ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್‌ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಲಿ: ಗುತ್ತಿಗೆದಾರರ ಒತ್ತಾಯ

ಶೇ 40ರಷ್ಟು ಕಮಿಷನ್ ಕೊಡದೇ ಕೆಲಸ ನಡೆಯದು
Last Updated 16 ಏಪ್ರಿಲ್ 2022, 4:40 IST
ಅಕ್ಷರ ಗಾತ್ರ

ರಾಮನಗರ: ‘ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಅವರು ನಿರ್ವಹಿಸಿದ ಕಾಮಗಾರಿಯ ಹಣ ಬಿಡುಗಡೆಯ ಜೊತೆಗೆ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ರಾಮನಗರ ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್. ಬೈರೇಗೌಡ ಆಗ್ರಹಿಸಿದರು.

‘ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಮೊದಲ ಆರೋಪಿ ಆಗಿದ್ದಾರೆ. ಇಲ್ಲಿವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಸರ್ಕಾರ ಯಾರ ಒತ್ತಡಕ್ಕೂ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಂತೋಷ್ ₹ 4 ಕೋಟಿ ಮೊತ್ತದ ಕಾಮಗಾರಿ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಿ, ಗುಣಮಟ್ಟವನ್ನು ಪರೀಕ್ಷಿಸಲಿ. ಸರ್ಕಾರ ಮಾನವೀಯ ನೆಲಗಟ್ಟಿನಲ್ಲಿ ನೆರವಿಗೆ ಬರಬೇಕು’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಶೇ 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದರು. ಆದರೀಗ ಬಿಜೆಪಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿದೆ. ಗುತ್ತಿಗೆದಾರರು ಕೆಲಸ ಮಾಡಲಾಗದ ಸ್ಥಿತಿ ಬಂದಿದ್ದು, ಗುತ್ತಿಗೆ ಕೆಲಸ ನಿಲ್ಲಿಸಬಾರದೆಂಬ ಕಾರಣದಿಂದ ಸಾಲ ಮಾಡಿ ಕಲಸ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿಯೇ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ದೂರಿದರು.

‘ಸರ್ಕಾರ ಲಂಚಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಆಗುವುದಿಲ್ಲ. ಆದರೆ, ಸಾಧ್ಯವಾದಷ್ಟು ಆತ್ಮಹತ್ಯೆ , ಕೊಲೆಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ಟೆಂಡರ್ ಪ್ರಕ್ರಿಯೆಲ್ಲಿ ಮೂಗು ತೂರಿಸುವುದರಿಂದ ಅರ್ಹ ಗುತ್ತಿಗೆದಾರನಿಗೆ ಕೆಲಸ ಸಿಗುತ್ತಿಲ್ಲ. ಕಾಮಗಾರಿ ಪಡೆಯಲು ಮುಂದಾದರೆ ಮೊದಲೇ ಗುತ್ತಿಗೆದಾರನೊಂದಿಗೆ ಒಪ್ಪಂದ ಆಗಿರುತ್ತದೆ. ಇನ್ನು ಸಚಿವರು, ಶಾಸಕರು ಕೆಲಸ ಮಾಡಿಸಿಕೊಡುವುದಿಲ್ಲ. ಯಾರೇ ಅರ್ಹರಾಗಿದ್ದರು ಗುತ್ತಿಗೆ ಪಡೆಯಲು ಆಗುವುದಿಲ್ಲ. ಆದ್ದರಿಂದ ರಾಜಕಾರಣಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಮೂಗು ತೂರಿಸದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಇತ್ತೀಚಿನ ದಿನಗಳಲ್ಲಿ ರಾಮನಗರದಲ್ಲಿ ಹೊರಗಡೆಯವರು ಕಾಮಗಾರಿ ಗುತ್ತಿಗೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಟೆಂಡರ್ ಮೊತ್ತಕ್ಕಿಂತ ಹೆಚ್ಚಿನ (ಶೇ 15-20) ಪರ್ಸೆಂಟೇಜ್‌ ಕೊಡುತ್ತಾರೆ. ಆ ನಂತರ ಶೇ 10ರಷ್ಟು ಎಲ್‌ಒಸಿ ಹಾಗೂ ಶೇ 10ರಷ್ಟು ಅಧಿಕಾರಿಗಳಿಗೆ ಹೋಗುತ್ತದೆ. ಈ ಹಂತದಲ್ಲಿ ಲಂಚ ನೀಡದಿದ್ದರೆ ಕಡತ ವಿಲೇವಾರಿ ಆಗುವುದಿಲ್ಲ’ ಎಂದು
ದೂರಿದರು.

ಈಗ ಕೆಲಸ ಮಾಡದಿದ್ದರೆ ಮುಂದೆ ಕೆಲಸಗಳು ಸಿಗುವುದಿಲ್ಲ. ಹೀಗಾಗಿ ಗುತ್ತಿಗೆದಾರರು ಶೇ 40ರಷ್ಟು ಲಂಚ ನೀಡಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಹೊಸದಾಗಿ ಎಂಜಿನಿಯರಿಂಗ್ ಮುಗಿಸಿ ಗುತ್ತಿಗೆ ಪರವಾನಗಿ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಅವರೆಲ್ಲರೂ ಗುತ್ತಿಗೆದಾರರಾಗದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಯಾರೇ ಗುತ್ತಿಗೆದಾರರಾಗಲಿ ಟೆಂಡರ್ ಆಗಿ ಕಾರ್ಯಾದೇಶ ಪಡೆಯದೆ ಕಾಮಗಾರಿ ಮಾಡಬಾರದು ಎಂದು ಭೈರೇಗೌಡ ಮತ್ತು ಜಗದೀಶ್ ಮನವಿ ಮಾಡಿದರು.

ಸಂಘದ ಖಜಾಂಚಿ ಎನ್. ನಾಗರಾಜಯ್ಯ, ಉಪಾಧ್ಯಕ್ಷ ಜಿ.ಎಲ್ .ಆಂಜನೇಯ, ನಿರ್ದೇಶಕ ಎಲ್. ಉಮಾಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT