ಸೋಮವಾರ, ನವೆಂಬರ್ 18, 2019
26 °C
ಮಾರುಕಟ್ಟೆಯಲ್ಲಿನ ಆರ್‌ಟಿಜಿಎಸ್‌ ವ್ಯವಸ್ಥೆ ವಿಳಂಬಕ್ಕೆ ಅಸಮಾಧಾನ

ರೇಷ್ಮೆಗೂಡು ಮಾರುಕಟ್ಟೆ | ಹಣ ವರ್ಗಾವಣೆ ವಿಳಂಬ ಖಂಡಿಸಿ ಪ್ರತಿಭಟನೆ

Published:
Updated:
Prajavani

ರಾಮನಗರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರಿಗೆ ಆನ್‌ಲೈನ್ ಹಣ ವರ್ಗಾವಣೆ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಕೆಲವರಿಗೆ 15 ದಿನ ಕಳೆದರೂ ಹಣ ಪಾವತಿ ಮಾಡಿಲ್ಲ ಎಂದು ಆರೋಪಿಸಿ ರೇಷ್ಮೆ ಬೆಳೆಗಾರರು ಇಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವಿವಿಧ ರಾಜ್ಯಗಳಿಂದ ಇಲ್ಲಿ ರೇಷ್ಮೆ ಮಾರಾಟ ಮಾಡಲು ರೈತರು ಬರುತ್ತಾರೆ. ಈ ಮೊದಲು ರೇಷ್ಮೆ ಮಾರಾಟ ಮಾಡಿದ ರೈತರಿಗೆ ನೇರವಾಗಿ ನಗದು ನೀಡುತ್ತಿದ್ದರಿಂದ, ಬಂದಷ್ಟು ಹಣ ಪಡೆದು ರೈತರು ಖುಷಿಯಿಂದ ಮನೆಗೆ ಹೋಗುತ್ತಿದ್ದರು. ಆದರೆ ಈಗ ಆರ್‌ಟಿಜಿಎಸ್‌ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಬಂದಿದೆ. ಮೊದಲು ಬ್ಯಾಂಕ್ ಖಾತೆಗೆ 48 ಗಂಟೆ ಒಳಗಾಗಿ ಹಣ ವರ್ಗಾವಣೆಯಾಗುತ್ತಿತ್ತು. ಈಗ 15 ದಿನವಾದರೂ ಬರುತ್ತಿಲ್ಲ. ಮಹಾರಾಷ್ಟ್ರ, ಆಂಧ್ರಪ್ರದೇಶ, ಹಾವೇರಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಗದಗ, ಮಂಡ್ಯ ಜಿಲ್ಲೆ ಸೇರಿ ವಿವಿಧ ಭಾಗಗಳಿಂದ ಗೂಡು ಮಾರಾಟ ಮಾಡಲು ಬಂದಿದ್ದಾರೆ. ಆದರೆ ಮೂರು ದಿನಗಳು ಕಳೆದರೂ ಹಣ ಸಿಗದೆ ಇಲ್ಲಿಯೇ ಉಳಿದುಕೊಂಡು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೂಕದಲ್ಲಿ ಅಕ್ರಮ: ರೀಲರ್‌ಗಳು ಗೂಡುಗಳನ್ನು ತೂಕ ಮಾಡುವಾಗ ಚೆಲ್ಆಡಿ, ಸ್ಯಾಂಪಲ್ ನೋಡುವುದಾಗಿ ಅರ್ಧ ಕೆ.ಜಿಗೂ ಅಧಿಕ ಗೂಡುಗಳನ್ನು ಎತ್ತಿಕೊಳ್ಳುತ್ತಾರೆ. ಗೂಡಿಗೆ ದರ ನಿಗದಿ ಮಾಡುವಾಗ ತಿಳಿಸಿದ ದರವನ್ನು ಕೊಡದೇ ಮೋಸ ಮಾಡುತ್ತಿದ್ದಾರೆ. ಸ್ಥಳೀಯ ರೈತರಿಗೆ ಹೆಚ್ಚಿನ ಬೆಲೆ ನೀಡಿದರೆ, ದೂರದಿಂದ ಬರುವ ರೈತರಿಗೆ ಕಡಿಮೆ ಬೆಲೆ ನಿಗದಿ ಮಾಡುತ್ತಾರೆ. ಜತೆಗೆ ₨100 ಒಳಗಿನ ಚಿಲ್ಲರೆ ಹಣವನ್ನು ಯಾವ ರೈತರಿಗೂ ನೀಡುವುದಿಲ್ಲ ಎಂದು ಆರೋಪಿಸಿದರು.

ರೇಷ್ಮೆ ಗೂಡು ನೀಡಿದ ರೈತರಿಗೆ 48 ಗಂಟೆ ಒಳಗಾಗಿ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಬೇಕು, ಸರಿಯಾದ ತೂಕ ಮಾಡಬೇಕು, ಗುಣಮಟ್ಟದ ಆಧಾರದಲ್ಲಿ ಗೂಡುಗಳಿಗೆ ಸರಿಯಾದ ಬೆಲೆ ನೀಡಬೇಕು. ಮಾರುಕಟ್ಟೆಯಲ್ಲಿ ಅಕ್ರಮಕ್ಕೆ ಬೆಂಬಲ ನೀಡುತ್ತಿರುವ ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕರನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ರಸ್ತೆಗಿಳಿದು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ರೇಷ್ಮೆ ಬೆಳೆಗಾರರಾದ ಎಸ್.ಎನ್. ದೇವರಾಜು, ಸಿ.ಎಂ. ಕೃಷ್ಣ, ಚಿಕ್ಕರಾಜು, ದೇವರ ಕಗ್ಗಲಹಳ್ಳಿಯ ವೆಂಕಟಮ್ಮ, ದಾವಣಗೆರೆ ಜಿಲ್ಲೆಯ ಹನುಮಂತಪ್ಪ, ನಾಗರಾಜು, ರೈತ ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್, ಎಂ.ಆರ್. ಶಿವಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)