ಮಂಗಳವಾರ, ಆಗಸ್ಟ್ 20, 2019
21 °C

ನಿರಂತರ ಕಲಿಕೆ, ಪರಿಶ್ರಮ ಅವಶ್ಯಕ

Published:
Updated:
Prajavani

ಚನ್ನಪಟ್ಟಣ: ‘ನಿರಂತರವಾದ ಕಲಿಕೆ, ವೈಯಕ್ತಿಕ ಶ್ರದ್ಧೆ ಹಾಗೂ ಪರಿಶ್ರಮದಿಂದ ಮಾತ್ರ ನಮ್ಮ ಬದುಕು ಸಾರ್ಥಕತೆ ಪಡೆಯುತ್ತದೆ’ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ತಿಳಿಸಿದರು.

ತಾಲ್ಲೂಕಿನ ಕೆಂಗಲ್ ನ ಕುವೆಂಪು ಪ್ರಥಮ ದರ್ಜೆ ಕಾಲೇಜಿನಲ್ಲಿ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಡೆದ ರಾಜ್ಯ ಮಟ್ಟದ 15ನೇ ವರ್ಷದ ಮೂರು ದಿನಗಳ ಕನ್ನಡ ಕಾವ್ಯ ಸಂಸ್ಕೃತಿ ಶಿಬಿರದಲ್ಲಿ ಕನ್ನಡ ಕಾವ್ಯ ವಿಮರ್ಶೆ ವಿಚಾರವಾಗಿ ಉಪನ್ಯಾಸ ನೀಡಿದರು.

‘ಪ್ರಸ್ತುತ ಕಾಲಮಾನಕ್ಕೆ ಅವಶ್ಯಕವಾಗಿ ಜ್ಞಾನ ಕೌಶಲವನ್ನು ನಾವು ಪಡೆಯದಿದ್ದರೆ ಅದು ಬಹುದೊಡ್ಡ ಪ್ರಮಾದವಾಗುತ್ತದೆ. ಓದಿನ ತಿಳುವಳಿಕೆ ಜೊತೆಗೆ ಅತ್ಯವಶ್ಯಕವಾಗಿ ಭಾಷಾ ಸಾಹಿತ್ಯ ಪರಿಜ್ಞಾನ ಹೊಂದಬೇಕು. ನಿತ್ಯವೂ ಹೊಸತನವನ್ನು ಹುಡುಕುವ ಜಾಣ್ಮೆ ನಮ್ಮದಾಗಬೇಕು’ ಎಂದರು.

‘ಕಲಿಕೆ ಎಂಬುದು ನಿತ್ಯ ಕಾಯಕವಾಗಬೇಕು. ಕಾವ್ಯಕ್ಕೆ ವಸ್ತುವಿನ ಹಂಗಿಲ್ಲ. ವಸ್ತು ವೈವಿಧ್ಯತೆ ಗೊತ್ತಿರಬೇಕು. ಸತ್ಯದ ದಾರಿ ಕಣ್ತೆರೆದು ನೋಡಿದಂತಿರಬೇಕು. ಕಾವ್ಯಕ್ಕೆ ಇರುವ ವಿಸ್ತಾರ ಬಹುದೊಡ್ಡದು’ ಎಂದು ವಿವರಿಸಿದರು.

ಕನ್ನಡ ಪ್ರಾಧ್ಯಾಪಕ ಡಾ.ಕೆ. ಮಧುಸೂದನಾಚಾರ್ಯ ಜೋಷಿ ಮಾತನಾಡಿ, ‘ಕಾವ್ಯ ಮಾತ್ರ ಗೆಳೆತನದ ಒಬ್ಬ ಶಿಕ್ಷಕನಿದ್ದಂತೆ. ಕಾವ್ಯದಿಂದ ಅಮಂಗಳ ನಿವಾರಣೆಯಾಗುತ್ತದೆ. ಕವಿಯು ಸತ್ಯವಾದಿ, ಪಕ್ಷಪಾತಿ, ಸಕಾರಾತ್ಮಕ ಹಿತವನ್ನು ನೀಡಬೇಕು’ ಎಂದರು.

‘ಕವಿಯಾದವರಿಗೆ ಪ್ರಸಕ್ತ ವಿಷಯಗಳ ಸಮಗ್ರ ಓದು ಅಗತ್ಯ. ಅದರಿಂದ ಸಿಗುವ ಒಳನೋಟ ಬಹುಮುಖ್ಯ. ವಿಚಾರದ ಬೆನ್ನತ್ತಿದರೆ ಯಶಸ್ಸು ಖಂಡಿತ ದೊರಕುತ್ತದೆ. ಮಹಿಳಾ ಬರಹಗಾರ್ತಿಯರು ಸಾಹಿತ್ಯ ಕ್ಷೇತ್ರ ಪ್ರವೇಶ ಮಾಡುವ ಅವಶ್ಯಕತೆ ಇದೆ’ ಎಂದು ಸಲಹೆ ನೀಡಿದರು.

ಭಾರತ್ ವಿಕಾಸ್ ಪರಿಷದ್ ಅಧ್ಯಕ್ಷ ವಸಂತಕುಮಾರ್, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ. ಶಿವಮಾದು, ಉದ್ಯಮಿ ಬಿ.ಸಿ. ನಾಗರಾಜ್, ಟ್ರಸ್ಟ್ ಅಧ್ಯಕ್ಷ ಎಸ್. ರಾಮಲಿಂಗೇಶ್ವರ್, ಮುಖಂಡ ವಿ.ಸಿ. ಚಂದ್ರೇಗೌಡ ಭಾಗವಹಿಸಿದ್ದರು.

Post Comments (+)