ಶನಿವಾರ, ಜುಲೈ 31, 2021
24 °C
ಮಾಹಿತಿ ನೀಡುತ್ತಿದ್ದಂತೆ ಮೊಬೈಲ್ ಸ್ವಿಚ್‌ಆಫ್‌ l ಆರೋಗ್ಯ ಇಲಾಖೆ ಸಿಬ್ಬಂದಿ ಪೀಕಲಾಟ

ಸೋಂಕಿತರ ಪತ್ತೆಯೇ ತಲೆನೋವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕೋವಿಡ್‌ ಸೋಂಕಿನ ಬಗ್ಗೆ ಜನರು ಅನಗತ್ಯವಾಗಿ ಭಯಭೀತರಾಗಿದ್ದು, ಸೋಂಕು ದೃಢಪಡುತ್ತಲೇ ಕೈಗೆ ಸಿಗದೇ ಪರಾರಿ ಆಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ವಾರದ ಹಿಂದೆ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೊಳಪಟ್ಟಿದ್ದರು. ಈ ಸಂದರ್ಭ ತಮ್ಮ ಊರು ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು. ಎರಡು ದಿನಗಳ ನಂತರ ಅವರ ವರದಿ ಬಂದಿದ್ದು, ಪಾಸಿಟಿವ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತನ ಮೊಬೈಲ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಸೋಂಕಿತ, ಊರು ಬಿಟ್ಟು ಮಳವಳ್ಳಿ ಸಮೀಪದ ತನ್ನ ಹೆಂಡತಿ ಮನೆ ಸೇರಿದ್ದ.

ಇತ್ತ ಸೋಂಕಿತ ನೀಡಿದ್ದ ಮೊಬೈಲ್ ನಂಬರ್ ಆಧರಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ನಂಬರ್‌ ಆಧರಿಸಿ ಹುಡುಕಾಟ ನಡೆಸಿದಾಗ ಆತ ಚನ್ನಪಟ್ಟಣ ಅರಳಾಳುಸಂದ್ರದ ನಿವಾಸಿ ಎಂಬುದು ಪತ್ತೆ
ಯಾಯಿತು. ಆತನ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಸೋಂಕಿತ ಮಾತ್ರ ಅಲ್ಲಿರಲಿಲ್ಲ.

ಕಡೆಗೆ ಅಕ್ಕೂರು ಪೊಲೀಸರು ಸೋಂಕಿತನ ಮೊಬೈಲ್ ಲೋಕೇಶನ್‌ ಮಳವಳ್ಳಿ ಬಳಿ ಇರುವುದಾಗಿ ಗುರುತಿ
ಸಿದ್ದು, ಆತನ ಮಡದಿ ಮನೆಗೆ ತೆರಳಿ ಹುಡುಕಿದರೂ ಅಲ್ಲಿಯೂ ಆತ ಸಿಗಲಿಲ್ಲ. ಕಡೆಗೆ ಮನೆಯವರಿಂದ ಆತನ ಬೇರೊಂದು ನಂಬರ್‍ ಪಡೆದು ಆತನ ನೆರೆಹೊರೆಯವರಿಂದಲೇ ಕರೆ ಮಾಡಿಸಿದ್ದಾರೆ. ಆತ ಕರೆ ಸ್ವೀಕರಿಸಿದ ತರುವಾಯ ಬುದ್ಧಿವಾದ ಹೇಳಿದ್ದಾರೆ. ಕಡೆಗೂ ಸೋಂಕಿತ ಆಸ್ಪತ್ರೆ ಸೇರಿದ್ದಾನೆ. ಆದರೆ ಇಷ್ಟೆಲ್ಲ ನಡೆಯುವುದರಲ್ಲಿ ಎರಡು ದಿನವೇ ಕಳೆದಿದ್ದು ಇದರಿಂದಾಗಿ ಆತನ ಕುಟುಂಬದವರಿಗೆ ಸೋಂಕು ತಗುಲುವ ಆತಂಕದಲ್ಲಿ ಇದ್ದಾರೆ.

ಚನ್ನಪಟ್ಟಣ ನಗರದಲ್ಲೇ ಇಂತಹದ್ದೇ ಇನ್ನೊಂದು ಪ್ರಕರಣ ನಡೆದಿದೆ. ಪಾಸಿಟಿವ್‌ ವರದಿ ಬರುತ್ತಿದ್ದಂತೆ ಸೋಂಕಿತ ದೂರವಾಣಿ ಸಂಪರ್ಕ ಕಡಿದುಕೊಂಡಿದ್ದು, ಆತನ ಮೊಬೈಲ್ ಸಂಖ್ಯೆಗೆ ಸೇರಿದ ವಾಟ್ಸಪ್‌ ಪ್ರೊಫೈಲ್‌ ಫೋಟೊ ಹಿಡಿದು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಕಡೆಗೂ ಆತನ ಮನೆ ಹುಡುಕಿ ಕರೆತರುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು