ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ಹೆಚ್ಚಿದ ಬೇಡಿಕೆ: ಸಂಸದ ಡಿ.ಕೆ ಸುರೇಶ್‌

Last Updated 12 ಆಗಸ್ಟ್ 2019, 13:23 IST
ಅಕ್ಷರ ಗಾತ್ರ

ಕನಕಪುರ: ‘ನಗರದ ವಸತಿರಹಿತರಿಗಾಗಿ ಉಚಿತವಾಗಿ ನಗರಸಭೆಯಿಂದ 2,800 ನಿವೇಶನಗಳನ್ನು ನೀಡಿದ್ದರೂ ಇನ್ನು ಕೆಲವರಿಗೆ ಮನೆಗಳ ಬೇಡಿಕೆಯಿದೆ’ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ನಗರದಲ್ಲಿನ ಹಳೇ ನಗರಸಭೆ ಕಚೇರಿ ಮುಂಭಾಗ ಸೋಮವಾರ ನಡೆದ 24, 25, 26ನೇ ವಾರ್ಡ್‌ಗಳ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿ, ‘ನಾವು ಉಚಿತವಾಗಿ ನಿವೇಶನ ನೀಡುತ್ತೇವೆಂದಾಗ ಕೆಲವರು ಉದಾಸೀನ ಮಾಡಿದರು. ಕೆಲವರು ಸರಿಯಾದ ದಾಖಲೆಗಳನ್ನು ಕೊಟ್ಟಿರಲಿಲ್ಲ. ಆ ಕಾರಣದಿಂದ ಕೆಲವರಿಗೆ ನಿವೇಶನಗಳು ಸಿಕ್ಕಿಲ್ಲ’ ಎಂದರು.

‘ನಗರದ ಬಿಜಿಎಸ್‌ ಬಡಾವಣೆಯಲ್ಲಿ 2,800 ನಿವೇಶನಗಳನ್ನು ‌ಬಡವರಿಗೆ ನೀಡಿದ್ದು ಅದರಲ್ಲಿ ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ. ಈಗಾಗಲೇ 1,800 ಮನೆಗಳನ್ನು ನಿರ್ಮಾಣ ಮಾಡಲಾಗಿದೆ.ನಿವೇಶನ ಹಂಚಿಕೆ ಮಾಡಿರುವ 2 ಎಕರೆ ಜಾಗವು ತಕರಾರಿನಲ್ಲಿದೆ. ಅದನ್ನು ಶೀಘ್ರವೇ ಪರಿಹರಿಸಲಾಗುವುದು. ಈಗಾಗಲೇ 300 ಜನಕ್ಕೆ ಪೂರ್ಣಗೊಂಡಿರುವ ಮನೆಗಳನ್ನು ಕೊಟ್ಟಿದ್ದು ಅವರು ಅಲ್ಲಿ ವಾಸ ಮಾಡುತ್ತಿದ್ದಾರೆ’ ಎಂದರು.

‘ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಭೀಕರ ಮಳೆಯಿಂದ ಅಲ್ಲಿನ ಜನರ ಬದುಕು ಅಸ್ತವ್ಯಸ್ತವಾಗಿದೆ. ಆದರೂ ನಮ್ಮಲ್ಲಿ ಮಳೆಯಾಗಿಲ್ಲ. ಇಲ್ಲಿ ನೀರಿನ ಸಮಸ್ಯೆಯಿದ್ದು ಅದನ್ನು ಪರಿಹರಿಸುವ ಕೆಲಸ ಮಾಡಲಾಗುವುದು.ಬೆಂಗಳೂರು ನಗರ ಸೇರಿದಂತೆ ಬೇರೆ ತಾಲ್ಲೂಕಿನ ನಗರಗಳನ್ನು ನೋಡಿ, ಅವೆಲ್ಲದಕ್ಕಿಂತ ನಮ್ಮ ಕನಕಪುರ ಪಟ್ಟಣ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದೇವೆ. ಆದರೂ ಕೆಲವರು ನಾವು ಮಾಡುವ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿನ ಎಲ್ಲ ಕೆರೆಗಳು ಮೂಲ ಸ್ವರೂಪ ಕಳೆದುಕೊಂಡಿವೆ. ಇಲ್ಲಿ ಕೆರೆಯೂ ಇಲ್ಲ, ನೀರೂ ಇಲ್ಲ. ಕೆರೆಯಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ದೇವಾಲಯವನ್ನು ತೆರವುಗೊಳಿಸಲು ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಅಂತಹದಕ್ಕೆ ಅವಕಾಶ ಕೊಡಬಾರದು’ ಎಂದು ಹೇಳಿದರು.

‘ನಗರದಲ್ಲಿ ಇನ್‌ಫೊಸಿಸ್ ಫೌಂಡೇಷನ್‌ ವತಿಯಿಂದ ₹ 36 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಯಸಂದ್ರ ಬಳಿಯ ಮೆಡಿಕಲ್‌ ಕಾಲೇಜು ನಿರ್ಮಾಣದ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪ್ರಾರಂಭವಾಗಲಿದೆ’ ಎಂದರು.

‘ಮುಂದೆ ನೀರಿನ ದೊಡ್ಡ ಸಮಸ್ಯೆ ತಲೆದೋರಲಿದೆ. ಮನೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಮಳೆ ನೀರು ಸಂಗ್ರಹಿಸಬೇಕು. ಭೂಮಿಯಲ್ಲಿ ನೀರು ಇಂಗಲು ಇಂಗು ಗುಂಡಿಯನ್ನು ನಿರ್ಮಾಣ ಮಾಡಬೇಕಿದೆ’ ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ, ತಹಶೀಲ್ದಾರ್‌ ಎಂ.ಆನಂದಯ್ಯ, ನಗರಸಭೆ ಆಯುಕ್ಕೆ ವಿ.ಕೆ.ರಮಾಮಣಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಕೃಷ್ಣಮೂರ್ತಿ, ಕಾಂಗ್ರೆಸ್‌ ಮುಖಂಡರಾದ ಕೆ.ಎನ್‌.ದಿಲೀಪ್‌, ಹೇಮರಾಜು, ಶಿವಣ್ಣ, ನಾಗೇಶ್‌ ಸೇರಿದಂತೆ ಮೂರು ವಾರ್ಡ್‌ನ ಕಾಂಗ್ರೆಸ್‌ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಾರ್ವಜನಿಕರು ಕುಂದು ಕೊರತೆಗಳ ಅರ್ಜಿಯನ್ನು ಸಂಸದರಿಗೆ ನೀಡಿದರು. ಕೆಲವರು ಸಮಸ್ಯೆಗಳನ್ನು ಹೇಳಿಕೊಂಡರು. ಸಂಸದರು ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳು ಮತ್ತು ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT