ಮಂಗಳವಾರ, ಆಗಸ್ಟ್ 3, 2021
21 °C
ಸ್ವಚ್ಛತೆಗೆ ಆದ್ಯತೆ, ರೋಗಿಗಳ ವಿಂಗಡನೆಗೆ ಒತ್ತಾಯ

ರಾಮನಗರ: ಆಸ್ಪತ್ರೆಯಲ್ಲಿ ಅವ್ಯವಸ್ಥೆ, ಸೋಂಕಿತರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇಲ್ಲಿನ ಕಂದಾಯ ಭವನದಲ್ಲಿ ನಿರ್ಮಾಣವಾಗಿರುವ ಕೋವಿಡ್ ರೆಫರಲ್‌ ಆಸ್ಪತ್ರೆಯ ನಿರ್ವಹಣೆ ಬಗ್ಗೆ ರೋಗಿಗಳಿಂದ ಪದೇ ಪದೇ ದೂರುಗಳು ಕೇಳಿಬರುತ್ತಿದೆ. ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಎನ್ನುವುದು ಅವರ ಅಳಲು.

ಕಳೆದೆರಡು ವರ್ಷಗಳಿಂದ ಪಾಳುಬಿದ್ದಿದ್ದ ಕಂದಾಯ ಭವನವನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 80 ಹಾಸಿಗೆ ಸೌಲಭ್ಯದೊಂದಿಗೆ ಕಾರ್ಯಾರಂಭ ಮಾಡಿದ ಆಸ್ಪತ್ರೆಯು ಇದೀಗ ತನ್ನ ಸಾಮರ್ಥ್ಯವನ್ನು 200 ಹಾಸಿಗೆಗೆ ಹೆಚ್ಚಿಸಿಕೊಂಡಿದೆ. ಶನಿವಾರದ ವೇಳೆಗೆ ಇಲ್ಲಿ 155 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕಂದಾಯ ಭವನದ ಶೌಚಾಲಯಗಳು, ಸ್ನಾನಗೃಹಗಳನ್ನು ಸ್ವಚ್ಛಗೊಳಿಸಲು ಯಾರೊಬ್ಬರನ್ನೂ ನೇಮಿಸಿಲ್ಲ. ರೋಗಿಗಳೇ ಸ್ವಚ್ಛಗೊಳಿಸಿಕೊಳ್ಳುವಂತಹ ಪರಿಸ್ಥಿತಿ ಇದೆ ಎಂದು ಅಲ್ಲಿ ಚಿಕಿತ್ಸೆ ಪಡೆಯುವವರು ದೂರುತ್ತಾರೆ. ಇದರಿಂದ ರೋಗಿಗಳಲ್ಲೇ ಒಬ್ಬರಿಂದ ಒಬ್ಬರಿಗೆ ಮತ್ತೆ ಸೋಂಕು ಪಸರಿಸಬಹುದು. ಇದರಿಂದ ಗುಣಮುಖರಾಗುತ್ತಿರುವವರೂ ಕಾಯಿಲೆ ಬೀಳಬಹುದು ಎನ್ನುವುದು ಅವರ ಆತಂಕವಾಗಿದೆ. ಹೀಗಾಗಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಅವರು ಆಗ್ರಹಿಸುತ್ತಾರೆ.

"ಆಸ್ಪತ್ರೆಯಲ್ಲಿ ಮಹಿಳೆಯರ ಪಾಡು ಹೇಳುವಂತಿಲ್ಲ. ಋತುಚಕ್ರ ಮೊದಲಾದ ಕಾರಣಗಳಿಗೆ ನಿತ್ಯ ಸ್ನಾನ ಮಾಡಲೇಬೇಕಾಗುತ್ತದೆ. ಆದರೆ ಇಲ್ಲಿನ ಸ್ನಾನಗೃಹಗಳನ್ನು ನೋಡಿದರೆ ಸ್ನಾನಕ್ಕೆ ಮನಸ್ಸಾಗುವುದಿಲ್ಲ. ಇಂತಹ ಸಮಸ್ಯೆಗಳನ್ನು ಎದುರಿಸಿ ಉಳಿಯಲು ಕಿರಿಕಿರಿ ಆಗುತ್ತಿದೆ’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮಾಗಡಿಯ ಮಹಿಳೆಯೊಬ್ಬರು ಹೇಳುತ್ತಾರೆ.

ಸೋಂಕಿತರನ್ನು ವಿಂಗಡಿಸಿ: ಆಸ್ಪತ್ರೆಗೆ ಬರುವ ಸೋಂಕಿತರನ್ನು ವಿಂಗಡಿಸದೇ ಒಂದೇ ಜಾಗದಲ್ಲಿ ಬಿಡುತ್ತಿರುವುದಕ್ಕೂ ರೋಗಿಗಳು ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಆರೇಳು ದಿನ ಚಿಕಿತ್ಸೆ ಪಡೆದು ಇನ್ನೇನು ಗುಣಮುಖರಾಗಲಿರುವ ವ್ಯಕ್ತಿಯ ಪಕ್ಕದಲ್ಲೇ ಈಗಷ್ಟೇ ಚಿಕಿತ್ಸೆಗೆ ದಾಖಲಾದ ವ್ಯಕ್ತಿಗಳಿಗೆ ವಸತಿ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಚೇತರಿಕೆ ಹಂತದಲ್ಲಿ ಇರುವ ಸೋಂಕಿತರಿಗೂ ಮತ್ತೆ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂಬುದು ರೋಗಿಗಳ ಆತಂಕವಾಗಿದೆ.

ಆರೇಳು ತಿಂಗಳ ಮಗುವಿನಿಂದ ಹಿಡಿದು ಎಲ್ಲರಿಗೂ ಒಂದೇ ಕಡೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ. ಮುಖ್ಯವಾಗಿ ಸೋಂಕಿತರನ್ನು ಅವರ ಚೇತರಿಕೆಯ ಆಧಾರದ ಮೇಲೆ ವಿಂಗಡಿಸಿ ಪ್ರತ್ಯೇಕ ಕೋಣೆಗಳಲ್ಲಿ ಚಿಕಿತ್ಸೆ ನೀಡಬೇಕು. ಹೊಸತಾಗಿ ಬಂದವರನ್ನು ಒಂದೆರಡು ದಿನ ಪ್ರತ್ಯೇಕ ಕೋಣೆಗಳಲ್ಲಿ ಇರಿಸಬೇಕು. ಕಂದಾಯ ಭವನದಲ್ಲಿ ಇನ್ನೂ ಸಾಕಷ್ಟು ಜಾಗ ಉಳಿದಿದೆ. ಇದನ್ನು ಅದಕ್ಕಾಗಿ ಬಳಸಿಕೊಳ್ಳಬೇಕು ಎಂದು ರೋಗಿಗಳು ಆಗ್ರಹಿಸುತ್ತಾರೆ.

ರೋಗಿಗಳಿಗೆ ನೀಡುವ ಊಟದ ಗುಣಮಟ್ಟದ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ನಿತ್ಯ ಒಂದೇ ತರಹದ ಆಹಾರ ನೀಡಲಾಗುತ್ತಿದ್ದು, ಇದರಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ಅವರ ಮನವಿ.

ಜಿಲ್ಲಾಧಿಕಾರಿಗೆ ಪತ್ರ

ಆಸ್ಪತ್ರೆಯಲ್ಲಿನ ಮಹಿಳಾ ರೋಗಿಗಳು ಸೇರಿ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರಿಗೆ ಪತ್ರ ಬರೆದಿದ್ದು, ಅದನ್ನು ವಾಟ್ಸಪ್‌ ಮೂಲಕ ಜಿಲ್ಲಾಧಿಕಾರಿಗಳ ಮೊಬೈಲ್‌ಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ಹಾಗೂ ಬಾಣಂತಿಯರು ಇದ್ದಾರೆ. ಇಂತಹವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಕನಿಷ್ಠ ಇಂತಹವರಿಗೆ ಆಸ್ಪತ್ರೆಯೊಳಗೆ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಬೇಕು. ವಿಶೇಷವಾಗಿ ಮಹಿಳಾ ರೋಗಿಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ನರ್ಸ್‌‌ಗಳ ಸಂಖ್ಯೆ ಕಡಿಮೆ ಇದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಶೌಚಾಲಯ, ಸ್ನಾನಗೃಹ ಹಾಗೂ ಆಸ್ಪತ್ರೆಯ ಆವರಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೋಂಕಿತರು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು