ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಬಂಧನಕ್ಕೆ ಸಜ್ಜಾಗಿದ್ದ ಪೊಲೀಸರು!

ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
Last Updated 14 ಜನವರಿ 2022, 7:47 IST
ಅಕ್ಷರ ಗಾತ್ರ

ರಾಮನಗರ: ಶತಾಯಗತಾಯ ರಾಮನಗರದಲ್ಲಿಯೇ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ತಡೆಯಬೇಕು ಎಂದು ರಾಜ್ಯ ಸರ್ಕಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಖಡಕ್‌ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ರಾಮನಗರದ ಎಸ್‌.ಪಿ ಕಚೇರಿಯಲ್ಲಿ ಸಭೆ ನಡೆಸಿದ ಅಧಿಕಾರಿಗಳು, ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಜಿಲ್ಲಾ ಕೇಂದ್ರಕ್ಕೆ ಕರೆಯಿಸಿಕೊಂಡಿದ್ದರು.

ಕಾಂಗ್ರೆಸ್ ಕಚೇರಿಯಿಂದ ನೂರು ಮೀಟರ್ ದೂರದಲ್ಲಿ ಇರುವ ಐಜೂರು ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಜೋಡಿಸಿದ ಪೊಲೀಸರು, ಜಲಫಿರಂಗಿ, ಅಶ್ರುವಾಯು ಸಿಡಿಸುವ ವಾಹನಗಳನ್ನೂ ತಂದು ನಿಲ್ಲಿಸಿದರು. ಡಿಐಜಿ ಲೋಕೇಶ್‌ಕುಮಾರ್ ಹಾಗೂ ರಾಮನಗರ ಎಸ್‌.ಪಿ ಗಿರೀಶ್‌ ಕಾಂಗ್ರೆಸ್ ಕಚೇರಿಗೆ ಧಾವಿಸಿ, ಪಾದಯಾತ್ರೆಯನ್ನು ತತ್‌ಕ್ಷಣದಿಂದಲೇ ಕೈ ಬಿಡಬೇಕು. ಇಲ್ಲವಾದರೆ ತಮ್ಮೆಲ್ಲರ ಬಂಧನ ಅನಿವಾರ್ಯ ಎಂಬ ಎಚ್ಚರಿಕೆ ನೀಡಿ ತೆರಳಿದ್ದರು.

ಕಾಂಗ್ರೆಸ್ ಕಾರ್ಯಕರ್ತರ ಸಾಗರ: ಸುತ್ತಲಿನ ಜಿಲ್ಲೆಗಳಿಂದ ರಾಮನಗರಕ್ಕೆ ಬರುವ ದಾರಿಗಳನ್ನು ಬಂದ್ ಮಾಡಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಪಾದಯಾತ್ರೆಗೆ ಬರದಂತೆ ತಡೆಯೊಡ್ಡಲಾಯಿತು. ಹೀಗಿದ್ದೂ 3–4 ಸಾವಿರ ಮಂದಿ ಕಾಂಗ್ರೆಸ್ ಕಚೇರಿಯ ಸುತ್ತಮುತ್ತ ಜಮಾಯಿಸಿದ್ದರು. ಮಂಡ್ಯದಿಂದ ಪಂಚೆ–ಶರ್ಟ್‌ ತೊಟ್ಟು ಜನರು ಬಂದಿದ್ದರು. ಪಕ್ಷದ ನಾಯಕರ ಪರ ಘೋಷಣೆಗಳನ್ನು ಕೂಗುತ್ತಾ ಮುಂದಿನ ಅಣತಿಗೆ ಕಾಯುತ್ತ ನಿಂತಿದ್ದರು.

ಗುರುವಾರ ರಾಮನಗರದಿಂದ ಬಿಡದಿಯವರೆಗೆ ಪಾದಯಾತ್ರೆ ನಡೆಯಬೇಕಿತ್ತು. ಮಧ್ಯಾಹ್ನ ಮಾಯಗಾನಹಳ್ಳಿ ಬಳಿ 10 ಸಾವಿರದಷ್ಟು ಮಂದಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನಡಿಗೆ ಬಗ್ಗೆ ಅನಿಶ್ಚಿತತೆ ಇದ್ದ ಕಾರಣ ಬಿಡದಿಯಲ್ಲಿ ರಾತ್ರಿ ಊಟಕ್ಕೆ ಸಿದ್ಧತೆ ಮಾಡುವುದು ಬೇಡ ಎಂದು ಡಿ.ಕೆ. ಸುರೇಶ್‌ ಕಾರ್ಯಕರ್ತರಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT