ಜೆಡಿಎಸ್ ಮುಖಂಡರಿಗೆ ಕಾಂಗ್ರೆಸ್ ಬಲೆ; ಕುಮಾರಸ್ವಾಮಿ ಟೀಕೆ

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೆಡಿಎಸ್ ಮುಖಂಡರಿಗೆ ಬಲೆ ಹಾಕುತ್ತಿದ್ದು, ಮುಂದೆ ಆ ಬಲೆಯೇ ಅವರಿಗೆ ಮುಳುವಾಗಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದರು.
ರಾಮನಗರದಲ್ಲಿ ಮಂಗಳವಾರ ಸಂಜೆ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಅವರೇ ಹೇಳಿರುವಂತೆ ಡಿಕೆಶಿ ಬಲೆ ಹಿಡಿದುಕೊಂಡು ಜೆಡಿಎಸ್ ನಾಯಕರ ಮನೆ ಮುಂದೆ ಕುಳಿತಿದ್ದಾರೆ. ಶಿವಮೊಗ್ಗದಲ್ಲಿ ಈಗಾಗಲೇ ಬಲೆ ಹಾಕಿ ಒಬ್ಬರನ್ನು ಕರೆದುಕೊಂಡು ಹೋದರು. ಆದರೆ ಮುಂದೆ ಅದೇ ಅವರಿಗೆ ಮುಳುವಾಗಲಿದೆ’ ಎಂದು ಟೀಕಿಸಿದರು.
ಮನಗೂಳಿಯವರು ಡಿ.ಕೆ.ಶಿವಕುಮಾರ್ ಹತ್ತಿರ ಹೋಗಿರಲಿಲ್ಲ. ಅವರೇ ಮನಗೂಳಿ ಬಳಿ ಹೋಗಿದ್ದರು ಎಂದು ಕುಮಾರಸ್ವಾಮಿ ಪುನರುಚ್ಛರಿಸಿದರು. ‘ಇದೇ 16 ರಿಂದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದೇನೆ. ಕಾಂಗ್ರೆಸ್ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಆದರೆ ಮೊನ್ನೆ ಪ್ರಚಾರದ ವೇಳೆ ಜನರೇ ಅಭ್ಯರ್ಥಿಗೆ ₹50 ಸಾವಿರ ಹಣವನ್ನು ಚುನಾವಣಾ ಖರ್ಚಿಗೆ ನೀಡಿದ್ದಾರೆ.
ಸಿಂದಗಿಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಕಳೆದ 15 ವರ್ಷದಿಂದ ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿತ್ತು. ಈ ಬಾರಿ ಕಾಂಗ್ರೆಸ್‌ನವರು ನಮ್ಮ ಪಕ್ಷದಿಂದ ಹೈಜಾಕ್ ಮಾಡಿಕೊಂಡು ಹೋಗಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ನಾವು ಸುಸಂಸ್ಕೃತ ಹೆಣ್ಣು ಮಗಳನ್ನು ಅಭ್ಯರ್ಥಿ ಮಾಡಿದ್ದೇವೆ ಎಂದರು.
ದಾಳಿಗೆ ಕಾಂಗ್ರೆಸ್ ಕಾರಣ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಲುವಾಗಿ ಅವರ ಆಪ್ತರ ಮೇಲೆ ಐ.ಟಿ ದಾಳಿ ನಡೆದಿದೆ. ಈ ವಿಚಾರದಲ್ಲಿ ನಾನೇ ಪ್ರಥಮವಾಗಿ ಹೇಳಿಕೆ ನೀಡಿದ್ದೆ. ಆದರೆ ಈ ದಾಳಿ ನಡೆಯಲು ಕಾಂಗ್ರೆಸ್ ನವರೇ ಕಾರಣ. ಯಡಿಯೂರಪ್ಪ ಅವರು ಕಾಂಗ್ರೆಸ್ ಸಹವಾಸ ಮಾಡಲು ಹೋಗಿದ್ದರಿಂದಲೇ ಹೀಗಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.