ಮಾಗಡಿ: ‘ಕೊರೊನಾ ಬಡವರನ್ನೇ ಹೆಚ್ಚಾಗಿ ಬಲಿ ಪಡೆದಿದೆ. ಈ ಸೋಂಕು ತಡೆಗೆ ಎಲ್ಲರೂ ಜಾಗ್ರತೆವಹಿಸಬೇಕು’ ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಹುಳ್ಳೆನಹಳ್ಳಿಯಲ್ಲಿ ಎ. ಮಂಜು ಚಾರಿಟಬಲ್ ಟ್ರಸ್ಟ್, ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ನಡೆದ ಮೆಗಾ ಹೆಲ್ತ್ ಕ್ಯಾಂಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೋಗಗಳು ಕಾಣಿಸಿಕೊಂಡ ಕೂಡಲೇ ವೈದ್ಯರ ಸೇವೆ ಪಡೆಯಲು ಹಳ್ಳಿಗಾಡಿನ ಜನತೆ ಮುಂದಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಆರೋಗ್ಯ ಮತ್ತು ಶಿಕ್ಷಣದಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದರು.
ಕೊರೊನಾ ಸೋಂಕು ಕಾಣಿಸಿಕೊಂಡ ಕೂಡಲೇ ಬಡವರಿಗೆ ಸೂಕ್ತ ಚಿಕಿತ್ಸೆ, ಆಮ್ಲಜನಕದ ಸಿಲಿಂಡರ್, ಇತರೇ ಸವಲತ್ತು ಸಿಗದೆ ತಡವಾಯಿತು. ಬಡವರು ಬಲಿಯಾದರು. ಇಂದಿಗೂ ಸಹ ಬಡತನ ರೇಖೆಗಿಂತ ಕೆಳಗಿರುವ ಬಹುಪಾಲು ಜನರಿಗೆ ಇರುವ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಲು ಆಗುತ್ತಿಲ್ಲ. ಔಷಧೋಪಚಾರ ಕಷ್ಟವಾಗಿದೆ ಎಂದು ವಿಷಾದಿಸಿದರು.
‘ಗ್ರಾಮೀಣ ಜನತೆಯ ಆರೋಗ್ಯ ಸುಧಾರಣೆಗೆ ತಾಲ್ಲೂಕಿನಾದ್ಯಂತ ಉಚಿತ ಆರೋಗ್ಯ ಶಿಬಿರ ನಡೆಸಿ, ಜನಾರೋಗ್ಯ ಕಾಪಾಡುವ ಉದ್ದೇಶವಿದೆ. ತಾಲ್ಲೂಕಿನ ಕೆರೆಗಳಿಗೆ 2 ವರ್ಷದೊಳಗೆ ಹೇಮಾವತಿ ನದಿ ನೀರು ಹರಿಸಿ ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.
‘ಜೆಡಿಎಸ್ ಕಾರ್ಯಕರ್ತರು ಮತ್ತು ತಾಲ್ಲೂಕಿನ ಮತದಾರರ ಹಿತರಕ್ಷಣೆ, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಂದು ಮನೆಗೂ ಒಂದಾದರು ಸರ್ಕಾರಿ ಸವಲತ್ತು ತಲುಪಿಸಿ ಬಡವರ ಮನೆಯಲ್ಲಿ ಬೆಳಕು ಮೂಡಿಸಲು ನಿಮ್ಮೆಲ್ಲರ ಸಹಕಾರ, ಬೆಂಬಲ ಬೇಡುತ್ತೇನೆ’ ಎಂದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಾಮಣ್ಣ, ಜೆಡಿಎಸ್ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಆರೋಗ್ಯ ಶಿಬಿರದ ವ್ಯವಸ್ಥಾಪಕ ತಾವರೆಕೆರೆ ಜಗದೀಶ್, ಶಫಿ, ಹುಳ್ಳೆನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್, ಸದಸ್ಯ ನಿಂಗೇಗೌಡ, ತಿಪ್ಪಸಂದ್ರ ಗ್ರಾ.ಪಂ. ಉಪಾಧ್ಯಕ್ಷ ರವಿ, ಸದಸ್ಯ ಪ್ರಕಾಶ್ ವಿಶ್ವಕರ್ಮ, ಮಾಜಿ ಅಧ್ಯಕ್ಷರಾದ ಬಲರಾಮ್, ಅರವಿಂದ್, ಜೆಡಿಎಸ್ ಮುಖಂಡರಾದ ಬಗಿನಗೆರೆ ರಾಮಣ್ಣ, ಹೇಮಗಿರಿಪಾಳ್ಯದ ಉಮೇಶ್, ಭಾರತಿ, ಪ್ರಸನ್ನ, ತಮ್ಮಣ್ಣಗೌಡ, ಹನುಮೇಗೌಡ, ಮಂಜಣ್ಣ, ಸಪ್ತಗಿರಿ ಆಸ್ಪತ್ರೆ ಮುಖ್ಯಸ್ಥ ಡಾ.ಚಂಪಾಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.