ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮಾತಿಗೆ ಮರುಳಾಗದಿರಿ: ಕಾಂಗ್ರೆಸ್ ಅಭ್ಯರ್ಥಿ ಸುರೇಶ್‌

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ
Last Updated 12 ಏಪ್ರಿಲ್ 2019, 13:33 IST
ಅಕ್ಷರ ಗಾತ್ರ

ರಾಮನಗರ: ‘ಬಿಜೆಪಿಯವರ ಮಾತುಗಳಿಗೆ ಮರುಳಾಗಿ ತಮ್ಮ ಅಮೂಲ್ಯವಾದ ಮತವನ್ನು ಕಳೆದುಕೊಳ್ಳಬೇಡಿ’ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ. ಸುರೇಶ್ ಮನವಿ ಮಾಡಿದರು.

ಇಲ್ಲಿನ ಶಾನುಭೋಗನಹಳ್ಳಿಯಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿದಿನ ಮೋದಿ ಭಾವಚಿತ್ರವನ್ನು ಮಾಧ್ಯಮಗಳಲ್ಲಿ ತೋರಿಸುವ ಮೂಲಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ರೀತಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಅದರಲ್ಲೂ ರೈತ ಪರವಾದ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ ಎಂದು ಆರೋಪಿಸಿದರು.

ರೈತ, ಕಾರ್ಮಿಕ ಪರ ಎಂದು ಹೇಳಿಕೊಂಡು ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ತಿಳಿಸಿದರು.

ಎರಡು ವೈರಿ ಪಕ್ಷಗಳು ಈಗ ಜತೆಯಾಗಿ ಮತವನ್ನು ಕೇಳುತ್ತಿದ್ದೇವೆ. ಕಾರ್ಯಕರ್ತರು ಕೂಡ ಹಳೆಯ ವೈಮನಸ್ಯವನ್ನು, ಭಿನ್ನಾಭಿಪ್ರಾಯವನ್ನು ಮರೆತು ಚುನಾವಣೆಯಲ್ಲಿ ಕೆಲಸ ಮಾಡಬೇಕಾಗಿದೆ. ಬಿಜೆಪಿಯವರು ನಿಮ್ಮ ಎದುರಿಗೆ ಸಿಕ್ಕರೆ ರಾಮನಗರ ಜಿಲ್ಲೆಗೆ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿ ಎಂದರು.

ಮೈತ್ರಿ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನಡೆಸುತ್ತಿದೆ. ಈ ಭಾಗದ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕಾವೇರಿಯಿಂದ ವೈಜಿ ಗುಡ್ಡಕ್ಕೆ ನೀರು ತರುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ರೈತರು ಜೀವನ ನಡೆಸಲು ಹೈನುಗಾರಿಕೆ ಪ್ರಮುಖ ಆಧಾರವಾಗಿದೆ. ಮುಂದಿನ ಮೂರು ತಿಂಗಳಲ್ಲಿ ಹಾಲಿನ ಈಗ ನೀಡುತ್ತಿರುವ ಪ್ರೋತ್ಸಾಹಧನದ ಜತೆಗೆ ₨3 ಹೆಚ್ಚಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಶಾಸಕ ಎ. ಮಂಜುನಾಥ್ ಮಾತನಾಡಿ ಕೂಟಗಲ್ ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು, ಅಂತರ್ಜಲವನ್ನು ವೃದ್ಧಿಸಲು ₨67 ಕೋಟಿ ವೆಚ್ಚದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಭಾಗದ ರಸ್ತೆ ಹಾಗೂ ಸೇತುವೆಗಳನ್ನು ಉತ್ತಮಗೊಳಿಸಲು ₨32 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಕನಕಪುರದಲ್ಲಿ ₨600 ಕೋಟಿ ವೆಚ್ಚದಲ್ಲಿ ಹಾಲಿನ ಪೌಡರ್ ತಯಾರಿಕಾ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಡಿ.ಕೆ. ಸುರೇಶ್ ಅವರಿಗೆ ಈ ಬಾರಿಯೂ ಮತದಾರರು ಬೆಂಬಲಿಸಬೇಕು ಎಂದು ಅವರು ಹೇಳಿದರು.

ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್. ನಟರಾಜ್, ಸದಸ್ಯರಾದ ಎಸ್.ಪಿ. ಜಗದೀಶ್, ಮಹದೇವಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್, ಮುಖಂಡರಾದ ಎನ್. ಸುಬ್ಬಾಶಾಸ್ತ್ರಿ, ಕೆ. ರಮೇಶ್, ಎಸ್.ಟಿ. ಕಾಂತರಾಜ ಪಟೇಲ್, ಲಕ್ಷ್ಮೀನಾರಾಯಣ, ಎಸ್.ಟಿ. ಪ್ರೇಮ್ ಕುಮಾರ್ ಇದ್ದರು.

‘ಕ್ರಿಯಾಶೀಲ ಅಭ್ಯರ್ಥಿ’

ಕಾಂಗ್ರೆಸ್ ಮುಖಂಡ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಡಿ.ಕೆ. ಶಿವಕುಮಾರ್ ಅವರ ಶ್ರಮ ಕಾರಣವಾಗಿದೆ. ಆದ್ದರಿಂದ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಡಿ.ಕೆ. ಸುರೇಶ್ ಅತ್ಯಂತ ಕ್ರಿಯಾಶೀಲ ಸಂಸದರಾಗಿದ್ದಾರೆ. ಇಂತವರನ್ನು ಆಯ್ಕೆ ಮಾಡುವುದರಿಂದ ಅಭಿವೃದ್ಧಿ ಕೆಲಸಗಳು ಹೆಚ್ಚಿನ ಮಟ್ಟದಲ್ಲಿ ನಡೆಯಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಸ್ಥಳೀಯರಲ್ಲ, ಅವರು ಯಾರು ಎಂಬುದೇ ಜನರಿಗೆ ಗೊತ್ತಿಲ್ಲ. ಮತದಾನದ ಬಳಿಕ ಅವರು ಈ ಕ್ಷೇತ್ರಕ್ಕೆ ಬರುವುದಿಲ್ಲ. ಅವರ ಭ್ರಮೆಯ ಮಾತುಗಳಿಗೆ ಮರುಳಾಗಿ ನಿಮ್ಮ ಮತದ ಮೌಲ್ಯವನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

*ಪ್ರಧಾನಿ ಮೋದಿ ಚುನಾವಣೆಯ ದೃಷ್ಟಿಯಿಂದ ರೈತರ ಖಾತೆಗೆ ಹಣ ಹಾಕುತ್ತೇವೆಂದು ಹೇಳಿದ್ದಾರೆ. ಅದೂ ಕೂಡ ಸಮರ್ಪಕವಾಗಿ ಜಾರಿಯಾಗಿಲ್ಲ
–ಡಿ,ಕೆ. ಸುರೇಶ್‌
ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT