ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಹೊರಗುತ್ತಿಗೆ ಕಾರ್ಮಿಕರ ಕಾಯಂಗೆ ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ
Last Updated 3 ಫೆಬ್ರುವರಿ 2023, 4:32 IST
ಅಕ್ಷರ ಗಾತ್ರ

ರಾಮನಗರ: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಗುತ್ತಿಗೆ ಕಾರ್ಮಿಕರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿ ಗೊಳಪಡಿಸಿ ಹಂತಹಂತವಾಗಿ ಕಾಯಂಗೊಳಿಸುವಂತೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ಆರಂಭಿಸಿದರು.

ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ನಡೆದ ಮುಷ್ಕರದಲ್ಲಿ ಸಮಾವೇಶಗೊಂಡ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ನೌಕರರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಮುಂದಾಗಿರುವ ಸರ್ಕಾರವು ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಸಹಾಯಕರು, ಲೋಡರ್ಸ್, ಕ್ಲೀನರ್ಸ್, ಎಸ್‍ಟಿಪಿ ಆಪರೇಟರ್, ಸಹಾಯಕರು, ಡಾಟಾ ಆಪರೇಟರ್, ಸ್ಯಾನಿಟರಿ ಸೂಪರ್ ವೈಸರ್ಸ್ ಹಾಗೂ ಲ್ಯಾಂಡ್ ಫೀಲ್ಡ್ ಕೆಲಸಗಾರರನ್ನು ನೇರನೇಮಕಾತಿ ಹಾಗೂ ಕಾಯಂ ಮಾಡಬೇಕು ಎಂದು ಮುಷ್ಕರ ನಿರತರು ಆಗ್ರಹಿಸಿದರು.

ನಗರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ. 2017ರಲ್ಲಿ ಸಹ ಪೌರ ಕಾರ್ಮಿಕರನ್ನು ಕಾಯಂ ಮಾಡಿ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲಿಯೇ ಉಳಿಸಲಾಯಿತು. ಇದು ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿ ಎಂದು ಅವರು ದೂರಿದರು.

ಸಂಘದ ಅಧ್ಯಕ್ಷ ನಾಗಣ್ಣ ಗೌಡ, ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಗಂಗಣ್ಣ, ತಾಲೂಕು ಅಧ್ಯಕ್ಷ ಮುಬಾರಕ್, ಪೌರ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಛಲಪತಿ, ಪೌರ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ರಾಮನಗರ ತಾಲೂಕು ವಾಟರ್ ಬೋರ್ಡ್ ನೌಕರರ ಸಂಘದ ಅಧ್ಯಕ್ಷ ಸುರೇಶ್, ಚನ್ನಪಟ್ಟಣ ವಾಟರ್ ಬೋರ್ಡ್ ನೌಕರರ ಸಂಘದ ಅಧ್ಯಕ್ಷ ಮುನಿರಾಜು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮುಷ್ಕರದಲ್ಲಿ ಪಾಲ್ಗೊಂಡರು. ಬಹುಜನ ಸಮಾಜ ಪಾರ್ಟಿ ಸೇರಿದಂತೆ ವಿವಿಧ ಪಕ್ಷ– ಸಂಘಟನೆಗಳ ಮುಖಂಡರೂ ಮುಷ್ಕರಕ್ಕೆ ಬೆಂಬಲ ಸೂಚಿಸಿ ಭಾಗಿ ಆದರು.

ಮುಷ್ಕರ ವಾಪಸ್‌

ರಾಮನಗರ: ಸರ್ಕಾರದ ಮಟ್ಟದಲ್ಲಿ ಚರ್ಚೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಸುತ್ತಿದ್ದ ಹೊರಗುತ್ತಿಗೆ ನೌಕರರ ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ ಎಂದು ಸಂಘದ ಪ್ರಕಟಣೆಯು ತಿಳಿಸಿದೆ.

ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುವುದಾಗಿ ಭರವಸೆ ನೀಡಿದೆ. ಆದಾಗ್ಯೂ ಸರ್ಕಾರವನ್ನು ಎಚ್ಚರಿಸಲು ಫೆ. 11ರಿಂದ ರಾಮನಗರ ಜಿಲ್ಲೆಯಿಂದ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪ್ರಕಟಣೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT