ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಡ್‌ ಶೋ: ಹಳ್ಳಿಗಳಲ್ಲಿ ಅಬ್ಬರದ ಪ್ರಚಾರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌ ಕ್ಷೇತ್ರ ಸುತ್ತಾಟ
Last Updated 3 ಏಪ್ರಿಲ್ 2019, 13:22 IST
ಅಕ್ಷರ ಗಾತ್ರ

ರಾಮನಗರ: ಅವರು ತಮ್ಮ ಕತ್ತಿಗೆ ಸುತ್ತಿದ್ದ ಶಾಲನ್ನೇ ತೆಗೆದು ಬೆವರು ಒರೆಸಿಕೊಂಡರು. ಮಧ್ಯಾಹ್ನ 12 ಗಂಟೆಯ ಸುಡುವ ಕೆಂಡದಂತಹ ಬಿಸಿಲಿನಲ್ಲಿ ಭಾಷಣ ಮಾಡುತ್ತಿದ್ದರೆ ಹಣೆಯಿಂದ ಬೆವರು ತೊಟ್ಟಿಕ್ಕುತಿತ್ತು.

ರಾಮನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹಾರೋಹಳ್ಳಿಯ ಬಸ್‌ ನಿಲ್ದಾಣ ವೃತ್ತದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ರ ಚುನಾವಣಾ ಪ್ರಚಾರಕ್ಕೆ ಮಂಗಳವಾರ ಮಧ್ಯಾಹ್ನ ಬಿಸಿಲಿನಲ್ಲೂ ಸಾಕಷ್ಟು ಜನ ಸೇರಿದ್ದರು.

ಅದಕ್ಕೂ ಮುನ್ನ ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯಿಂದ ದಿನದ ಪ್ರಚಾರ ಆರಂಭಗೊಂಡಿತ್ತು. ಬೆಂಗಳೂರಿನ ನಿವಾಸದಿಂದ ಬೆಳಗ್ಗೆಯೇ ಹೊರಟ ಅವರು ಬೆಳಗ್ಗೆ ಹತ್ತಕ್ಕೆಲ್ಲ ಮರಳವಾಡಿಗೆ ಬಂದಿದ್ದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಜೋರು ಸದ್ದಿನ ಮೂಲಕ ಅಭ್ಯರ್ಥಿಯನ್ನು ಬರಮಾಡಿಕೊಂಡರು. ಅಲ್ಲಿಂದ ಪಕ್ಷದ ಪ್ರಚಾರ ವಾಹನ ಏರಿದ ಸುರೇಶ್‌ ಪ್ರಚಾರ ಆರಂಭಿಸಿದರು. ಸ್ಥಳೀಯ ಜೆಡಿಎಸ್‌ ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್‌ ನೀಡಿದ್ದು ವಿಶೇಷವಾಗಿತ್ತು.

ಮಂಗಳವಾರ ಸುರೇಶ್‌ ರಾಮನಗರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡರು. ಮರಳವಾಡಿ, ಹಾರೋಹಳ್ಳಿ, ಜಕ್ಕಸಂದ್ರ ರಸ್ತೆಯಲ್ಲಿ ಪ್ರಚಾರ ಮುಗಿಸುವ ವೇಳೆಗಾಗಲೇ ಮಧ್ಯಾಹ್ನ ಊಟದ ಸಮಯವಾಗಿತ್ತು. ಅಲ್ಲಿಂದ ದೊಂಬರದೊಡ್ಡಿ ಗೇಟ್‌, ಕೊಟ್ಟಗಾಳು ಹಾಗೂ ದೊಡ್ಡಮುದವಾಡಿ ಸುತ್ತುವ ವೇಳೆಗೆ ಸಂಜೆ ಸಮೀಪಿಸುತ್ತಿತ್ತು. ಮುಂದೆ ರಾಮನಗರ ತಾಲ್ಲೂಕಿನ ರೇವಣಸಿದ್ದೇಶ್ವರ ಬೆಟ್ಟ, ಬನ್ನಿಕುಪ್ಪೆ, ಚನ್ನಮಾನಹಳ್ಳಿ, ಹುಣಸನಹಳ್ಳಿ, ಬಿಳಗುಂಬ, ಸುಗ್ಗನಹಳ್ಳಿ ಹಾಗೂ ಮಾಯಗಾನಹಳ್ಳಿ ಪ್ರಚಾರ ಮುಗಿಸುವ ವೇಳೆಗೆ ರಾತ್ರಿ 10 ಗಂಟೆ ಸಮೀಪಿಸುತ್ತಿತ್ತು. ಹೋದಲ್ಲೆಲ್ಲ ತಮಟೆ, ಪಟಾಕಿಗಳ ಸದ್ದು ಮೇಳೈಸುತ್ತಿದ್ದವು. ಕೆಲವು ಕಡೆ ಕಾರ್ಯಕರ್ತರು ಪುಷ್ಪಾರ್ಚನೆಯನ್ನೂ ಮಾಡಿದರು.

ಹೋದಲ್ಲೆಲ್ಲ ಮೋದಿ ವಿರುದ್ಧ ಬೈಗುಳ: ದಿನವಿಡೀ ಪ್ರಚಾರ ನಡೆಸಿದ ಸುರೇಶ್‌ ತಮ್ಮ ಭಾಷಣದ ಬಹುಪಾಲು ಸಮಯವನ್ನು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟೀಕೆಗೆ ವ್ಯಯಿಸಿದರು.

‘ಒಂದು ಪಕ್ಷ ಮತ್ತದರ ಪ್ರಧಾನಿಯು ನಿತ್ಯ ಸುಳ್ಳು ಹೇಳಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಉದ್ಯಮಿಗಳ ₨3.5 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಅವರಿಗೆ ರೈತರ ಸಾಲ ಮನ್ನಾ ಮಾಡಲು ಮಾತ್ರ ಮನಸ್ಸಿಲ್ಲ. ರಾಜ್ಯ ಸರ್ಕಾರಗಳ ಮನವಿಗೂ ಸ್ಪಂದಿಸುವುದಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಮಾತ್ರ ಅವರಿಗೆ ಅನ್ನದಾತರ ನೆನಪಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

ಈ ನಡುವೆ ಕ್ಷೇತ್ರದಲ್ಲಿ ತಾವು ಕಳೆದ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೊಡುವುದನ್ನು ಅವರು ಮರೆಯಲಿಲ್ಲ. ಹೆದ್ದಾರಿಗಳ ವಿಸ್ತರಣೆ, ಕೆರೆ ತುಂಬಿಸುವ ಯೋಜನೆಗಳು, ನರೇಗಾದಲ್ಲಿನ ಸಾಧನೆ... ಹೀಗೆ ನಾನಾ ಯೋಜನೆಗಳ ಪ್ರಯೋಜನವನ್ನು ಮತದಾರರಿಗೆ ತಲುಪಿಸಿದ್ದನ್ನು ನೆನಪಿಸುತ್ತಲೇ ಮತದಾನದ ಮೂಲಕ ಋಣ ಸಂದಾಯ ಮಾಡುವ ಬೇಡಿಕೆಯನ್ನೂ ಇಟ್ಟರು.

ಚುನಾವಣಾ ಪ್ರಚಾರದ ನಡುವೆಯೇ ಕೆಲವು ಸಾರ್ವಜನಿಕರು ಸಂಸದರಿಗೆ ಅಹವಾಲು ಸಲ್ಲಿಸಿದರು. ರಸ್ತೆ, ಕುಡಿಯುವ ನೀರು, ಪಿಂಚಣಿ... ಹೀಗೆ ನಾನಾ ದೂರುಗಳು ಬಂದವು.

ಕಾರ್ಯಕರ್ತರ ದೋಸ್ತಿ!
ಸುರೇಶ್‌ ಹೋದಲೆಲ್ಲ ಕಾಂಗ್ರೆಸ್‌ ಕಾರ್ಯಕರ್ತರ ಜೊತೆಗೆ ಜೆಡಿಎಸ್‌ ಕಾರ್ಯಕರ್ತರೂ ಶಾಲು–ಹಾರ ಹಾಕಿ ಸ್ವಾಗತಿಸಿದರು. ಒಂದು ವರ್ಷದ ಹಿಂದಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಡಿದಾಡಿಕೊಂಡಿದ್ದ ಉಭಯ ಪಕ್ಷಗಳ ಕಾರ್ಯಕರ್ತರು ಸದ್ಯ ದೋಸ್ತಿಗಳಾಗಿ ಬದಲಾಗಿದ್ದರು!

ದೋಸ್ತಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪ್ರಚಾರ ನಡೆಸಲು ಸ್ವತಃ ಅನಿತಾ ಕುಮಾರಸ್ವಾಮಿ ಮಂಗಳವಾರ ಪ್ರಚಾರಕ್ಕೆ ಬಂದಿದ್ದರು. ಇವರೊಟ್ಟಿಗೆ ಕಾಂಗ್ರೆಸ್ ಮುಖಂಡ ಇಕ್ಬಾಲ್‌ ಹುಸೇನ್‌, ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರು, ಜೆಡಿಎಸ್ ಮುಖಂಡರು ಪ್ರಚಾರ ಕಾರ್ಯದಲ್ಲಿ ಸುರೇಶ್‌ಗೆ ಸಾಥ್‌ ನೀಡಿದರು.

ಹೀಗಿರುತ್ತೆ ಅವರ ದಿನಚರಿ
ಸದ್ಯ ಬಹಿರಂಗ ಪ್ರಚಾರ ಅಂತ್ಯಗೊಂಡು ಮತದಾನ ನಡೆಯುವವರೆಗೂ ಅಭ್ಯರ್ಥಿಗಳಿಗೆ ನಿದ್ದೆ ಬರುವುದಿಲ್ಲ, ಸುರೇಶ್‌ ವಿಷಯದಲ್ಲೂ ಅಷ್ಟೇ.

ಬೆಂಗಳೂರು ಗ್ರಾಮಾಂತರ ಕ್ಷೇತ್ರವು ರಾಜ್ಯದ ಅತಿ ದೊಡ್ಡ ಲೋಕಸಭಾ ಕ್ಷೇತ್ರಗಳಲ್ಲಿ ಒಂದು. ಬರೋಬ್ಬರಿ 24.56 ಲಕ್ಷ ಮತದಾರರು ಇಲ್ಲಿದ್ದು, ಮತದಾರರನ್ನು ಭೇಟಿ ಮಾಡಲು ಸಾಕಷ್ಟು ಬೆವರು ಹರಿಸಬೇಕು. ಹೀಗಾಗಿ ಮುಂಜಾನೆಯಿಂದಲೇ ಅವರು ಪ್ರಚಾರ ಆರಂಭಿಸುತ್ತಾರೆ. ನಗರ ಪ್ರದೇಶದಲ್ಲಿ ಬೆಳಗ್ಗೆಯೇ ಮತಯಾಚನೆ ಶುರು ಮಾಡುತ್ತಾರೆ. ಹಳ್ಳಿಗಳಲ್ಲಾದರೆ ಬೆಳಗ್ಗೆ ಆರಂಭಿಸಿ ದಿನವಿಡೀ ಪ್ರಚಾರ ಮಾಡುತ್ತಾರೆ. ನಡುವೆ ಅಲ್ಲಲ್ಲಿ ಕಾರ್ಯಕರ್ತರ ಸಮಾವೇಶ ನಡೆಸುತ್ತಿದ್ದಾರೆ. ಎಲ್ಲ ಮುಗಿಸಿ ಮನೆಗೆ ಹೋಗುವ ವೇಳೆಗೆ ರಾತ್ರಿ 12 ಗಂಟೆ ಸಮೀಪಿಸಿರುತ್ತದೆ.

ಮೂರನೇ ಬಾರಿ ಕಣಕ್ಕೆ
ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಡಿ.ಕೆ. ಸುರೇಶ್‌ ಮೂರನೇ ಬಾರಿ ಕಣಕ್ಕೆ ಇಳಿದಿದ್ದಾರೆ. 2013ರ ಉಪ ಚುನಾವಣೆ ಹಾಗೂ 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಅವರು ಸಂಸದರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT