ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ವಲಸಿಗರೊಂದಿಗೆ ಹಳ್ಳಿಗೆ ಕಾಲಿಟ್ಟ ಸೋಂಕು; ಪರೀಕ್ಷೆಗೆ ಜನರ ಹಿಂದೇಟು

ಕೋವಿಡ್ ಲಸಿಕೆ ಅಭಾವ: ವೈದ್ಯರದ್ದೇ ಕೊರತೆ!
Last Updated 28 ಮೇ 2021, 19:31 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಈಗ ದೊಡ್ಡ ನಗರಗಳಿಂದ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಇರುವುದರಿಂದ ಕೋವಿಡ್‌ ಪೀಡಿತರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳೇನು, ಚಿಕಿತ್ಸೆಗೆ ಇರುವ ಕೊರತೆಗಳೇನು ಎಂಬ ವಸ್ತುಸ್ಥಿತಿಯ ಚಿತ್ರಣ ನೀಡಲು ಪ್ರಜಾವಾಣಿ ಸ್ಥಳಕ್ಕೆ ಭೇಟಿ ನೀಡಿ ಸರಣಿ ವರದಿಗಳನ್ನು ನೀಡುತ್ತಿದೆ.

***

ರಾಮನಗರ: ಬ್ಯಾಲಕೆರೆ ಎಂಬ ಆ ಪುಟ್ಟ ಗ್ರಾಮದ ಮನೆಗಳ ಮುಂದೆ ನಿಂತ ಗ್ರಾಮ ಪಂಚಾಯ್ತಿ ಸಿಬ್ಬಂದಿ, ‘ದಯಮಾಡಿ ಕೋವಿಡ್ ಪರೀಕ್ಷೆಗೆ ಬನ್ನಿ’ ಎಂದು ಗೋಗರೆಯುತ್ತಿದ್ದರು. ಅವರ ಮನವಿಗೆ ಓಗೊಟ್ಟು ಅರ್ಧದಷ್ಟು ಮಂದಿ ಹೊರಬಂದರೆ, ಇನ್ನರ್ಧ ಮಂದಿ ಭಯದಿಂದ ಬಾಗಿಲು ಹಾಕಿಕೊಂಡು ಒಳಗೇ ಅವಿತಿದ್ದರು.

‘ನಿನ್ನೆಯಷ್ಟೇ ನಡೆದ ರ್‍ಯಾಪಿಡ್ ಪರೀಕ್ಷೆಯಲ್ಲಿ ಗ್ರಾಮದ 50ರಲ್ಲಿ 15 ಮಂದಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ಹೀಗಾಗಿ, ಆರೋಗ್ಯ ಇಲಾಖೆಯವರು ಇಂದು ಎಚ್ಚೆತ್ತು ಎಲ್ಲರ ಪರೀಕ್ಷೆ ಮಾಡುತ್ತಿದ್ದಾರೆ. ಆದರೆ ಜನ ಮಾತ್ರ ಭಯದಿಂದ ಹೊರಗೆ ಬರುತ್ತಿಲ್ಲ. ನಮ್ಮೂರಿನ ಮೂಲನಿವಾಸಿಗಳು ಲಾಕ್‌ಡೌನ್‌ ಘೋಷಣೆ ಆಗುತ್ತಿದ್ದಂತೆಯೇ ಬೆಂಗಳೂರಿನಿಂದ ಇಲ್ಲಿಗೆ ಬರದೇ ಹೋಗಿದ್ದರೆ, ಮದುವೆ–ತಿಥಿ ಹೆಸರಲ್ಲಿ ಜನ ಗುಂಪಾಗಿ ಸೇರದೇ ಹೋಗಿದ್ದರೆ ಹೀಗೆ ಕೋವಿಡ್ ಮನೆಮಂದಿಗೆಲ್ಲ ಹರಡುತ್ತಿರಲಿಲ್ಲ’ ಎಂದು ಗ್ರಾಮದವರೇ ಆದ ಚಿಕ್ಕರಾಜು ‘ಪ್ರಜಾವಾಣಿ’ಯೊಂದಿಗೆ ಬೇಸರ ತೋಡಿಕೊಂಡರು.

ಇದು ಮಾಗಡಿ ತಾಲ್ಲೂಕಿನ ಬ್ಯಾಲಕೆರೆಯ ಪರಿಸ್ಥಿತಿ ಮಾತ್ರವಲ್ಲ, ಜಿಲ್ಲೆಯ ಬಹುತೇಕ ಹಳ್ಳಿಗಳದ್ದೂ ಇದೇ ಚಿತ್ರಣ. ಊರ ತುಂಬೆಲ್ಲ ಸೋಂಕು ಹಬ್ಬಿದೆ. ಪರೀಕ್ಷೆಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ಜೀವಭಯದಿಂದ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳತ್ತ ಹೆಜ್ಜೆ ಇಟ್ಟವರಿಗೆ ‘ದಾಸ್ತಾನು ಇಲ್ಲ’ ಎಂಬ ಬೋರ್ಡಿನ ದರ್ಶನವಾಗುತ್ತಿದೆ.

ಗವಿ ನಾಗಮಂಗಲ ಗ್ರಾಮದಲ್ಲಿ ಮನೆ ಮನೆ ಸಮೀಕ್ಷೆ ನಡೆಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು
ಗವಿ ನಾಗಮಂಗಲ ಗ್ರಾಮದಲ್ಲಿ ಮನೆ ಮನೆ ಸಮೀಕ್ಷೆ ನಡೆಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು

ರಾಮನಗರ ಜಿಲ್ಲೆಯಲ್ಲಿ ಒಟ್ಟು 823 ಗ್ರಾಮಗಳಿವೆ. ಇವುಗಳಲ್ಲಿ 107 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 4 ಸಮುದಾಯ ಆರೋಗ್ಯ ಕೇಂದ್ರಗಳು ಇವೆ. ಬಹುತೇಕ ಕಡೆ ಕೋವಿಡ್ ಲಸಿಕೆ ಕೊರತೆ ಇದೆ. ಮೊದಲೆಲ್ಲ ಅಂಗನವಾಡಿ, ಸಮುದಾಯ ಕೇಂದ್ರಗಳಲ್ಲಿ ಜನರನ್ನು ಗುಂಪುಗೂಡಿಸಿಕೊಂಡು ಲಸಿಕೆ ಕೊಟ್ಟಿದ್ದ ಆರೋಗ್ಯ ಇಲಾಖೆ ಸದ್ಯ ಲಸಿಕೆ ಭಂಡಾರ ಖಾಲಿಯಾಗುತ್ತಲೇ ಕೈ ಕಟ್ಟಿ ಕುಳಿತಿದೆ.

ಆಸ್ಪತ್ರೆಗೆ ಲಸಿಕೆ ಬಂದಾಗ ಕರೆ ಬರಲಿದ್ದು, ಆಗಷ್ಟೇ ಜನರು ಮುಂದಡಿ ಇಡಬೇಕಿದೆ.

ಕನಕಪುರ ತಾಲ್ಲೂಕಿನ ಚಿಕ್ಕಮುದವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 38 ಹಳ್ಳಿಗಳು ಬರುತ್ತವೆ. ಇಲ್ಲಿ 15,168 ವಯಸ್ಕರಿದ್ದಾರೆ. ಈ ಪೈಕಿ ಗುರುವಾರದ ಅಂತ್ಯಕ್ಕೆ 3,500 ಮಂದಿಗೆ ಮಾತ್ರ ಲಸಿಕೆ ಸಿಕ್ಕಿತ್ತು. ರಾಮನಗರ ತಾಲ್ಲೂಕಿನ ಲಕ್ಷ್ಮಿಪುರ ಆರೋಗ್ಯ ಕೇಂದ್ರದಲ್ಲಿ 2 ವಯಲ್‌ ಲಸಿಕೆಯಷ್ಟೇ ಇದ್ದು, ಅದಾಗಲೇ ಆಸ್ಪತ್ರೆ ಮುಂದೆ ಹತ್ತಾರು ಮಂದಿ ಕಾಯುತ್ತ ಕುಳಿತಿದ್ದರು. ಆಸ್ಪತ್ರೆಗಳಲ್ಲಿ ಎರಡನೇ ಡೋಸ್‌ ಬಾಕಿಯಿರುವವರಿಗೆ ಆದ್ಯತೆ ನೀಡಲಾಗುತ್ತಿತ್ತು.

ಸದ್ಯ ಹಳ್ಳಿಗಳಲ್ಲಿ ಬಸ್‌ ಸೇವೆ ಇಲ್ಲ. ಲಸಿಕೆ ಬೇಕೆಂದರೆ ನಾಲ್ಕಾರು ಕಿ.ಮೀ ದೂರದ ಆಸ್ಪತ್ರೆಗೆ ಬರಬೇಕು. ಆಟೊ ಮಾಡಿಕೊಂಡು ಬರಬೇಕು. ಹೀಗಾಗಿ ಬಂದಾಗ ಹಾಕಿಸಿಕೊಂಡರಾಯಿತು ಎಂದು ಅನೇಕರು ಇದರಿಂದ ದೂರವೇ ಉಳಿಯುತ್ತಿದ್ದಾರೆ.

ವೈದ್ಯರು ಗೈರು: ಜಿಲ್ಲೆಯ ಹತ್ತಾರು ಹಳ್ಳಿಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದ ಸಂದರ್ಭ ಬಹುತೇಕ ಪಿಎಚ್‌ಸಿಗಳಲ್ಲಿ ವೈದ್ಯರ ಗೈರು ಕಂಡುಬಂತು. ಇವುಗಳಲ್ಲಿ ತಜ್ಞ ವೈದ್ಯರನ್ನು ಕೋವಿಡ್ಸೋಂಕಿತರ ಚಿಕಿತ್ಸೆಗೆಂದು ನಿಯೋಜಿಸಿದ್ದು, ಶುಶ್ರೂಷಕರೇ ವೈದ್ಯರಂತೆ ಮದ್ದು ಕೊಡುತ್ತಿದ್ದರು. ಅನೇಕ ಕಡೆ ಉಪ ಕೇಂದ್ರಗಳಿಗೆ ಬೀಗ ಹಾಕಲಾಗಿತ್ತು. ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಹೊತ್ತು ಆಸ್ಪತ್ರೆಗೆ ಬಂದ ಬಾಣಂತಿಯರು ಮಗುವಿಗೆ ಕಾಲಕಾಲಕ್ಕೆ ಬೇಕಾದ ಲಸಿಕೆ ಕೊಡುವಂತೆ ಕೋರುತ್ತಿದ್ದರು. ಜಿಲ್ಲೆಯಲ್ಲಿ ಸದ್ಯ 107 ವೈದ್ಯರು ಹಾಗೂ 99 ಕಾಯಂ ಶುಶ್ರೂಷಕರು ಮಾತ್ರ ಇದ್ದಾರೆ.

ದೊರೆಯದ ಆಂಬುಲೆನ್ಸ್‌: ಜಿಲ್ಲೆಯಲ್ಲಿ ಸದ್ಯ 40ಕ್ಕೂ ಹೆಚ್ಚು ಆಂಬುಲೆನ್ಸ್‌ಗಳಿವೆ. ಇವುಗಳಲ್ಲಿ ಹೆಚ್ಚಿನವು ಜಿಲ್ಲೆ, ತಾಲ್ಲೂಕು ಕೇಂದ್ರಗಳಿಗೆ ಸೀಮಿತಗೊಂಡಿವೆ. ಹೆಚ್ಚಿನವುಗಳನ್ನು ಕೋವಿಡ್ ಸೋಂಕಿತರನ್ನು ಆರೈಕೆ ಕೇಂದ್ರಗಳಿಗೆ ಕರೆದೊಯ್ಯಲು, ಸೋಂಕಿನಿಂದ ಮೃತಪಟ್ಟವರ ಶವ ಸಾಗಿಸಲು ಬಳಸಲಾಗುತ್ತಿದೆ. ಹೀಗಾಗಿ ಗರ್ಭಿಣಿಯರು, ಇತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸದ್ಯ ಸೇವೆ ದೊರೆಯುತ್ತಿಲ್ಲ.

ಬ್ಯಾಲಕೆರೆಯಲ್ಲಿ ವ್ಯಕ್ತಿಯೊಬ್ಬರ ಗಂಟಲ ದ್ರವ ಮಾದರಿ ಸಂಗ್ರಹಿಸುತ್ತಿರುವ ವೈದ್ಯರು
ಬ್ಯಾಲಕೆರೆಯಲ್ಲಿ ವ್ಯಕ್ತಿಯೊಬ್ಬರ ಗಂಟಲ ದ್ರವ ಮಾದರಿ ಸಂಗ್ರಹಿಸುತ್ತಿರುವ ವೈದ್ಯರು

ತಾಲ್ಲೂಕು ಆಸ್ಪತ್ರೆಗಳು ಮೂಲಸೌಕರ್ಯಗಳಿಂದ ಬಳಲುತ್ತಿವೆ. ವೆಂಟಿಲೇಟರ್‌ಗಳು ಇದ್ದರೂ ಆಪರೇಟರ್‌ಗಳು ಇಲ್ಲ. ಕೆಲವೆಡೆ ಐಸಿಯು ಬೆಡ್‌ಗಳ ಕೊರತೆ ಇದೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರೇಟರ್‌ ಸಮಸ್ಯೆ ಬಗ್ಗೆ ಜನರು ದೂರುತ್ತಾರೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಕರ್ಯ, ಪಿಎಚ್‌ಸಿಗಳಲ್ಲಿ ಸಕಾಲಕ್ಕೆ ಲಸಿಕೆ, ಜನರ ಆರೋಗ್ಯ ಪರೀಕ್ಷೆ ನಡೆಯಬೇಕಿದೆ ಎಂಬುದು ಹಳ್ಳಿಗಳಲ್ಲಿ ಸುತ್ತಾಡುವಾಗ ಕಾಣಬರುವ ಚಿತ್ರಣ.

ಮನೆ ಮದ್ದಿಗೆ ಮೊರೆ
ಕೋವಿಡ್‌ ಪರೀಕ್ಷೆಗೆ ಒಳಗಾಗಲು ಜನರು ಹೆದರುತ್ತಿದ್ದಾರೆ. ಮನೆ–ಮನೆ ಸಮೀಕ್ಷೆ ನಡೆಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ಯತ್ನವೂ ನಡೆದಿದೆ.

‘ನಮ್ಮೂರಿನ ಯಾರೊಬ್ಬರೂ ಕೊರೊನಾ ಭಯದಿಂದ ಆಸ್ಪತ್ರೆ ಮೆಟ್ಟಿಲು ತುಳಿಯುತ್ತಿಲ್ಲ. ಜ್ವರ–ಕೆಮ್ಮು ಹೆಚ್ಚಾದರೆ ಕಷಾಯ, ವಿವಿಧ ಬೇರಿನ ರಸ ಕುಡಿಯುತ್ತಿದ್ದಾರೆ. ಬಹುತೇಕರು ಸ್ವಯಂ ಚಿಕಿತ್ಸಾ ವಿಧಾನ ಅನುಸರಿಸುತ್ತಿದ್ದಾರೆ’ ಎನ್ನುತ್ತಾರೆ ಮಟಕಯ್ಯನದೊಡ್ಡಿ ನಿವಾಸಿ ಮುತ್ತುರಾಜ್.

‘ಜನರ ಈ ಹಿಂಜರಿಕೆಯಿಂದಾಗಿಯೇ ಹಳ್ಳಿಗಳಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ’ ಎನ್ನುತ್ತಾರೆ ಮಾಗಡಿಯ ವೈದ್ಯಾಧಿಕಾರಿ ಡಾ.ಸತೀಶ್‌.

ಆರೈಕೆ ಕೇಂದ್ರಕ್ಕೆ ಬೇಕು ಸೌಲಭ್ಯ
ಗ್ರಾಮೀಣ ಜನರಿಗೆ ಜಿಲ್ಲಾಡಳಿತ ಹೋಮ್‌ ಐಸೋಲೇಷನ್‌ ಆಯ್ಕೆ ನೀಡಿತ್ತು. ಆದರೆ, ಅದರಿಂದಲೇ ಸೋಂಕು ಹೆಚ್ಚಾದ ಕಾರಣಕ್ಕೆ ಸದ್ಯ ಈ ಎಲ್ಲರನ್ನೂ ಕೋವಿಡ್‌ ಆರೈಕೆ ಕೇಂದ್ರಗಳಿಗೆ ರವಾನಿಸಲಾಗಿದೆ. ಸುಗ್ಗನಹಳ್ಳಿ, ಹುಲಿಕಟ್ಟೆಯಂತಹ ಕೆಲವೇ ಕೇಂದ್ರಗಳಲ್ಲಿ ಉತ್ತಮ ಸೇವೆ ಸಿಗುತ್ತಿದೆ. ಇನ್ನೂ ಕೆಲವೆಡೆ ಕಳಪೆ ಆಹಾರ, ಸ್ವಚ್ಛತೆ ಬಗ್ಗೆ ಸೋಂಕಿತರು ದೂರುತ್ತಾರೆ.

ಕುದೂರಿನ ಕ್ವಾರಂಟೈನ್‌ ಕೇಂದ್ರದ ಸೋಂಕಿತರ ಮೇಲೆ ಸ್ಥಳೀಯರ ಗುಂಪೊಂದು ಕಲ್ಲು ತೂರಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಈ ಕೇಂದ್ರಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಜೊತೆಗೆ ಪ್ರತಿ ಕೇಂದ್ರಕ್ಕೆ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ, ತುರ್ತು ಬಳಕೆಗೆ ಆಮ್ಲಜನಕ ಸಿಲಿಂಡರ್ ಮೊದಲಾದವುಗಳ ವ್ಯವಸ್ಥೆ ಮಾಡಬೇಕು ಎಂಬುದು ಸೋಂಕಿತರ ಸಂಬಂಧಿಕರ ಆಗ್ರಹವಾಗಿದೆ.

***

ಮದುವೆ–ತಿಥಿ ಮೊದಲಾದ ಕಾರ್ಯಗಳು ಮತ್ತು ಬೆಂಗಳೂರಿನಿಂದ ವಾಪಸ್‌ ಆದವರಿಂದ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿದೆ. ಗ್ರಾಮಗಳಲ್ಲಿ ಆರಂಭದಲ್ಲೇ ಸೋಂಕು ಪತ್ತೆ ನಡೆದಿದ್ದರೆ ಪರಿಸ್ಥಿತಿ ವಿಷಮಿಸುತ್ತಿರಲಿಲ್ಲ.
-ಚಿಕ್ಕರಾಜು, ಬ್ಯಾಲಕೆರೆ ನಿವಾಸಿ

***

ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿ ದಿನನಿತ್ಯ ಲಸಿಕೆ ನೀಡುತ್ತಿದ್ದು, ಸದ್ಯಕ್ಕೆ ಕೊರತೆ ಕಾಣುತ್ತಿಲ್ಲ.
-ಯತೀಶ್‌, ತಾಲ್ಲೂಕು ವೈದ್ಯಾಧಿಕಾರಿ, ಮಾಗಡಿ

***

ಮೊದಲೆಲ್ಲ ಜನರನ್ನು ಲಸಿಕೆ ಹಾಕಿಸುವಂತೆ ಗೋಗರೆಯುತ್ತಿದ್ದೆವು. ಈಗ ಜನರೇ ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯುತ್ತಿದ್ದಾರೆ. ಆದರೆ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಾರೆ.
-ಹೇಮಾ, ಆಶಾ ಕಾರ್ಯಕರ್ತೆ, ಲಕ್ಷ್ಮಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT