ಹಳೆಯ ವಾಹನಗಳಿಗೆ ಇಲ್ಲ ಮುಕ್ತಿ; ಬಿಡಿಭಾಗಗಳು ಒಂದೊಂದಾಗಿ ನಾಪತ್ತೆ

ಭಾನುವಾರ, ಮೇ 26, 2019
33 °C
ಹರಾಜು ಪ್ರಕ್ರಿಯೆಗೆ ನಗರಸಭೆ ನಿರಾಸಕ್ತಿ

ಹಳೆಯ ವಾಹನಗಳಿಗೆ ಇಲ್ಲ ಮುಕ್ತಿ; ಬಿಡಿಭಾಗಗಳು ಒಂದೊಂದಾಗಿ ನಾಪತ್ತೆ

Published:
Updated:
Prajavani

ರಾಮನಗರ: ನಗರದಲ್ಲಿನ ಸ್ವಚ್ಛತಾ ಕಾರ್ಯಕ್ಕೆ ವಾಹನಗಳ ಕೊರತೆ ಇದ್ದೇ ಇದೆ. ಹೊಸ ವಾಹನಗಳ ಖರೀದಿಗೆ ಮುಂದಾಗಿರುವ ನಗರಸಭೆಯು ಹಳೆಯ ವಾಹನಗಳನ್ನು ದುರಸ್ಥಿ ಮಾಡಿಸುವ ಇಲ್ಲವೇ ವಿಲೇವಾರಿ ಮಾಡುವ ಗೋಜಿಗೆ ಹೋಗಿಲ್ಲ.

ಕಸ ವಿಲೇವಾರಿಗೆ ಬಳಸುವ ವಾಹನಗಳನ್ನು ನಗರಸಭೆ ಕಚೇರಿ ಸಮೀಪದ ಸಮೀಪದ ವಾಟರ್‌ ಟ್ಯಾಂಕ್‌ ಅಡಿಯಲ್ಲಿ ನಿಲ್ಲಿಸುತ್ತಾ ಬರಲಾಗಿದೆ. ಇಲ್ಲಿ ಸದ್ಯ ಬಳಕೆಯಲ್ಲಿ ಇರುವ ವಾಹನಗಳ ಜೊತೆಗೆ ಅವಧಿ ಮುಗಿದಿರುವ ಹಳೆಯ ವಾಹನಗಳನ್ನೂ ನಿಲ್ಲಿಸಲಾಗಿದೆ. ಇವುಗಳಲ್ಲಿ ಕೆಲವು ವಾಹನಗಳಿಗೆ ಟೈರ್‌ಗಳೇ ಇಲ್ಲ. ಇನ್ನೂ ಕೆಲವಕ್ಕೆ ಹೆಡ್‌ಲೈಟ್‌ ನಾಪತ್ತೆ. ಸಾಕಷ್ಟು ವಾಹನಗಳ ಬಿಡಿಭಾಗಗಳೇ ಕಾಣೆಯಾಗಿವೆ.

ಸುಮಾರು 8–10 ಆಟೊ ಟಿಪ್ಪರ್‌ಗಳು, ಒಂದು ಸ್ವರಾಜ್‌ ಮಜ್ದಾ ಟೆಂಪೊ, ಒಂದು ದೊಡ್ಡ ಟಿಪ್ಪರ್ ಸೇರಿದಂತೆ ಹಲವು ಹಳೆಯ ವಾಹನಗಳು ಇಲ್ಲಿವೆ. ಇವುಗಳು ಯಾವೂ ಸದ್ಯ ಬಳಕೆಯಲ್ಲಿ ಇಲ್ಲ. ಬಹುತೇಕ ವಾಹನಗಳು ತುಕ್ಕು ಹಿಡಿದ ಸ್ಥಿತಿಯಲ್ಲಿ ಇವೆ. ಇವುಗಳ ಬಳಕೆ ನಿಲ್ಲಿಸಿಯೇ ನಾಲ್ಕೈದು ವರ್ಷವಾಗಿದೆ ಎಂದು ನಗರಸಭೆಯ ಸಿಬ್ಬಂದಿ ಹೇಳುತ್ತಾರೆ.

ಹರಾಜು ಏಕಿಲ್ಲ?

15 ವರ್ಷ ಅವಧಿಯಲ್ಲಿ ಮುಗಿದ, ಸುಸ್ಥಿತಿಯಲ್ಲಿ ಇರದ ವಾಹನಗಳನ್ನು ಸರ್ಕಾರಿ ನಿಯಮಗಳ ಪ್ರಕಾರ ಹರಾಜು ಹಾಕಬೇಕಾಗುತ್ತದೆ. ನಗರಸಭೆ ಅಧಿಕಾರಿಗಳು ಪ್ರಾದೇಶಿಕ ಸಾರಿಗೆ ಇಲಾಖೆಗೆ ಪತ್ರ ಬರೆದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಇವುಗಳ ಹರಾಜು ಪ್ರಕ್ರಿಯೆ ನಡೆಸಬೇಕಾಗುತ್ತದೆ. ಆದರೆ ಇಲ್ಲಿ ವಾಹನಗಳು ತುಕ್ಕು ಹಿಡಿಯುತ್ತಿರುವ ಕಾರಣ ಅವುಗಳ ಮೌಲ್ಯ ಕಡಿಮೆ ಆಗುತ್ತಿದ್ದು, ನಗರಸಭೆಗೆ ನಷ್ಟವೇ ಆಗುತ್ತಿದೆ. ಜೊತೆಗೆ ಬಿಡಿಭಾಗಗಳು ಕಾಣೆಯಾಗುತ್ತಿದ್ದು, ಕಳ್ಳರಿಗೆ ಹಾಸಿಗೆ ಹಾಸಿಕೊಟ್ಟಂತೆ ಆಗಿದೆ.

‘ವಾಹನಗಳ ಟೈರ್ ಸೇರಿದಂತೆ ಕೆಲವು ಬಿಡಿ ಭಾಗಗಳನ್ನು ಈಗ ಓಡುತ್ತಿರುವ ವಾಹನಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಉಳಿದಂತೆ ಯಾವ ವಾಹನಗಳ ಉಪಕರಣಗಳೂ ಸ್ಥಾನಪಲ್ಲಟಗೊಂಡಿಲ್ಲ’ ಎಂದು ನಗರಸಭೆ ಸಿಬ್ಬಂದಿ ಸಮಜಾಯಿಷಿ ನೀಡುತ್ತಾರೆ.

ಉದ್ಯಾನ ಅತಿಕ್ರಮಣ: ವಾಟರ್‌ ಟ್ಯಾಂಕ್‌ ವೃತ್ತದಲ್ಲಿ ಈ ಹಿಂದೆ ಉದ್ಯಾನ ನಿರ್ಮಾಣ ಮಾಡಲು ಯೋಜಿಸಲಾಗಿತ್ತು. ಉದ್ಯಾನದ ಜಾಗವನ್ನು ನಗರಸಭೆಯೇ ಅತಿಕ್ರಮಿಸಿ ಸ್ವಚ್ಚತಾ ವಾಹನಗಳ ನಿಲುಗಡೆ ಮಾಡುತ್ತಿದೆ. ಬಳಕೆಗೆ ಬಾರದ ವಾಹನಗಳನ್ನೂ ಇಲ್ಲಿಯೇ ನಿಲ್ಲಿಸಿಕೊಂಡು ಗುಜರಿಯ ಹಾಗೆ ಮಾಡಿಕೊಂಡಿದೆ. ಉಪಯೋಗಕ್ಕೆ ಬಾರದ ವಾಹನಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆದಲ್ಲಿ ಉಳಿದ ವಾಹನಗಳ ನಿಲುಗಡೆಗೆ ಜಾಗವಾದರೂ ದೊರೆಯುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

7 ಹೊಸ ವಾಹನ ಖರೀದಿ

‘ಚುನಾವಣಾ ನೀತಿಸಂಹಿತೆ ಮುಕ್ತಾಯವಾದ ಕೂಡಲೇ ಹಳೆಯ ವಾಹನಗಳ ಹರಾಜಿಗೆ ಕ್ರಮ ಜರುಗಿಸುತ್ತೇವೆ’ ಎನ್ನುತ್ತಾರೆ ನಗರಸಭೆ ಆಯುಕ್ತೆ ಶುಭಾ.

‘ಸಾಕಷ್ಟು ವಾಹನಗಳು ಬಳಕೆಯಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇವುಗಳನ್ನು ನಿಯಮಾನುಸಾರ ಹರಾಜು ಹಾಕಲಾಗುವುದು. ಸದ್ಯ ನಗರಸಭೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ 22 ವಾಹನಗಳನ್ನು ಬಳಸುತ್ತಿದ್ದೇವೆ. 7 ಹೊಸ ಆಟೊ ಟಿಪ್ಪರ್‌ ಖರೀದಿಗೆ ಅನುಮತಿ ದೊರೆತಿದೆ’ ಎಂದು ಅವರು ಹೇಳಿದರು.

* ಚುನಾವಣಾ ನೀತಿಸಂಹಿತೆ ಮುಕ್ತಾಯದ ಬಳಿಕ ಹಳೆಯ ವಾಹನಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು. 7 ಹೊಸ ಆಟೊ ಟಿಪ್ಪರ್‌ಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ
-ಶುಭಾ, ಆಯುಕ್ತೆ, ರಾಮನಗರ ನಗರಸಭೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !