ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಲಾಕ್‌ಡೌನ್ ಸಂಕಟ, ಮಿಡಿದ ಹೃದಯಗಳು

ಸಂಘ-ಸಂಸ್ಥೆಗಳಿಂದ ಉದಾರ ನೆರವು; ಮಾನವೀಯತೆ ತೋರಿ ಮಾದರಿಯಾದ ಯುವಜನರು
Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ವೈರಸ್ ಭೀತಿಯಿಂದ ಉಂಟಾಗಿರುವ ಲಾಕ್‌ಡೌನ್‌ನಿಂದಾಗಿ ಅದೆಷ್ಟೋ ಮಂದಿ ಅಸಹಾಯಕರಾಗಿದ್ದಾರೆ. ಇಂತಹ ದುರ್ಬಲ ಹಾಗೂ ಅಸಂಘಟಿತ ವಲಯಗಳ ಜನರ ಕಷ್ಟಕ್ಕೆ ಸ್ಪಂದಿಸಲು ನೂರಾರು ಮಂದಿ ಮುಂದೆ ಬಂದಿದ್ದಾರೆ.

ಲಾಕ್‌ಡೌನ್‌ ಆದೇಶದಿಂದ ಊಟಕ್ಕೆ ಪರಿತಪಿಸುತ್ತಿರುವ ಅದೆಷ್ಟೋ ಮಂದಿಗೆ ಜಿಲ್ಲೆಯ ಯುವಜನರು ಆಹಾರ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಸದ್ದಿಲ್ಲದೇ ಸಮಾಜಮುಖಿ ಸೇವೆಗಳಲ್ಲಿ ನಿರತರಾಗಿದ್ದಾರೆ. ಇನ್ನೂ ಕೆಲವರು ಬಡಜನರಿಗೆ ಮನೆಮನೆಗೆ ದವಸ-ಧಾನ್ಯ ತಲುಪಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಜನರಿಗೆ ಬೇಕಾದ ಆಹಾರದ ಜತೆಗೆ ಔಷಧ, ಮಾಸ್ಕ್‌, ಸ್ಯಾನಿಟೈಸರ್‍ ಮೊದಲಾದವುಗಳ ವಿತರಣೆ ಕಾರ್ಯ ಮುಂದುವರಿದಿದೆ. ಜಿಲ್ಲಾಡಳಿತ, ನಗರಸಭೆ ಹಾಗೂ ಪುರಸಭೆಗಳು ನಿರಾಶ್ರಿತರ ಕೇಂದ್ರಗಳ ಸ್ಥಾಪನೆ ಮೂಲಕ ವಲಸೆ ಕಾರ್ಮಿಕರಿಗೆ ಆಶ್ರಯ ಒದಗಿಸಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಜಿಲ್ಲೆಯ ನೂರಾರು ಬಡವರ ಮನೆಗಳಿಗೆ ಆಹಾರ ಧಾನ್ಯದ ಪ್ಯಾಕೆಟ್‌ಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಅನೇಕ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಕಾರ್ಯಕರ್ತರೂ ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿದ್ದಾರೆ. ರಾಮನಗರದ ಕುಮಾರಣ್ಣ ಅಭಿಮಾನಿ ಬಳಗದವರು ಲಾಕ್‌ಡೌನ್ ಆದೇಶ ಜಾರಿಯಾದ ಬಳಿಕ ವೃದ್ಧಾಶ್ರಮ ಇರುಳಿಗ ಸಮುದಾಯದ ಜನರಿಗೆ ಆಹಾರ ಧಾನ್ಯ ಹಾಗೂ ಊಟ ವಿತರಣೆ ಮಾಡಿದ್ದಾರೆ.

ಅನೇಕ ಯುವಜನರು ತಮ್ಮ ಸಂಪಾದನೆ ಒಂದು ಭಾಗವನ್ನು ಬಡಜನರಿಗಾಗಿ ಮೀಸಲು ಇಟ್ಟಿದ್ದಾರೆ. ರಾಮನಗರದ ರವಿಕಿರಣ್ ಮತ್ತು ತಂಡದವರು ಬಡ ಜನರಿಗೆ ಊಟ ವಿತರಣೆ ಮಾಡುತ್ತಾ ಬಂದಿದ್ದಾರೆ. ವನವಾಸಿ ಕಲ್ಯಾಣ ಕರ್ನಾಟಕ ಸಮಿತಿ ಸದಸ್ಯರು ಜಿಲ್ಲೆಯಲ್ಲಿನ ಇರುಳಿಗ, ಸೋಲಿಗ, ಹಕ್ಕಿಪಿಕ್ಕಿ ಸಮುದಾಯಗಳಿಗೆ ಸೇರಿದ ಒಂದು ಸಾವಿರ ಕುಟುಂಬಗಳಿಗೆ ಅಗತ್ಯ ದಿನಸಿ ವಸ್ತುಗಳನ್ನು ನೀಡುತ್ತಿದ್ದಾರೆ. ಮಾಜಿ ಶಾಸಕ ಕೆ.ರಾಜು ರೇಷ್ಮೆ ಬೆಳೆಗಾರರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಹೀಗೆ ಇನ್ನೂ ಹತ್ತು ಹಲವು ಸಂಘಟನೆಗಳು, ಜನರು ತಮ್ಮ ಕೈಲಾದ ಸಹಾಯ ಹಸ್ತ ಚಾಚಿದ್ದಾರೆ.

ಜವಾಬ್ದಾರಿ ತೋರಿದ ಜನಪ್ರತಿನಿಧಿಗಳು: ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಕೊರೊನಾದಿಂದ ತೊಂದರೆಗೆ ಒಳಗಾಗುತ್ತಿರುವ ಜನರ ಸಂಕಷ್ಟಕ್ಕೆ ಸ್ಪಂದಿಸಿರುವುದು ಅಶಾದಾಯಕ ಬೆಳವಣಿಗೆ. ಎಚ್.ಡಿ.ಕುಮಾರಸ್ವಾಮಿ ಮತ್ತವರ ಬೆಂಬಲಿಗರು ಜಿಲ್ಲೆಯಲ್ಲಿ ಈಗಾಗಲೇ ‘ಜನತಾ ದಾಸೋಹ’ ಆರಂಭಿಸುವ ಮೂಲಕ ಹಸಿದವರಿಗೆ ಅನ್ನ ಹಾಕುವ ಸೇವೆ ಮಾಡುತ್ತಿದ್ದಾರೆ. ಜತೆಗೆ ಕುಮಾರಸ್ವಾಮಿ-ಅನಿತಾ ದಂಪತಿ ಜಿಲ್ಲೆಯ ಜನರಿಗಾಗಿ 5 ಸಾವಿರ ಮಾಸ್ಕ್‌, 1 ಸಾವಿರದಷ್ಟು ಸ್ಯಾನಿಟೈಸರ್‌ ನೀಡಿದ್ದಾರೆ.

ಜಿಲ್ಲೆಯ ನಾಲ್ಕೂ ಕಡೆ ತಲಾ ₹1ಲಕ್ಷ ವೆಚ್ಚದಲ್ಲಿ ಕೊರೊನಾ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಟನಲ್‌ಗಳನ್ನು ನಿರ್ಮಿಸಿದ್ದಾರೆ. ಕನಕಪುರ ಶಾಸಕ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಜೊತೆಗೂಡಿ ಡಿಕೆಎಸ್‌ ಚಾರಿಟಬಲ್‌ ಟ್ರಸ್ಟ್ ವತಿಯಿಂದ 17ಸಾವಿರ ಲೀಟರ್‌ನಷ್ಟು ಸ್ಯಾನಿಟೈಸರ್‍ ಹಾಗೂ 2ಲಕ್ಷದಷ್ಟು ಮಾಸ್ಕ್‌ ವಿತರಿಸಿದ್ದಾರೆ. ಶಾಸಕ ಎ.ಮಂಜುನಾಥ್ ಸಹ ನೊಂದವರ ನೆರವಿಗೆ ನಿಂತಿದ್ದಾರೆ.

ಸಂಘ-ಸಂಸ್ಥೆಗಳ ನೆರವು: ಕೈಗಾರಿಕಾ ಸಂಸ್ಥೆಗಳು ಈ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿವೆ. ಹಾರೋಹಳ್ಳಿ ಕೈಗಾರಿಕಾ ಸಂಘದಿಂದ ಈಚೆಗೆ ಜಿಲ್ಲಾ ಪಂಚಾಯಿತಿ ಮೂಲಕ ನೂರಾರು ಕುಟುಂಬಗಳಿಗೆ 15 ದಿನಕ್ಕೆ ಆಗುವಷ್ಟು ಆಹಾರ ಸಾಮಗ್ರಿ ವಿತರಿಸಲಾಗಿತ್ತು. ಬಿಡದಿ ಕೈಗಾರಿಕೆಗಳ ಸಂಘ ಸಹ ಮಂಗಳವಾರ ಜಿಲ್ಲಾಡಳಿತಕ್ಕೆ ತಲಾ 10ಕೆ.ಜಿ ಅಕ್ಕಿ, 3 ಕೆ.ಜಿ.ಯಷ್ಟು ಗೋಧಿ, ಜೊತೆಗೆ ಬೇಳೆ, ಎಣ್ಣೆ ಸಹಿತ ಅಗತ್ಯ ಸಾಮಗ್ರಿಗಳುಳ್ಳ 500 ಆಹಾರದ ಕಿಟ್‌ಗಳನ್ನು ಹಸ್ತಾಂತರಿಸಿದೆ. ಇದಲ್ಲದೆ 3 ಕ್ವಿಂಟಲ್‌ನಷ್ಟು ಅಕ್ಕಿ, 1 ಕ್ವಿಂಟಲ್‌ನಷ್ಟು ಗೋಧಿ ಹಿಟ್ಟು ಸಹಿತ ಆಹಾರ ಧಾನ್ಯಗಳನ್ನೂ ಬಡಜನರ ಆಹಾರ ವಿತರಣೆಗಾಗಿ ಬಳಸಿಕೊಳ್ಳಲು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT