ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರ ಸಂಸ್ಥೆಗೆ ರಾಷ್ಟ್ರೀಕೃತ ಬ್ಯಾಂಕ್‌ ಸ್ಪರ್ಧೆ’

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಬಿಡದಿ ಶಾಖೆ ಸ್ಥಳಾಂತರ
Last Updated 10 ಜೂನ್ 2019, 13:22 IST
ಅಕ್ಷರ ಗಾತ್ರ

ಬಿಡದಿ: ಪಟ್ಟಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳ ಜೊತೆ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಸ್ಫರ್ಧೆ ಮಾಡಬೇಕಾಗಿದ್ದು, ಗ್ರಾಹಕರ ವಿಶ್ವಾಸಕ್ಕೆ ತೆಗೆದುಕೊಂಡು ಠೇವಣಿ ಸಂಗ್ರಹಕ್ಕೆ ಮುಂದಾಗುವಂತೆ ಶಾಸಕ ಎ.ಮಂಜುನಾಥ್ ಕಿವಿಮಾತು ಹೇಳಿದರು.

ಸೋಮವಾರ ತಾಲ್ಲೂಕಿನ ಬಿಡದಿಯಲ್ಲಿ ಬಿಡಿಸಿಸಿ ಬ್ಯಾಂಕ್ ನ ಬಿಡದಿ ಶಾಖೆಯ ಸ್ಥಳಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಮನಗರ ಜಿಲ್ಲೆಯಲ್ಲಿ ಬಿಡದಿ ಕೈಗಾರಿಕಾ ಪ್ರದೇಶವಾಗಿರುವುದರಿಂದ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು ಸ್ಥಾಪನೆಯಾಗಿವೆ. ಅಲ್ಲದೆ ವಹಿವಾಟು ನಡೆಸಲು ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ರೈತರ ಸಂಸ್ಥೆಯಾಗಿರುವ ಸಹಕಾರಿ ಬ್ಯಾಂಕ್‌ಗಳೂ ಅವುಗಳಿಗೆ ಸವಾಲಾಗಿ ಗ್ರಾಹಕರನ್ನು ಪ್ರೀತಿಯಿಂದ ಕಂಡು ಅವರಿಗೆ ಎಲ್ಲ ಬ್ಯಾಂಕಿಂಗ್ ಸೇವೆ ಒದಗಿಸಿದರೆ ಬಿಡಿಸಿಸಿ ಬ್ಯಾಂಕ್ ಪ್ರಗತಿ ಸಾಧಿಸಲಿದೆ ಎಂದು ತಿಳಿಸಿದರು.

ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷದ ವರೆಗಿನ ಸಾಲ ವಿತರಣೆ, ಕೃಷಿ ಸಾಲ, ಆಭರಣಗಳ ಮೇಲಿನ ಸಾಲವನ್ನು ನೀಡುವ ಜೊತೆಗೆ ಬಿಡದಿ ಮತ್ತು ಮಾಗಡಿಯ ಎರಡು ಕಡೆ ಮುಖ್ಯಮಂತ್ರಿಯವರ ‘ಬಡವರ ಬಂಧು’ ಕಾರ್ಯಕ್ರಮದಡಿ ಫುಟ್‌ಪಾತ್‌ ವ್ಯಾಪಾರಿಗಳಿಗೂ ಸಾಲ ವಿತರಣೆಗೆ ಮುಂದಾಗುವಂತೆ ತಿಳಿಸಿದರು.

‘ನನ್ನ ಕ್ಷೇತ್ರದ ದೊಡ್ಡಗಂಗವಾಡಿ ಮತ್ತು ರಾಮನಹಳ್ಳಿ ವಿಎಸ್‌ಎಸ್‌ಎನ್‌ಗಳಿಗೆ ಎಸ್.ರವಿ ಅವರು ತಲಾ ₹50 ಲಕ್ಷ ಸಾಲ ಮಂಜೂರು ಮಾಡಿ ಅವುಗಳಿಗೆ ಮರು ಜೀವ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ತಿಳಿಸಿದರು. ಹೊಸದಾಗಿ ಕಂಚುಗಾರನಹಳ್ಳಿ ವಿಎಸ್‌ಎಸ್ಎನ್ ಆರಂಭಿಸಿ ಆ ಭಾಗದ ಜನರ ವಹಿವಾಟಿಗೆ ಸಹಕರಿಸುವಂತೆ ಕೋರಿದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಎಸ್.ರವಿ ಮಾತನಾಡಿ, ‘ರೈತರು ಬ್ಯಾಂಕಿನ ಜೊತೆ ಉತ್ತಮ ಸಂಬಂಧ ಇರಿಸಿಕೊಂಡು ವಹಿವಾಟು ಮಾಡಿದರೆ ಮಾತ್ರ ಬ್ಯಾಂಕ್ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರ ಸಹಕಾರದಿಂದ ಉತ್ತಮ ಸೇವೆ ಒದಗಿಸುವ ಮೂಲಕ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು’ ಎಂದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ ಲಿಂಗಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರಿಗೆ ಕೃಷಿ ಸಾಲ ನೀಡದ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಸ್ಥಾಪನೆಯಾಯಿತು. ಅದು ಈಗ ರೈತರಿಗೆ ಆರ್ಥಿಕವಾದ ಬಲವನ್ನು ತುಂಬುವ ಸಹಕಾರಿಯಾಗಿ ಪಾರದರ್ಶಕವಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಎಸ್. ರವಿ ಅಧ್ಯಕ್ಷರಾದ ಮೇಲೆ ಬ್ಯಾಂಕಿಂಗ್ ಅನುಭವದಿಂದ ಉತ್ತಮವಾದ ಉಪಕ್ರಮಗಳನ್ನು ಬಳಸಿಕೊಂಡು ಉತ್ತಮ ಕೆಲಸ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾಂಕ್ ಉಪಾಧ್ಯಕ್ಷ ರವೀಶಯ್ಯ, ನಿರ್ದೇಶಕ ಅಶ್ವಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಸ್ವಾಮಿ, ಪುರಸಭಾ ಸದಸ್ಯರಾದ ಕುಮಾರ್, ಸಂತೋಷ್, ರಾಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಟ್ಟಸ್ವಾಮಿ, ಮುಖಂಡರಾದ ರಾಮಕೃಷ್ಣಯ್ಯ, ಶೇಷಪ್ಪ, ರಮೇಶ್ ಮುನಿತಿಮ್ಮಯ್ಯ, ಲಕ್ಷ್ಮಣ್, ವೀರಭದ್ರಯ್ಯ ಇದ್ದರು.

ರಾಮನಹಳ್ಳಿ ವಿಎಸ್ಎಸ್ಎನ್ ನ ₹50 ಲಕ್ಷ ಸಾಲದ ಆದೇಶ ಪ್ರತಿಗಳನ್ನು 101 ಸದಸ್ಯರಿಗೆ ವಿತರಿಸಲಾಯಿತು. ಬ್ಯಾಂಕಿನ ಅಧಿಕಾರಿ ಶ್ರೀಕಾಂತ್ ವರದಿ ಮಂಡಿಸಿರು. ಕಾರ್ಯಕ್ರಮಕ್ಕೂ ಮುನ್ನ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT