ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರುದ್ದೇಶದ ತೆರವು: ಕ್ರಮಕ್ಕೆ ಆಗ್ರಹ

ನೀಡಿರುವ ಬದಲಿ ಜಾಗ ಅನಾನುಕೂಲಗಳ ಆಗರ: ಆರೋಪ
Last Updated 20 ಜುಲೈ 2019, 14:43 IST
ಅಕ್ಷರ ಗಾತ್ರ

ಕನಕಪುರ: ‘ಇಲ್ಲಿನ ಪೇಟೆಕೆರೆಯಲ್ಲಿ ಎರಡು ದಶಕಗಳಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಇದ್ದಂತಹ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ತೋಟಗಾರಿಕೆ ಇಲಾಖೆಯನ್ನು ದುರುದ್ದೇಶದಿಂದ ತೆರವುಗೊಳಿಸಿ, ರೈತರನ್ನು ಒಕ್ಕಲೆಬ್ಬಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಚೀಲೂರು ಮುನಿರಾಜು ಆಗ್ರಹಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ತೋಟಗಾರಿಕೆ ಇಲಾಖೆಯನ್ನು ತೆರವುಗೊಳಿಸಿರುವ ಸಂಬಂಧ ಪ್ರಗತಿಪರ ಸಂಘಟನೆಗಳ ಜತೆಗೂಡಿ, ರೈತ ಸಂಘನಗರದ ಚನ್ನಬಸಪ್ಪ ವೃತ್ತದಲ್ಲಿರುವ ಅಶೋಕ ಸ್ತಂಭದ ಮುಂಭಾಗದಲ್ಲಿ ಶನಿವಾರ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಪೇಟೆ ಕೆರೆಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿರುವ ಗ್ರಾಮಾಂತರ ಪೊಲೀಸ್‌ ಠಾಣೆ ಕಟ್ಟಡ ಮತ್ತು ಎಂ.ಜಿ.ರಸ್ತೆ, ಸಂತ್ರಸ್ತರಿಗೆ ಕೆರೆಯಲ್ಲಿ ನೀಡಿರುವ ನಿವೇಶನಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ 30 ವರ್ಷಗಳಿಗೂ ಹೆಚ್ಚು ಕಾಲದಿಂದ ಇದ್ದ ವಿವಿಧ ಜಾತಿಯ ಹಣ್ಣಿನ ಮರಗಳನ್ನು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಪ್ರಯೋಗಾಲಯ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗಿದ್ದ ತರಕಾರಿ ಮಾರುಕಟ್ಟೆಯನ್ನು ಬಲವಂತವಾಗಿ ತೆರವುಗೊಳಿಸಿ, ರೈತರು ಮತ್ತು ವ್ಯಾಪಾರಿಗಳನ್ನು ಬೀದಿ ಪಾಲಾಗಿಸಿದ್ದಾರೆ. ತರಕಾರಿ ಮಾರುಕಟ್ಟೆಗೆ ಈಗ ನೀಡಿರುವ ಜಾಗ ಅನಾನುಕೂಲಗಳಿಂದ ಕೂಡಿದೆ. ಯಾರೇ ಅಲ್ಲಿಗೆ ಹೋಗಲು ಕಷ್ಟವಾಗುತ್ತದೆ’ ಎಂದು ತಿಳಿಸಿದರು.

‘ಯಾರಿಗೂ ಅನುಕೂಲವಲ್ಲದ, ಅಜ್ಞಾತ ಸ್ಥಳದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದ್ದಾರೆ. ಅದರ ಬದಲು ಇರುವ ಜಾಗದಲ್ಲೇ ಕೃಷಿ ಉತ್ಪನ್ನ ಮಾರುಕಟ್ಟೆ ಉಳಿಸಬೇಕು ಮತ್ತು ಬಲವಂತವಾಗಿ ತೆರವು ಕಾರ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ನೀಲಿ ರಮೇಶ್‌, ಶ್ರೀನಿವಾಸ್‌, ರವಿಚಂದ್ರ, ಸಂತೋಷ್‌, ಸಿದ್ದರಾಮೇಗೌಡ, ಮರಿಯಪ್ಪ, ಬಸವರಾಜು, ಚಿಕ್ಕಮಾದು, ಅಭಿಷೇಕ್‌, ಶಿವು, ಶಿವರಾಮಣ್ಣ, ನಾಗೇಂದ್ರ, ಸಿದ್ದು, ಲೋಕೇಶ್‌, ಚಿಕ್ಕತಾಯಮ್ಮ, ಲಕ್ಷ್ಮಿ, ಸರಸ್ವತಿ, ಸವಿತಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಾಲ್ಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT