಹಾಕಿದೆ ಎಂದು ದೇಸಿಗೌಡ ಎಂಬುವರು ಅರಣ್ಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಮುಂಜಾನೆ ಸಾಕು ನಾಯಿಗಳು ಬೊಗಳಲು ಆರಂಭಿಸಿದವು. ನಾವು ಬೀದಿ ನಾಯಿಗಳು ಇರಬಹುದು ಎಂದು ಸುಮ್ಮನಾದೆವು. ಬೊಗಳಾಟ ಹೆಚ್ಚಾದಾಗ ಹೊರಗೆ ಬಂದು ನೋಡಿದರೆ ಒಂದು ನಾಯಿ ಸತ್ತು ಬಿದ್ದಿತ್ತು. ಬೋನಿನಲ್ಲಿದ್ದ ಮತ್ತೊಂದು ನಾಯಿ ಬೊಗಳುತ್ತಲಿತ್ತು. ಟಾರ್ಚ್ ಬೆಳಕು ಹಾಯಿಸಿದಾಗ ಚಿರತೆ ಕಣ್ಣಿಗೆ ಬಿತ್ತು. ಕೂಡಲೇ ನಾವು ಮನೆ ಒಳಗೆ ಹೋಗಿ ಸದ್ದು ಮಾಡಿದೆವು. ಚಿರತೆ ಕೆಲಹೊತ್ತು ಅಲ್ಲಿಯೇ ಇದ್ದು ನಂತರ ಪರಾರಿಯಾಯಿತು’ ಎಂದು ದೇಸಿಗೌಡ ಪತ್ರಕರ್ತರಿಗೆ ತಿಳಿಸಿದರು.

‘ಮನೆಯಹೊರಗೆ ಹಸು ಕಟ್ಟಿದ್ದು, ಅದನ್ನು ಹಿಡಿಯಲು ಚಿರತೆ ಬಂದಿರಬಹುದು. ಅದರ ಹೆಜ್ಜೆ ಗುರುತುಗಳು ಅಂಗಳದಲ್ಲಿದೆ. ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಕೊಡಬೇಕು’ ಎಂದು ಆಗ್ರಹಿಸಿದರು.

‘ದೂರಿನ ಮೇರೆಗೆ ದೇಸಿಗೌಡರ ಮನೆ ಬಳಿ ಬೋನ್ ಇಡಲಾಗಿದೆ. ಅರ್ಕಾವತಿ ನದಿ ದಡದಲ್ಲಿ ಮನೆ ಇದ್ದು, ನದಿ ಪಾತ್ರದಲ್ಲಿರುವ ಜೊಂಡಿನ ಕಡೆಯಿಂದ ಚಿರತೆ ಬಂದಿರುವ ಸಾಧ್ಯತೆ ಇದೆ. ಶ್ರೀರಾಮ ದೇವರ ಬೆಟ್ಟ ಸೇರಿದಂತೆ ಸುತ್ತಲು ಇರುವ ಅರಣ್ಯ ಪ್ರದೇಶದಿಂದ ಚಿರತೆ ಬಂದಿರಬಹುದು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT