ಮಾಗಡಿ: ಪರಿಶಿಷ್ಟ ಜಾತಿಯವರನ್ನು ಬಿಟ್ಟರೆ ಅತಿ ಹೆಚ್ಚು ಲಿಂಗಾಯಿತರು ಅನ್ಯ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮೈಸೂರಿನ ಶಿವರಾತ್ರೇಶ್ವರ ಧಾರ್ಮಿಕ ದತ್ತಿ ಜೆಎಸ್ಎಸ್ ಮಹಾವಿದ್ಯಾಪೀಠ ತಾಲ್ಲೂಕಿನ ಚಕ್ರಬಾವಿ ಮರಳುಸಿದ್ದೇಶ್ವರ ಮಠದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಸ್ಮರಣಾರ್ಥ ಮಂಗಳವಾರ ವಟುಗಳಿಗೆ ಹಮ್ಮಿಕೊಂಡಿದ್ದ ಲಿಂಗಧಾರಣೆ ನೆರವೇರಿಸಿ ಅವರು ಮಾತನಾಡಿದರು.
ಮತಾಂತರಕ್ಕೆ ಬಲಿಯಾಗುತ್ತಿರುವವರಲ್ಲಿ ಲಿಂಗಾಯಿತರೇ ಹೆಚ್ಚು ಎಂದು ಹೇಳಲು ಬೇಸರವಾಗುತ್ತಿದೆ. ಪೋಷಕರು ಮಕ್ಕಳಿಗೆ ಲಿಂಗಾಯತ ಧರ್ಮದ ತಳಹದಿ ಬಗ್ಗೆ ತಿಳಿ ಹೇಳದಿರುವುದೇ ಇದಕ್ಕೆ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.
‘ಎದೆಯ ಮೇಲೆ ಲಿಂಗ, ಹಣೆಯ ಮೇಲೆ ವಿಭೂತಿ ಹಚ್ಚಿ ಲಿಂಗ ಪೂಜೆ ಮಾಡು’ ಎಂದು ತಮ್ಮ ಮಕ್ಕಳಿಗೆ ಹೇಳಬೇಕಾದ ಪೋಷಕರು ಪ್ರತಿ ಶನಿವಾರ ಶನಿಮಾತ್ಮ ದೇವಸ್ಥಾನಕ್ಕೆ ಹೋಗು ಎಂದು ಹೇಳುತ್ತಾರೆ. ಮಕ್ಕಳಿಗೆ ನಮ್ಮ ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆ ಕೊಡದಿರುವುದು ಮತಾಂತರಕ್ಕೆ ಕಾರಣವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ವೀರಶೈವ ಧರ್ಮವು ಲಿಂಗ ಸಂಸ್ಕಾರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಿದೆ. ಸ್ವಯಂ ಶಿವನಾಗು ಎಂದು ಹೇಳುವ ಏಕೈಕ ಧರ್ಮ ಲಿಂಗಾಯಿತ ಧರ್ಮ. ಮಾದೇಶ್ವರ, ಸಿದ್ದಲಿಂಗೇಶ್ವರ, ವೀರಭದ್ರ ಎದೆಯ ಮೇಲೆ ಲಿಂಗಧಾರಣೆ ಮಾಡಿದ ಪರಿಣಾಮ ಅವರನ್ನು ನಾವು ಈಗ ಪೂಜೆ ಮಾಡುತ್ತಿದ್ದೇವೆ. ಲಿಂಗಧಾರಣೆಗೆ ಮಹತ್ವವನ್ನು ಇದು ತೋರಿಸುತ್ತದೆ’ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಲಿಂಗಾಯಿತ ಧರ್ಮ ಜಾಗೃತಿ ಮಾಡಬೇಕು ಎಂದು ಸಿದ್ದಲಿಂಗೇಶ್ವರ ಸ್ವಾಮಿಗಳು 701 ವಿರಕ್ತರ ಜತೆ ಪಟ್ಟಣಕ್ಕೆ ಪಂಚ ರಾತ್ರಿ, ಗ್ರಾಮಕ್ಕೆ ಏಕ ರಾತ್ರಿ ಸಂಕಲ್ಪ ದೊಂದಿಗೆ ಹಳ್ಳಿ, ಹಳ್ಳಿಗೆ ಹೋಗಿ ಲಿಂಗ ಸಂಸ್ಕಾರ ಕೊಡುತ್ತಾ ಹೋದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ಯಾಸಿಗಳು ನೀಡಬೇಕಾದ ನಿಜವಾದ ಕಾಯಕವನ್ನು ಮಾಡುತ್ತಿದ್ದಾರೆ. ವೀರಶೈವ, ಲಿಂಗಾಯತ ಮಠಗಳು ಶಿಕ್ಷಣ ಕ್ರಾಂತಿ ಮಾಡಿದ್ದು ಈಗ ಧರ್ಮ ಜಾಗೃತಿ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು.
ಚಕ್ರಬಾವಿ ಮರಳುಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಲಿಂಗಾಯತ ಎದೆಯ ಮೇಲೆ ಲಿಂಗಧಾರಣೆ ಮಾಡಿಕೊಳ್ಳಬೇಕು.ನಮ್ಮ ಧರ್ಮದ ಆಚರಣೆ, ಸಂಸ್ಕಾರವನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕಿವಿಮಾತು ಹೇಳಿದರು.
ಸೂತ್ತೂರು ಮಠದ ಪಂಚಾಕ್ಷರಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ನಿರ್ದೇಶಕ ಪಟೇಲ್ ಜಗದೀಶ್, ಕೆರೆ ಬೀದಿ ಸಿದ್ದಲಿಂಗಪ್ಪ, ಹಾಲಶೆಟ್ಟಿಹಳ್ಳಿ ಶಿವಪ್ರಸಾದ್, ಚಕ್ರಬಾವಿ ರಾಜಣ್ಣ, ಸಿ.ಮಹೇಶ್, ದೇವರಾಜ್, ಕೆಇಬಿ ಮನು, ವಿಶ್ವ, ಮಹೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.