ಕನಕಪುರ: ನಗರದ ಬೂದಿಕೆರೆ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕಳಪೆಯಾಗಿದೆ. ಗುತ್ತಿಗೆದಾರರ ಹಣವನ್ನು ತಡೆಹಿಡಿಯಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಮತ್ತು ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮಂಗಳವಾರ ದೂರು ನೀಡಿದರು.
ಕಿರಿದಾಗಿದ್ದ ರಸ್ತೆಯನ್ನು ಅಗಲೀಕರಣ ಮಾಡಲು ಎರಡು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಕಾಮಗಾರಿ ತುಂಬ ವಿಳಂಬವಾಗಿ ಪೂರ್ಣಗೊಂಡಿತು. ಮೊದಲೇ ರಸ್ತೆ ಕಿರಿದಾಗಿದ್ದು, ಅದರಲ್ಲಿಯೇ ರಸ್ತೆ ಮಧ್ಯದಲ್ಲಿ ವಿಭಜಕವನ್ನು ಮಾಡಲಾಗಿದೆ. ಇದರಿಂದ ರಸ್ತೆಯಲ್ಲಿ ವಾಹನಗಳು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕಾಮಗಾರಿಯೂ ಕಳಪೆಯಾಗಿದೆ. ಕಾಂಕ್ರೀಟ್ ಕಿತ್ತು ಮೇಲೆ ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಸ್ತೆಯ ಎರಡೂ ಬದಿಯಲ್ಲಿ ನಿರ್ಮಿಸಿರುವ ಚರಂಡಿಯು ತೀರಾ ಅವೈಜ್ಞಾನಿಕವಾಗಿದ್ದು, ರಸ್ತೆಯಲ್ಲಿನ ನೀರು ಚರಂಡಿಗೆ ಹೋಗುವುದಿಲ್ಲ, ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಯೋಜನಾಬದ್ಧವಾಗಿ ರೂಪಿಸದೆ ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಗುತ್ತಿಗೆದಾರರ ಹಣವನ್ನು ತಡೆಹಿಡಿದು, ಯೋಜನಾಬದ್ಧವಾಗಿ ಕಾಮಗಾರಿಯನ್ನು ಮರು ನಿರ್ಮಾಣ ಮಾಡಿಸಬೇಕು, ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ, ಪಿಡಬ್ಲ್ಯೂಡಿ ಎಇಇ ಶಿವಲಿಂಗಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಕೆಆಆರ್‌ಎಸ್ ಪಕ್ಷದ ಪ್ರಶಾಂತ ಹೊಸದುರ್ಗ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್, ಮುಖಂಡರಾದ ಗಿರೀಶ್ ಕುಮಾರ್, ಪರಮೇಶ್, ರುದ್ರೇಶ್, ಸಾಗರ್, ರಮೇಶ್, ಶಿವರಾಮು, ಕೆ.ಬಿ. ಬಸವರಾಜು, ಮಾದೇಶ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.