ಬುಧವಾರ, ನವೆಂಬರ್ 20, 2019
21 °C

ವಿದ್ಯುತ್ ತಂತಿ ಮೇಲೆ ಬೆಳೆದ ಬಳ್ಳಿ ತೆರವು ಮಾಡಿ

Published:
Updated:
Prajavani

ರಾಮನಗರ: ಸಾಮಾನ್ಯವಾಗಿ ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗಗಳಲ್ಲಿ ತಂತಿಗೆ ತಾಗುವಂತೆ ಇರುವ ಮರಗಳ ಕೊಂಬೆಗಳನ್ನು ಕಡಿದು ಮಾರ್ಗವನ್ನು ಸುಗಮಗೊಳಿಸುವ ಕಾರ್ಯವನ್ನು ವಿದ್ಯುತ್ ಇಲಾಖೆ ಮಾಡುತ್ತದೆ. ಆದರೆ ಇಲ್ಲಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ವಿದ್ಯುತ್ ತಂತಿಯನ್ನು ಆಶ್ರಯಿಸಿ ಬಳ್ಳಿ, ಮರಗಳು ಬೆಳೆದಿದ್ದರೂ ಅದರತ್ತ ಗಮನ ಹರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ರಾಮನಗರ-ಮಾಗಡಿ ಮುಖ್ಯರಸ್ತೆಯಲ್ಲಿರುವ ಕೆಂಪೇಗೌಡನದೊಡ್ಡಿ ಗ್ರಾಮದ ರಸ್ತೆ ಪಕ್ಕದಲ್ಲಿ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಹಾದು ಹೋಗಿದೆ. ಆದರೆ ಹಸಿರು ಮರ ಮತ್ತು ಬಳ್ಳಿಗಳನ್ನು ಇದನ್ನು ಆಶ್ರಯಿಸಿ ಬೆಳೆದಿವೆ. ಆದರೆ ಅದ್ಯಾಕೋ ಗೊತ್ತಿಲ್ಲ. ವಿದ್ಯುತ್ ಇಲಾಖೆಯ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಇದರತ್ತ ತಿರುಗಿಯೂ ನೋಡದೆ ಮೌನಕ್ಕೆ ಶರಣಾಗಿದ್ದಾರೆ. ಪರಿಣಾಮ ಗಿಡಬಳ್ಳಿಗಳು ಹುಲುಸಾಗಿ ಬೆಳೆಯುತ್ತಿದ್ದು, ಅರಣ್ಯವಾಗಿ ಮಾರ್ಪಟ್ಟಿವೆ.

ಸದಾ ವಿದ್ಯುತ್ ಹರಿಯುವ ಈ ತಂತಿಗೆ ಎಲೆಗಳಿರುವ ಮರದ ಕೊಂಬೆಗಳು ತಾಗಿಕೊಂಡಿದ್ದರೆ ಅದನ್ನು ಆಶ್ರಯಿಸಿ ವಿದ್ಯುತ್ ತಂತಿಯನ್ನೇರಿ ಹಸಿರು ಬಳ್ಳಿಗಳು ಸುತ್ತಿಕೊಂಡು ಬೆಳೆದು ನಿಂತಿವೆ. ಒಂದು ವೇಳೆ ಇದನ್ನು ಅರಿಯದೆ ಈ ಮರವನ್ನು ಅಮಾಯಕರು ಯಾರಾದರೂ ಮುಟ್ಟಿದರೆ ಪ್ರಾಣ ಕಳೆದುಕೊಳ್ಳುವುದು ಗ್ಯಾರಂಟಿ. ರಸ್ತೆ ಮಗ್ಗುಲಲ್ಲಿ ಪ್ರಾಣ ಬಲಿಗಾಗಿ ಕಾದಿರುವ ಈ ಅವ್ಯವಸ್ಥೆಯನ್ನು ಸರಿಪಡಿಸಲು ಬೆಸ್ಕಾಂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಾಮನಗರದ ರಾಯರದೊಡ್ಡಿಯಿಂದ ಮಾಗಡಿ ಕಡೆಗೆ ಹೋಗುವ ರಸ್ತೆ ಮಾರ್ಗದ ಉದ್ದಕ್ಕೂ ರಸ್ತೆಬದಿಯಲ್ಲಿರುವ ಮರಗಳ ನಡುವೆ ಹೆವಿ ವೊಲ್ಟೇಟ್ ಲೈನ್ ಸಾಗಿದ್ದು ಅಲ್ಲಲ್ಲಿ ಮರಗಳಲ್ಲಿನ ಹಸಿರೆಲೆಗಳು ವಿದ್ಯುತ್ ತಂತಿಗೆ ತಾಕುತ್ತಿವೆ. ಕೆಲವು ಕಡೆ ಹಸಿರು ಬಳ್ಳಿಗಳು ಸುರುಳಿಯಂತೆ ಸುತ್ತಿಕೊಂಡಿವೆ. ಇವುಗಳನ್ನು ತೆರವು ಮಾಡುವ ಉಸಾಬರಿಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಾಗಿಲ್ಲ ಎಂದು ಮುಖಂಡರಾದ ರಮೇಶ್, ಶಂಕರ್, ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಮರಗಳ ಪೊದೆಯಿಂದ ವಿದ್ಯುತ್ ಲೈನ್ ಹಾದು ಹೋಗಿದೆ. ಒಂದು ವೇಳೆ ಮೇಕೆಗಳಿಗೆ ಸೊಪ್ಪು (ಮೇವು) ಕೀಳಲು ಅಥವಾ ಶುಭ ಕಾರ್ಯಗಳಿಗೆ ನೇರಳೆ ಕಡ್ಡಿಗಾಗಿ ಯಾರಾದರೂ ಮರವನ್ನು ಮುಟ್ಟಿದರೆ ವಿದ್ಯುತ್ ಹರಿದು ಅವಘಡ ಸಂಭವಿಸುವುದು ಖಚಿತ. ಆದ್ದರಿಂದ ಈ ಕೂಡಲೇ ವಿದ್ಯುತ್ ತಂತಿ ಮೇಲೆ ಬೆಳೆದು ನಿಂತಿರುವ ಹಸಿರು ಗಿಡ, ಬಳ್ಳಿಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)