ಬುಧವಾರ, ಮೇ 12, 2021
18 °C
ರಾಮನಗರ ಕೋವಿಡ್ ರೆಫರಲ್‌ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಸೌಕರ್ಯದ ಕೊರತೆ: ಸೋಂಕಿತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇಲ್ಲಿನ ಕಂದಾಯ ಭವನದಲ್ಲಿರುವ ಕೋವಿಡ್ ರೆಫರಲ್‌ ಆಸ್ಪತ್ರೆಯಲ್ಲಿ ಸ್ವಚ್ಛತೆ ಮತ್ತು ಮೂಲ ಸೌಕರ್ಯಗಳ ಕೊರತೆ ಖಂಡಿಸಿ ಕೋವಿಡ್ ಸೋಂಕಿತರು ಗುರುವಾರ ರಾತ್ರಿ ಆಸ್ಪತ್ರೆಯಿಂದ ಹೊರ ಬಂದು ಪ್ರತಿಭಟನೆ ನಡೆಸಿದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕೋವಿಡ್ ಸೋಂಕಿತರಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಸರಿಯಾದ ಆರೋಗ್ಯ ಸೇವೆ, ಗುಣಮಟ್ಟದ ಆಹಾರ ಸಿಗುತ್ತಿಲ್ಲ. ವೈದ್ಯರು ಬಂದು ತಪಾಸಣೆ ಮಾಡುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂದು ಸೋಂಕಿತರು ದೂರಿದರು. ಆಸ್ಪತ್ರೆಯಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ. ಅಲ್ಲಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಕಾಣಿಸುತ್ತವೆ. ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂದು ರೋಗಿಗಳು ಆರೋಪಿಸಿದರು.

ದಿನನಿತ್ಯ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಉಪಾಹಾರ ನೀಡಬೇಕು. ಇಲ್ಲಿನ ಸಿಬ್ಬಂದಿ ಕಾಫಿ, ಟೀ ಕೊಡುವ ಮನಸ್ಸಾದರೆ ಮಾತ್ರ ಕೊಡುತ್ತಾರೆ, ಇಲ್ಲದಿದ್ದರೆ ಇಲ್ಲ. ಮಧ್ಯಾಹ್ನ ನೀಡಿದ ಆಹಾರವನ್ನೇ ರಾತ್ರಿಯೂ ಪಾರ್ಸಲ್ ಮಾಡಿ ಕೊಡಲಾಗುತ್ತಿದೆ. ಬಿಸಿ ನೀರು, ಹಣ್ಣು ಹಂಪಲಿನ ವ್ಯವಸ್ಥೆ ಇಲ್ಲ. ದೇಹದ ಪೌಷ್ಠಿಕತೆಗೆ ಏನೊಂದು ಕ್ರಮವಿಲ್ಲ ಎಂದು ಸೋಂಕಿತರು ಆರೋಪಿಸಿದರು.

ಆಸ್ಪತ್ರೆಯಲ್ಲಿನ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ನಮಗೆ ಮನೆಗೆ ಕಳುಹಿಸಿಕೊಡಿ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತೇವೆ ಎಂದರು.

ಪ್ರತಿಭಟನೆ ಸ್ಥಳಕ್ಕೆ ಬಂದ ಪೊಲೀಸರು, ಸೋಂಕಿತರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯಲ್ಲಿರುವ ಸಮಸ್ಯೆ ಬಗೆಹರಿಯುವವರೆಗೂ ನಾವುಗಳು ಒಳಗೆ ಹೋಗುವುದಿಲ್ಲ. ಬೇಕಾದರೆ ನಮಗೆ ಮನೆಗೆ ಕಳುಹಿಸಿಬಿಡಿ ಎಂದು ಪಟ್ಟು ಹಿಡಿದರು.

ಅಂತಿಮವಾಗಿ ಕುಡಿಯುವ ನೀರು ಹಾಗೂ ಶೌಚಾಲಯ ಸ್ವಚ್ಛತೆಗೆ ವ್ಯವಸ್ಥೆ ಮಾಡಲಾಯಿತು. ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ ನಂತರ ರೋಗಿಗಳು ಆಸ್ಪತ್ರೆಗೆ ವಾಪಸ್‌ ಆದರು.

ನೋಡಲ್‌ ಅಧಿಕಾರಿ ನೇಮಕ
ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ಹಾಗೂ ಜಿ.ಪಂ. ಸಿಇಒ ಇಕ್ರಂ ಶುಕ್ರವಾರ ಕಂದಾಯ ಭವನದಲ್ಲಿರುವ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ನೀರಿನ ವ್ಯವಸ್ಥೆ, ಸ್ವಚ್ಛತೆ, ಔಷಧಿಯ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆಯನ್ನು ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಭಯ ಬೇಡ, ವೈದ್ಯರು ತಿಳಿಸುವ ರೀತಿ ಔಷಧಿಗಳನ್ನು ಪಡೆಯಿರಿ. ಶೀಘ್ರವಾಗಿ ಗುಣಮುಖರಾಗುತ್ತೀರಿ. ಚಿಕಿತ್ಸೆ ನೀಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ’ ಎಂದರು. ನಂತರ ವ್ಯದ್ಯರೊಂದಿಗೆ ಚರ್ಚಿಸಿ, ಯಾವುದೇ ರೀತಿ ತೊಂದರೆ ಇದ್ದಲ್ಲಿ ತಕ್ಷಣವೇ ಜಿಲ್ಲಾಡಳಿತದ ಗಮನಕ್ಕೆ ತನ್ನಿ ಎಂದರು. ಆರ್.ಸಿ.ಎಚ್ ಅಧಿಕಾರಿ ಡಾ ಪದ್ಮಾ, ಕೋವಿಡ್ ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.

ನೋಡಲ್‌ ಅಧಿಕಾರಿ ನೇಮಕ: ಕಂದಾಯ ಭವನದಲ್ಲಿ ನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಜನರೇಟರ್ ವ್ಯವಸ್ಥೆ, ಸಿಸಿ ಕ್ಯಾಮೆರಾ, ಶೌಚಾಲಯ ವ್ಯವಸ್ಥೆ ಸೇರಿದಂತೆ ವೈದ್ಯಕೀಯೇತರ ವ್ಯವಸ್ಥೆಗಳನ್ನು ನೋಡಿಕೊಳ್ಳಲು ನಿರ್ಮಿತಿ ಕೇಂದ್ರದ ಯೋಜನ ವ್ಯವಸ್ಥಾಪಕ ಗೋವಿಂದ್ ರಾಜು ಅವರನ್ನು ನೋಡಲ್ ಅಧಿಕಾರಿಯಾಗಿ ಮತ್ತು ನಗರಸಭೆ ಪೌರಾಯುಕ್ತ ನಂದ ಕುಮಾರ್ ಅವರನ್ನು‌ ಸಮನ್ವಯ ‌ಅಧಿಕಾರಿಯಾಗಿ ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.