ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರದ ಹೋಟೆಲ್‌, ರೆಸಾರ್ಟ್‌ ಮುಚ್ಚಿ! ನಕಲಿ ಆದೇಶ ನಂಬಿ ರಾಮನಗರ ಪೊಲೀಸರ ಫಜೀತಿ

Last Updated 8 ಜನವರಿ 2022, 1:43 IST
ಅಕ್ಷರ ಗಾತ್ರ

ರಾಮನಗರ: ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ಬಂದ ನಕಲಿ ಆದೇಶ ನಂಬಿಪೊಲೀಸರು ಕನಕಪುರ ತಾಲ್ಲೂಕಿನ ಹೋಟೆಲ್‌, ರೆಸ್ಟೋರೆಂಟ್‌, ರೆಸಾರ್ಟ್‌ಗಳನ್ನು ಮುಚ್ಚಿಸಲು ಮುಂದಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಬಳಿಕ ಎಚ್ಚೆತ್ತುಕೊಂಡ ಪೊಲೀಸರು ತಮ್ಮ ನೋಟಿಸ್‌ ಹಿಂಪಡೆದಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಹೆಸರಿನಲ್ಲಿ ಜ.5ರಂದು ಆದೇಶವೊಂದು ಜಾಲತಾಣದಲ್ಲಿ ಹರಿದಾಡಿತ್ತು. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೈವೇಟ್‌ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಆ್ಯಕ್ಟ್‌–2007ರ ಅನ್ವಯ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ರಾಜ್ಯದಲ್ಲಿನ ಎಲ್ಲಾ ಬಾರ್, ಪಬ್‌, ಹೋಟೆಲ್‌, ರೆಸ್ಟೋರಂಟ್‌ ಹಾಗೂ ರೆಸಾರ್ಟ್‌ಗಳನ್ನು ಮುಚ್ಚುವಂತೆ ಆದೇಶ
ದಲ್ಲಿ ತಿಳಿಸಲಾಗಿತ್ತು. ಇದನ್ನು ನಿಜ ಎಂದು ನಂಬಿದ ಪೊಲೀಸರು ಹೋಟೆಲ್‌, ರೆಸಾರ್ಟ್‌ಗಳಿಗೆ ನೋಟಿಸ್‌ ನೀಡಿ
ದ್ದಾರೆ. ವಾರಾಂತ್ಯದಲ್ಲಿ ಬಾಗಿಲು ಹಾಕುವಂತೆ ಗುರುವಾರ ನೋಟಿಸ್ ಅಂಟಿಸಿದ್ದಾರೆ.

ಬೆಚ್ಚಿಬಿದ್ದರು: ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಇದೇ ಭಾನುವಾರ ಕಾಂಗ್ರೆಸ್ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅವರಿಗಾಗಿ ತಾಲ್ಲೂಕಿನ ಬಹುತೇಕ ಹೋಟೆಲ್‌ ಹಾಗೂ ರೆಸಾರ್ಟ್‌ಗಳು ಈಗಾಗಲೇ ಬುಕ್‌ ಆಗಿವೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಉದ್ಯಮಿಗಳು ಈ ನೋಟಿಸ್‌ ನೋಡುತ್ತಲೇ ಬೆಚ್ಚಿ ಬಿದ್ದಿದ್ದಾರೆ. ಪಾದಯಾತ್ರೆ ಹತ್ತಿಕ್ಕಲು ಸರ್ಕಾರವೇ ಈ ಆದೇಶ ಹೊರಡಿಸಿದೆ ಎಂಬ ಆರೋಪಗಳೂ ಕೇಳಿಬಂದಿದೆ.

ರಾಜ್ಯ ಸರ್ಕಾರ, ಜಿಲ್ಲಾಡಳಿತ ಹೊರಡಿಸಿದ ವಾರಾಂತ್ಯ ಕರ್ಫ್ಯೂ ಆದೇಶದಲ್ಲಿ ಎಲ್ಲಿಯೂ ಹೋಟೆಲ್‌ ಇಲ್ಲವೇ ರೆಸಾರ್ಟ್‌ಗಳನ್ನು ಪೂರ್ಣ ಮುಚ್ಚುವ ಆದೇಶವೇ ಇಲ್ಲ. ಹೋಟೆಲ್‌ಗಳಲ್ಲಿ ಪಾರ್ಸಲ್‌ ಸೇವೆ ಹಾಗೂ ರೆಸಾರ್ಟ್‌ಗಳಲ್ಲಿ ಶೇ 50ರಷ್ಟು ಗ್ರಾಹಕರಿಗೆ ಸರ್ಕಾರವೇ ಅವಕಾಶ ನೀಡಿದೆ. ಹೀಗಿದ್ದೂ ನಕಲಿ ಆದೇಶದಿಂದಾದ ಗೊಂದಲದಿಂದ ವರ್ತಕರು ಆತಂಕಕ್ಕೀಡಾಗಿದ್ದು, ಪೊಲೀಸರಲ್ಲಿ ವಿಚಾರಿಸಲಾಗಿ ನಿಜಾಂಶ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ತಮ್ಮ ನೋಟಿಸ್ ಹಿಂಪಡೆದಿದ್ದು, ಅದಕ್ಕೆ ಸಂಬಂಧಿಸಿ ಕನಕಪುರದಲ್ಲಿ ಪ್ರಚಾರವನ್ನೂ ಮಾಡಿದ್ದಾರೆ.

ನಕಲಿ ಹೇಗೆ: ‘ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌’ ಎಂಬ ಹೆಸರಿನಲ್ಲಿ ನಕಲಿ ಆದೇಶ ಪ್ರಕಟಣೆಗೊಂಡು ಎಲ್ಲೆಡೆ ಪ್ರಸಾರ ಆಗಿದೆ. ಈ ಆದೇಶ 4ರಂದು ಪ್ರಕಟ ಆಗಿದ್ದು, ಅದಕ್ಕೆ ಅಧಿಕಾರಿ ಹೆಸರಿನಲ್ಲಿ 5ರಂದು ಸಹಿ ಮಾಡಲಾಗಿದೆ.

ಸರಿಪಡಿಸಿದ್ದೇವೆ: ‘ನಕಲಿ ಆದೇಶವನ್ನು ನಿಜವೆಂದು ನಂಬಿ ನಮ್ಮಲ್ಲಿನ ಕೆಲವು ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ. ರೆಸಾರ್ಟ್‌ಗಳಿಗೆ ನೋಟಿಸ್ ನೀಡಿ
ದ್ದನ್ನು ನನ್ನ ಗಮನಕ್ಕೂ ತಂದಿಲ್ಲ. ವಿಷಯ ತಿಳಿಯುತ್ತಲೇ ಸರಿಪಡಿಸಿದ್ದೇವೆ. ಕನಕಪುರದಲ್ಲಿ ಯಾವ ಹೋಟೆಲ್, ರೆಸಾರ್ಟ್‌ಗಳನ್ನು ಬಂದ್ ಮಾಡಿಸುವುದಿಲ್ಲ. ಕರ್ಫ್ಯೂ ನಿಯಮದಂತೆ ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಸ್ಪಷ್ಟನೆ

ವಾರಾಂತ್ಯ ಕರ್ಫ್ಯೂನಲ್ಲಿ ಹೋಟೆಲ್, ರೆಸಾರ್ಟ್, ಸಫಾರಿ ಚಟುವಟಿಕೆಗಳ ಸಂಬಂಧ ಪ್ರವಾಸೋದ್ಯಮ ಇಲಾಖೆಯು ಸ್ಪಷ್ಟನೆ ನೀಡಿದೆ.

ಕೊಠಡಿ ಇಲ್ಲವೇ ಸೇವೆಗಳನ್ನು ಕಾಯ್ದಿರಿಸಿದವರು ಅದರ ದಾಖಲೆಗಳೊಂದಿಗೆ ನಿಗದಿತ ಸ್ಥಳಕ್ಕೆ ಪ್ರಯಾಣಿಸಬಹುದಾಗಿದೆ. ಹೋಟೆಲ್‌, ರೆಸಾರ್ಟ್‌ ಒಳಗಿನ ಆತಿಥ್ಯಕ್ಕೆ ಯಾವುದೇ ನಿರ್ಬಂಧ ಇಲ್ಲ. ಮುಂಚೆಯೇ ಕಾಯ್ದಿರಿಸಿದ ಗ್ರಾಹಕರು ತಂಗಬಹುದು. ಅರಣ್ಯ ಪ್ರದೇಶಗಳಲ್ಲಿ ಕೋವಿಡ್ ನಿಯಮಾವಳಿ ಅನುಸರಿಸಿ ಸಫಾರಿ ಚಟುವಟಿಕೆಗಳನ್ನು ನಡೆಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT