ಭಾನುವಾರ, ಜೂಲೈ 5, 2020
24 °C
ರಾಮನಗರ ಅಂಚೆ ಕಚೇರಿ ಮುಂಭಾಗ ಕಾರ್ಯಕರ್ತರಿಂದ ಪ್ರತಿಭಟನೆ

ರಾಮಗರದಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿನ ಅಂಚೆ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಅಂಚೆ ಕಚೇರಿ ಮುಂಭಾಗ ಧರಣಿ ಕುಳಿತ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ "ಕಳೆದ ಮೂರ್ನಾಲ್ಕು ವಾರದಿಂದಲೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ನಿರಂತರ ಏರುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಬೆಳೆ ಏರಿಕೆ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಯಾಕಿಷ್ಟು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬುದಕ್ಕೆ ಕೇಂದ್ರ ಸರಕಾರ ಸಮರ್ಥನೆ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಈ ಹಿಂದೆ ಯುಪಿಎ ಸರಕಾರ ಅಸ್ತಿತ್ವದಲ್ಲಿದ್ದಾಗ ಲೀಟರ್ ಪೆಟ್ರೋಲ್ ದರ ₨80ರ ಆಸುಪಾಸಿನಲ್ಲಿತ್ತು. ಆದರೆ ಆಗ ಕಚ್ಚಾ ತೈಲದ ಬೆಲೆ ಕೂಡ ಗಗನಮುಖಿಯಾಗಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ, ಆದರೂ ದೇಶದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಏರಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 2014ರಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಪೆಟ್ರೋಲ್ ಮೇಲಿನ ಸುಂಕ ₨9.20 ಮತ್ತು ಡೀಸಲ್ ಮೇಲಿನ ಸುಂಕ ₨3.46 ಇತ್ತು. ಕಳೆದ ಆರು ವರ್ಷದಲ್ಲಿ ಇದು ಕ್ರಮವಾಗಿ ₨23.78 ಮತ್ತು ₨28.37ಗೆ ಏರಿಕೆಯಾಗಿದೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಮಾತನಾಡಿ, ಪೆಟ್ರೋಲ್, ಡೀಸಲ್ ಬೆಲೆ ಏರಿಸಿರುವುದು ಅಗತ್ಯ ವಸ್ತುಗಳ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ತಮ್ಮ ಪಕ್ಷ ರಾಜ್ಯ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ನೋಟು ಅಮಾನೀಕರಣ, ಜಿಎಸ್‍ಟಿ ತೆರಿಗೆ ಪದ್ದತಿ ಹೇರಿಕೆ, ಕಪ್ಪು ಹಣ ತರ್ತೀವಿ ಅಂತ ಸುಳ್ಳು ಹೇಳಿ ಜನರಲ್ಲಿ ಆಸೆ ಹುಟ್ಟಿಸಿ ಜನಧನ್ ಖಾತೆ ಮಾಡಿಸಿದ್ದು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಭೂ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇವೆಲ್ಲ ರೈತ ವಿರೋಧಿ, ಜನಸಮಾನ್ಯ ವಿರೋಧಿ ನೀತಿಗಳು ಎಂದು ಹೇಳಿದರು.

ಪ್ರತಿಭಟನೆಯ ನಂತರ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್‍ಅಧ್ಯಕ್ಷ ಗಂಗಾಧರ್, ಕೆಪಿಸಿಸಿ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ, ಮುಖಂಡರಾದ ಕೆ.ಶೇಷಾದ್ರಿ, ವಿ.ಎಚ್.ರಾಜು, ಎ.ಬಿ.ಚೇತನ್ ಕುಮಾರ್, ಭದಯ್ಯ, ಎಲ್.ಚಂದ್ರಶೇಖರ್ ಇದ್ದರು.

ಕಚ್ಚಾತೈಲ ಬೆಲೆ ಸ್ಥಿರವಾಗಿದ್ದರೂ ತೈಲ ಬೆಲೆ ಏರಿಕೆ

ಯುಪಿಎ ಅಧಿಕಾರದಲ್ಲಿದ್ದಾಗ ಕಚ್ಚಾತೈಲ ಬೆಲೆ ಹೆಚ್ಚಿದ್ದರೂ ತೈಲ ಬೆಲೆ ಸ್ಥಿರವಾಗಿತ್ತು. ಈಗ ಅದು ಉಲ್ಟಾ ಆಗಿದೆ
ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು