ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಿಜೋಫ್ರೇನಿಯಾ ಲಕ್ಷಣವಿದ್ದರೆ ತಜ್ಞರನ್ನು ಸಂಪರ್ಕಿಸಿ

ಮಾಟ ಮಂತ್ರಗಳ ಮೊರೆ ಹೋಗಿ ಬದುಕನ್ನೇ ಹಾಳು ಮಾಡಿಕೊಳ್ಳದಿರಿ
Last Updated 27 ಮೇ 2019, 13:23 IST
ಅಕ್ಷರ ಗಾತ್ರ

ರಾಮನಗರ : ಸ್ಕಿಜೋಫ್ರೇನಿಯಾ ಲಕ್ಷಣ ಕಂಡು ಬಂದರೆ ತಕ್ಷಣ ಮನೋರೋಗ ತಜ್ಞರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಮಾನಸಿಕ ಕಾರ್ಯಕ್ರಮಾಧಿಕಾರಿ ಡಾ.ಸಿ. ಮಂಜುನಾಥ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ಇಲ್ಲಿನ ಕೆಂಗಲ್ ಹನುಮಂತಯ್ಯ ಅಭಿವೃದ್ಧಿ ಭವನದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ರೋಗದಿಂದ ಬಳಲುತ್ತಿರುವವರು ತಪ್ಪು ಕಲ್ಪನೆಗಳಿಗೆ ಒಳಗಾಗಿ, ಚಿಕಿತ್ಸೆ ಪಡೆಯದೇ ದೆವ್ವ, ಭೂತ, ಹಿಂದಿನ ಜನ್ಮದ ಕರ್ಮಫಲ, ಪಾಪ ಎನ್ನುತ್ತ ಕಾಲ ಕಳೆಯುತ್ತಾರೆ. ಮಾಟ ಮಂತ್ರಗಳ ಮೊರೆ ಹೋಗಿ ತಮ್ಮ ಬದುಕನ್ನೇ ಮಾಡಿಕೊಳ್ಳುತ್ತಾರೆ. ಸ್ಕಿಜೋಫ್ರೇನಿಯಾ ಲಕ್ಷಣ ಕಂಡು ಬಂದರೆ ತಕ್ಷಣ ಮನೋರೋಗ ತಜ್ಞರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಇದು ತಾರುಣ್ಯಾವಸ್ಥೆಯಲ್ಲಿ ಕಂಡು ಬರುವ ಮಾನಸಿಕ ರೋಗವಾಗಿದೆ. 15 ರಿಂದ 35 ವಯೋಮಾನದವರಲ್ಲಿ ಕಂಡು ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೇ 25 ರಷ್ಟು ಜನ ಈ ರೋಗಕ್ಕೆ ಸಿಲುಕುತ್ತಿದ್ದಾರೆ ಎಂದು ಅವರು ಹೇಳಿದರು.

ಮನೋ ಸಾಮಾಜಿಕ ಕಾರ್ಯಕರ್ತ ಡಾ. ಆದರ್ಶ ಮಾತನಾಡಿ, ಅನುವಂಶೀಯತೆ, ಪರಿಸರದ ಅಂಶಗಳು, ಗಾಂಜಾ, ಅಫೀಮು ಸೇವನೆಯಿಂದಲೂ ಈ ಕಾಯಿಲೆ ಬರುತ್ತದೆ. ಈ ರೋಗವು ರೋಗಿಯ ವ್ಯಕ್ತಿತ್ವವನ್ನು ಹಂತ ಹಂತವಾಗಿ ಕೆಡಿಸುತ್ತ ಹೋಗಿ ವ್ಯಕ್ತಿಯ ಭಾವನೆ, ವರ್ತನೆ ಮತ್ತು ನಡವಳಿಕೆಯಲ್ಲಿ ಬದಲಾವಣೆಯನ್ನು ಉಂಟು ಮಾಡುತ್ತದೆ ತಿಳಿಸಿದರು.

ವ್ಯಕ್ತಿಯು ಎಕಾಂತದಲ್ಲಿ ಕುಳಿತು ಸುಮ್ಮನೆ ಅಳುವುದು, ನಗುವುದು, ಭಾವನೆಗಳೇ ಇಲ್ಲದ ಹಾಗೆ ವರ್ತಿಸುವುದು, ಕಾಲ್ಪನಿಕ ಲೋಕದಲ್ಲಿ ಬದುಕುವುದು, ಅಸಂಬದ್ಧವಾದ ಪದಗಳನ್ನು ಬಳಸುವುದು, ಆತ್ಮಹತ್ಯೆಯಂತಹ ಕೃತ್ಯಗಳನ್ನು ಮಾಡುವುದು, ಇತರರನ್ನು ಕೊಲ್ಲಲು ಪ್ರಯತ್ನಿಸುವಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಲಕ್ಷಣಗಳು ಕಂಡು ಬಂದಲ್ಲಿ ಮೂಢನಂಬಿಕೆಗೆ ಒಳಗಾಗದೆ, ಮನೋವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಸ್ನಾತಕೋತ್ತರ ಕೇಂದ್ರದ ಅಧೀಕ್ಷಕ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT