ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ವಜಾಕ್ಕೆ ಆಗ್ರಹ

ಜಿಲ್ಲಾ ಕಚೇರಿ ಸಂಕೀರ್ಣದ ಎದುರು ಕಾಂಗ್ರೆಸ್‌ ಪ್ರತಿಭಟನೆ
Last Updated 4 ನವೆಂಬರ್ 2019, 14:38 IST
ಅಕ್ಷರ ಗಾತ್ರ

ರಾಮನಗರ: ‘ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ಬಿಜೆಪಿ ನೇರವಾಗಿ ಕಾರಣ ಎಂಬ ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಮಾತನಾಡಿರುವ ಆಡಿಯೊ ದೃಢಪಡಿಸುತ್ತಿದೆ. ಆದ್ದರಿಂದ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವನ್ನು ತಕ್ಷಣ ವಜಾ ಮಾಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ಜಿಲ್ಲಾ ಕಚೇರಿಗಳ ಎದುರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ ‘ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡುವಾಗ 17 ಮಂದಿ ಅನರ್ಹ ಶಾಸಕರಿಂದ ಇಂದು ಬಿಜೆಪಿ ಅಧಿಕಾರದಲ್ಲಿದೆ ಎಂದಿದ್ದಾರೆ. ಬಿಜೆಪಿಯವರು 17 ಶಾಸಕರ ರಾಜೀನಾಮೆಗೂ ತಮಗೂ ಏನೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಸತ್ಯ ಬಹಿರಂಗವಾಗಿದೆ. ಸ್ವಯಂ ಮುಖ್ಯಮಂತ್ರಿಗಳೇ 17 ಶಾಸಕರ ರಾಜೀನಾಮೆಗೆ ತಮ್ಮ ಪಕ್ಷವೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ’ ಎಂದು ದೂರಿದರು.

‘17 ಶಾಸಕರಿಂದ ರಾಜೀನಾಮೆ ಕೊಡಿಸಿ ಆಡಳಿತದಲ್ಲಿದ್ದ ಸರ್ಕಾರವನ್ನು ಉರುಳಿಸಿದ್ದು ಸಂವಿಧಾನ ವಿರೋಧಿ ಕ್ರಮ. ರಾಜಕೀಯ ಮೌಲ್ಯಗಳಿಗೆ ವಿರೋಧ ಕೂಡ. ಇಂತಹ ಅನೀತಿ ಸರ್ಕಾರ ಅಸ್ತಿತ್ವದಲ್ಲಿರುವುದು ಸರಿಯಲ್ಲ. ಹೀಗಾಗಿ ವಜಾ ಮಾಡಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುತ್ತಿದೆ’ ಎಂದು ತಿಳಿಸಿದರು. ‘17 ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದರು.

‘ಕನಕಪುರ ನಗರಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್‌ನವರು ನಾಮಪತ್ರ ಸಲ್ಲಿಸದಿದ್ದರೆ ನಮ್ಮ ಪಕ್ಷದ ತಪ್ಪೇನು. ಆ ಪಕ್ಷದ (ಜೆಡಿಎಸ್) ವರಿಷ್ಠರಿದ್ದಾರೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಆದವರಿದ್ದಾರೆ. ಅವರೇ ಮುಂದೆ ನಿಂತು ನಾಮಪತ್ರಗಳನ್ನು ಹಾಕಿಸಬಹುದಿತ್ತು. ಕನಕಪುರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದರು.

‘ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದು ನೋವು ತಂದಿದೆ. ಹಿಂದಿನ ಸರ್ಕಾರದ ನಿರ್ಧಾರಗಳನ್ನು ಈ ಸರ್ಕಾರ ಗೌರವಿಸಬೇಕಿತ್ತು. ಈ ಸರ್ಕಾರದ ನಿರ್ಧಾರಗಳನ್ನು ಮುಂದಿನ ಸರ್ಕಾರ ಬದಲಿಸಿದರೆ ಹೇಗಿರುತ್ತೆ’ ಎಂದು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್. ಗಂಗಾಧರ್, ಮಖಂಡರಾದ ಕೆ. ಶೇಷಾದ್ರಿ, ವಿ.ಎಚ್. ರಾಜು, ಜಯರಾಮಯ್ಯ, ನಿಜಾಮುದ್ದೀನ್ ಷರೀಫ್, ಕೆಂಪರಾಮು, ಸುರೇಶ್, ಖಾಸಿಂ, ಚಂದ್ರು, ಟಿ.ಆರ್. ದೇವರಾಜು, ಅನಿಲ್ ಜೋಗಿಂದರ್, ಶ್ರೀನಿವಾಸ್ ಚನ್ನಮಾನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT