ಸೋಮವಾರ, ಆಗಸ್ಟ್ 15, 2022
22 °C
ದೇಶದಲ್ಲಿ ಸಾವಿರಾರು ಮಕ್ಕಳು ಅನಾಥ: ಮಾಜಿ ಸಚಿವ ಎಂ.ಬಿ. ಪಾಟೀಲ ವಿಷಾದ

ಕೇಂದ್ರ ನೀತಿಗೆ ‘ಕೈ’ ಪಾಳಯ ಲೇವಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಎಡಬಿಡಂಗಿ ನೀತಿ ಅನುಸರಿಸಿದ್ದರಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪೋಷಕರನ್ನು ಕಳೆದುಕೊಂಡು ಸಾವಿರಾರು ಮಕ್ಕಳು ಅನಾಥರಾಗಿದ್ದಾರೆ’ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ದೂರಿದರು.

ಪಟ್ಟಣದ ಖಾಸಗಿ ಬಸ್‌ನಿಲ್ದಾಣದಲ್ಲಿ ಶನಿವಾರ ಪಂಡಿತ ಮಹದೇವಶಾಸ್ತ್ರಿ ನೆನಪಿಗಾಗಿ ಅವರ ಮೊಮ್ಮಗ ಮಹದೇವಶಾಸ್ತ್ರಿ ಕೊಡಮಾಡಿರುವ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೊದಲನೇ ಅಲೆ ಬಂದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೈಮರೆತು ಮಲಗಿದ್ದವು. ಎರಡನೇ ಅಲೆಯಲ್ಲಿ ಆಮ್ಲಜನಕ, ವೆಂಟಿಲೇಟರ್, ಬೆಡ್ ಸಿಗದೆ ಜನರು ಮರಣ ಹೊಂದಿದರು. ಬಿಜೆಪಿ ಬಡವರ ಬಗ್ಗೆ ಕಾಳಜಿ ಹೊಂದಿಲ್ಲ. ಬಲ್ಲಿದವರಿಗೆ ಅನುಕೂಲ ಮಾಡಿಕೊಡಲು ಬಡವರನ್ನು ಬಲಿ ಪಡೆಯಿತು ಎಂದು ಟೀಕಿಸಿದರು.

ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಬಿಜೆಪಿಯವರು ಸಮಾಜ ಕಟ್ಟುವ ಕೆಲಸ ಮಾಡದೆ ಒಡೆಯುವ ಕೆಲಸ ಮಾಡಿದರು. ಡೊನಾಲ್ಡ್‌ ಟ್ರಂಪ್‌ ಗುಜರಾತಿಗೆ ಆಗಮಿಸಿದಾಗ ಕೊರೊನಾ ಭಾರತಕ್ಕೆ ಕಾಲಿಟ್ಟಿತು. ಗುಜರಾತಿಗೆ ಹೆಚ್ಚಿನ ಲಸಿಕೆ ನೀಡಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.

ಸೋಂಕಿನಿಂದ ಸತ್ತವರ ಲೆಕ್ಕವನ್ನೂ ಸರಿಯಾಗಿ ಕೊಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಇಡಿ, ಸಿಬಿಐ, ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡಿದೆ. ರಾಜ್ಯದಲ್ಲಿ ಆರೋಗ್ಯ ಇಲಾಖೆಗೆ ಹಲವರು ಮಂತ್ರಿಗಳಿದ್ದಾರೆ. ಹೆಣಕ್ಕೊಬ್ಬ ಮಂತ್ರಿ. ಪರಸ್ಪರ ಸಹಕಾರವಿಲ್ಲ ಎಂದು ಆರೋಪಿಸಿದರು.

ಸೋಂಕಿತರಿಗೆ ಕೋವಿಡ್ ಲಸಿಕೆ ನೀಡಲು ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಾಯಿತು. ಕಾರ್ಮಿಕ ಇಲಾಖೆಯಿಂದ ನೀಡುವ ಕಿಟ್‌ಗಳ ಮೇಲೆ ಬಿಜೆಪಿ ಶಾಸಕರು ತಮ್ಮ ಫೋಟೊ ಹಾಕಿಸಿಕೊಂಡಿದ್ದಾರೆ. ಸರ್ಕಾರ ಸಂಕಟದಲ್ಲಿ ಇರುವವರ ನೆರವಿಗೆ ಬರಲಿಲ್ಲ. ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರು ಲಾಕ್‌ಡೌನ್‌ನಿಂದಾಗಿ ಸಂಕಟಕ್ಕೆ ಸಿಲುಕಿದ ಜನಸಾಮಾನ್ಯರ ನೆರವಿಗೆ ಮುಂದಾಗಿದ್ದಾರೆ ಎಂದರು.

ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಜನರ ಜೀವ ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಆಡಳಿತ ಮಾಡಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಬೇಕು ಎಂದು ಹೇಳಿದರು.

ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಬಿಜೆಪಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆ ಎಂದರು.

ಸಮಾಜ ಸೇವಕ ಕೆ.ಪಿ. ಮಹದೇವಶಾಸ್ತ್ರಿ ಮಾತನಾಡಿ, ಲಾಕ್‌ಡೌನ್‌ನಿಂದ ಸಂಕಟದಲ್ಲಿರುವ ಜನರಿಗೆ 1,500 ದಿನಸಿ ಕಿಟ್‌ ವಿತರಿಸಲಾಗಿದೆ ಎಂದರು.  

ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ, ಜಿ.ಪಂ ಮಾಜಿ ಸದಸ್ಯ ಎಂ.ಕೆ. ಧನಂಜಯ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್, ಪುರಸಭಾ ಸದಸ್ಯ ಎಚ್.ಜೆ. ಪುರುಷೋತ್ತಮ್, ಶಶಾಂಕ್‌ ರೇವಣ್ಣ, ಕಾರ್ತಿಕ್‌, ಸೋಲೂರು ಎಂ. ನಾಗರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.